ADVERTISEMENT

ನಾಪೋಕ್ಲು | ವಿದ್ಯುತ್ ಸಮಸ್ಯೆ: ಗ್ರಾಮೀಣ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 6:51 IST
Last Updated 25 ಜೂನ್ 2025, 6:51 IST
ನಾಪೋಕ್ಲು ಸಮೀಪದ ಕೂರುಳಿ- ಎಮ್ಮೆಮಾಡು ಮುಖ್ಯ ರಸ್ತೆಯಲ್ಲಿ ಈಚೆಗೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರವನ್ನು ಗ್ರಾಮಸ್ಥರು ಕತ್ತರಿಸುವ ಕೆಲಸದಲ್ಲಿ ನಿರತರಾಗಿರುವುದು
ನಾಪೋಕ್ಲು ಸಮೀಪದ ಕೂರುಳಿ- ಎಮ್ಮೆಮಾಡು ಮುಖ್ಯ ರಸ್ತೆಯಲ್ಲಿ ಈಚೆಗೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರವನ್ನು ಗ್ರಾಮಸ್ಥರು ಕತ್ತರಿಸುವ ಕೆಲಸದಲ್ಲಿ ನಿರತರಾಗಿರುವುದು   

ನಾಪೋಕ್ಲು: ಮಳೆ-ಗಾಳಿಯ ಬಿರುಸು ಹೆಚ್ಚಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಮರೀಚಿಕೆಯಾಗಿದೆ. ಬಲ್ಲಮಾವಟಿ, ಪೇರೂರು, ಎಮ್ಮೆಮಾಡು ಸೇರಿದಂತೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬಹುತೇಕ ದಿನಗಳಲ್ಲಿ ವಿದ್ಯುತ್ ಇಲ್ಲದೇ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ನಿರ್ವಹಣೆ ನೆಪವೊಡ್ಡಿ ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆಯೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲ ಆರಂಭವಾಗುತ್ತಿದಂತೆ ವಿದ್ಯುತ್‌ ಇಲ್ಲದೇ ಕತ್ತಲು ಆವರಿಸುತ್ತಿದೆ. ಕೆಲವು ಭಾಗಗಳಲ್ಲಿ ದಿನದ ಕೆಲವು ಅವಧಿ ಮಾತ್ರ ವಿದ್ಯುತ್ ಇದ್ದರೆ, ಬಹುತೇಕ ಅವಧಿಯಲ್ಲಿ ಕಣ್ಣುಮುಚ್ಚಾಲೆ ಆಟ ಸಾಮಾನ್ಯವಾಗಿದೆ.

ಪ್ರಸಕ್ತ ವರ್ಷ ಮೇ ತಿಂಗಳಿನಲ್ಲಿಯೇ ಮಳೆಯ ಅಬ್ಬರದಿಂದಾಗಿ ವಿದ್ಯುತ್ ಮರೀಚಿಕೆಯಾಗಿದೆ. ಸೆಸ್ಕ್ ಇಲಾಖೆಯ ಬೆರಳೆಣಿಕೆಯ ಸಿಬ್ಬಂದಿ ಸತತ ಶ್ರಮವಹಿಸಿದರೂ, ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ಬುಡಕುಸಿದು, ರೆಂಬೆ ಮುರಿದು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿವೆ. ಇದರಿಂದಾಗಿ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಪ್ರತಿವರ್ಷದಂತೆ ಪರಿಹಾರ ಸಿಗದೇ ಗ್ರಾಹಕರು ಬಳಲುವಂತಾಗಿದೆ.

ADVERTISEMENT

‘ಹದಿನೈದು ದಿನದಿಂದ ಬಲ್ಲಮಾವಟಿ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ. ನಾಪೋಕ್ಲು ಸೆಸ್ಕ್ ಕಚೇರಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಳ್ಳಿಗಳಲ್ಲಿ ವಯಸ್ಸಾಗಿ ಆನಾರೋಗ್ಯದಿಂದ ಬಳಲುವವರೂ ಇದ್ದಾರೆ. ಪೇರೂರು, ಬಲ್ಲಮಾವಟಿ, ನೆಲಜಿಯಂತ ಗುಡ್ಡಗಾಡು ಪ್ರದೇಶದಲ್ಲಿ ಒಂದೆಡೆ ಕಾಡಾನೆಗಳ ಹಾವಳಿ. ಜನರು ಹೆದರಿ ಹಗಲು ಮನೆಯಿಂದ ಹೋರಬರುವುದು ಕಷ್ಟ. ರಾತ್ರಿಯೂ ಕತ್ತಲ್ಲಲ್ಲಿ ದಿನದೂಡುವ ಅನಿವಾರ್ಯ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಗಮನಹರಿಸಬೇಕು ಎಂದು ಬಲ್ಲಮಾವಟಿಯ ಮೂವೇರ ರೇಖಾ ಪ್ರಕಾಶ್ ಒತ್ತಾಯಿಸಿದ್ದಾರೆ.

ಮುಂಗಾರು ಪ್ರವೇಶಕ್ಕೂ ಮೊದಲೇ ಸೆಸ್ಕ್ ಇಲಾಖೆ ಸಿಬ್ಬಂದಿ ರಸ್ತೆಬದಿಗಳಲ್ಲಿ ಮತ್ತು ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಹೊಂದಿಕೊಂಡಿರುವ ಮರಗಳನ್ನು ತೆರವುಗೊಳಿಸಬೇಕು. ಹಳೆಯ ಕಂಬ ಬದಲಿಸಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಪೂರ್ವ ಸಿದ್ಧತೆ ನಡೆಸಬೇಕು. ಆದರೆ ನಾಪೋಕ್ಲು ವಿಭಾಗದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸಣ್ಣ ಮಳೆಗೆ ವಿದ್ಯುತ್ ಕಡಿತಗೊಂಡು ಜನರು ವಿದ್ಯುತ್ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ನಾಗರಿಕರ ಆರೋಪ.

ನಾಲ್ಕುನಾಡಿಗೆ ವಿದ್ಯುತ್ ಸಮಸ್ಯೆ

ನಾಲ್ಕುನಾಡು ವ್ಯಾಪ್ತಿಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಎರಡನೇ ಪಟ್ಟಣವಾಗಿರುವ ನಾಪೋಕ್ಲು ದೊಡ್ಡ ಹೋಬಳಿಯಾಗಿದೆ. ಇಲ್ಲಿ ವಿದ್ಯುತ್ ವಿತರಣ ಕೇಂದ್ರ ಇಲ್ಲ. ಮೂರ್ನಾಡಿನಲ್ಲಿ ವಿದ್ಯುತ್ ಪೂರೈಕೆ ಕೇಂದ್ರ ಇದ್ದು ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ಯಾವುದೇ ಭಾಗದಲ್ಲಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದರೂ ಪೂರ್ಣ ನಾಲ್ಕುನಾಡಿಗೆ ವಿದ್ಯುತ್ ಸಮಸ್ಯೆ ಕಾಡುತ್ತದೆ. ಧಾರಾಕಾರ ಮಳೆಗೆ ಪ್ರವಾಹಕ್ಕೆ ತುತ್ತಾಗುವ ಚೆರಿಯಪರಂಬು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ತಂತಿಗಳು ಗದ್ದೆ ಮತ್ತು ತೋಟಗಳಲ್ಲಿ ಕಡಿಮೆ ಎತ್ತರದಲ್ಲಿ ಹಾದು ಹೋಗಿವೆ. ಈ ತಂತಿಗಳು ಮಳೆಗಾಲದಲ್ಲಿ ಪ್ರವಾಹದಿಂದ ಬಹು ಬೇಗನೆ ಮುಳುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.