ADVERTISEMENT

ನಾಗರಹೊಳೆ: ಆದಿವಾಸಿಗಳ ಪ್ರತಿಭಟನೆಗೆ ನಟ ಚೇತನ್ ಬೆಂಬಲ

ಮನವೊಲಿಕೆ ಕಾರ್ಯ ವಿಫಲ; ಹಾಡಿಯಲ್ಲೇ ಉಳಿದ ಜನ

​ಪ್ರಜಾವಾಣಿ ವಾರ್ತೆ
Published 6 ಮೇ 2025, 20:53 IST
Last Updated 6 ಮೇ 2025, 20:53 IST
ಆದಿವಾಸಿಗಳೊಂದಿಗೆ ಅಧಿಕಾರಿಗಳು ಮಂಗಳವಾರ ಮಾತುಕತೆ ನಡೆಸಿದರು
ಆದಿವಾಸಿಗಳೊಂದಿಗೆ ಅಧಿಕಾರಿಗಳು ಮಂಗಳವಾರ ಮಾತುಕತೆ ನಡೆಸಿದರು   

ಮಡಿಕೇರಿ: ಕೊಡಗು ಜಿಲ್ಲೆಯ ನಾಗರಹೊಳೆ ಅರಣ್ಯ ಪ್ರದೇಶದ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯನ್ನು ಪ್ರವೇಶಿಸಿರುವ ಜೇನುಕುರುಬ ಪಂಗಡಕ್ಕೆ ಸೇರಿದ 52 ಕುಟುಂಬಗಳ ಧರಣಿ ಮಂಗಳವಾರವೂ ಮುಂದುವರಿದಿದೆ. ನಟ ಚೇತನ್ ಭಾಗಿಯಾಗಿ ಬೆಂಬಲ ಸೂಚಿಸಿದರು.

ಅರಣ್ಯ ಹಕ್ಕು ಕಾಯ್ದೆ ಪ್ರಕಾರ ವೈಯಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕುಗಳಿಗಾಗಿ ಒತ್ತಾಯಿಸಿ ಸೋಮವಾರದಿಂದ ಹಾಡಿಯಲ್ಲಿ ಪ್ರತಿಭಟನೆ ಆರಂಭಿಸಿರುವ ಜನರನ್ನು ಮನವೊಲಿಸಲು ಅರಣ್ಯ ಅಧಿಕಾರಿಗಳು ಮಾಡಿದ ಪ್ರಯತ್ನ ವಿಫಲವಾಗಿದೆ.

ಈ ವೇಳೆ ಮಾತನಾಡಿದ ನಟ ಚೇತನ್, ‘ಕಳೆದ 30 ವರ್ಷಗಳ ಹಿಂದೆ ಒಕ್ಕಲೆಬ್ಬಿಸಿರುವ ಆದಿವಾಸಿಗಳಿಗೆ ಅವರ ಹಕ್ಕುಗಳನ್ನು ಕೊಡಿಸಲು ಕೊನೆಯವರೆಗೂ ಹೋರಾಟ ನಡೆಸುವೆ’ ಎಂದು ಭರವಸೆ ನೀಡಿದರು.

ADVERTISEMENT

‘ಇಡೀ ವ್ಯವಸ್ಥೆ ಆದಿವಾಸಿಗಳ ವಿರುದ್ಧ ಇದೆ’ ಎಂದು ಹರಿಹಾಯ್ದ ಅವರು, ‘ಆಳುವ ವ್ಯವಸ್ಥೆಯು ಹಣ, ರಾಜಕೀಯ, ಭೂಮಾಲೀಕರ ಪರವಾಗಿಯೇ ಇದೆ’ ಎಂದರು.

‘ಸಾವಿರಾರು ವರ್ಷಗಳ ಕಾಲ ಕಾಡಿನಲ್ಲೇ ನೆಲೆಸಿರುವ ಆದಿವಾಸಿಗಳೇ ನಿಜವಾದ ಪರಿಸರವಾದಿಗಳು. ಆದರೆ, ಅವರಿಗೆ ಜಾಗ ಕೊಡದೇ ಕಾಫಿ ಎಸ್ಟೇಟ್ ಮಾಲೀಕರಿಗೆ, ಶ್ರೀಮಂತರಿಗೆ ಜಾಗ ಕೊಡುತ್ತಿದ್ದಾರೆ. ಈ ಅನ್ಯಾಯದ ವ್ಯವಸ್ಥೆಯನ್ನು ವಿರೋಧಿಸಬೇಕಾಗಿದೆ’ ಎಂದು ಹೇಳಿದರು.

‘ಆದಿವಾಸಿಗಳು ನಮ್ಮ ಮೂಲಜನರು. 10 ಸಾವಿರ ವರ್ಷದಷ್ಟು ಮುಂಚೆ ನಾವೆಲ್ಲರೂ ಆದಿವಾಸಿಗಳೇ ಆಗಿದ್ದೆವು. ಆದಿವಾಸಿಗಳದ್ದೇ ಪ್ರತ್ಯೇಕ ಧರ್ಮವಿದೆ. ಆದಿವಾಸಿ ಸಂಸ್ಕೃತಿ ಬಿಟ್ಟು ಕೃಷಿ ಶುರು ಮಾಡಿದಾಗಲೇ ಅಸಮಾನತೆ ಆರಂಭವಾಯಿತು. ಆದಿವಾಸಿತನ ಉಳಿಸಿಕೊಂಡರೆ ಮಾತ್ರ ಉತ್ತಮ ಭಾರತ, ಉತ್ತಮ ಕರ್ನಾಟಕ ಸಾಧ್ಯ’ ಎಂದೂ ಪ್ರತಿಪಾದಿಸಿದರು.

ಒಳಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೇವಲ ಪರಿಶಿಷ್ಟ ಜಾತಿಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡದಲ್ಲೂ ಒಳಮೀಸಲಾತಿ ಬೇಕಿದೆ’ ಎಂದರು.

ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿಯ ಕಾರ್ಯದರ್ಶಿ ಶಿವು ಮಾತನಾಡಿ, ‘ಬಲವಂತವಾಗಿ ಒಕ್ಕಲೆಬ್ಬಿಸಿದ ನಂತರ ನಾವು ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸವಿದ್ದೆವು. ಈಗ ಮತ್ತೆ ನಮ್ಮ ಮೂಲಸ್ಥಾನಕ್ಕೆ ಮರಳಲಿದ್ದೇವೆ. ಕಾನೂನು ಪ್ರಕಾರ ನಮಗೆ ಸೌಲಭ್ಯಗಳನ್ನು ಕೊಡಬೇಕು’ ಎಂದು ಆಗ್ರಹಿಸಿದರು.

‘ಜಂಟಿ ಸರ್ವೆ ಕಾರ್ಯ 2024ರ ಅಕ್ಟೋಬರ್‌ನಲ್ಲೇ ಮುಗಿದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ನಕ್ಷೆಗೆ ಸಹಿ ಹಾಕುವ ವಿಷಯದಲ್ಲಿ ವಿಳಂಬ ಮಾಡುತ್ತಿದ್ದಾರೆ. ಇನ್ನು ನಮ್ಮ ಸಹನಾಶಕ್ತಿ ಮುಗಿದಿದೆ. ಹಾಗಾಗಿ, ನಾವು ನಮ್ಮ ಮೂಲಸ್ಥಾನ ಕಾಡಿನೊಳಗೆ ಬಂದು ಗುಡಿಸಲು ನಿರ್ಮಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.