
ನಾಪೋಕ್ಲು: ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ.. ಪೋಪಕ ಪುತ್ತರಿ ಎಣ್ಣತೆ ಪೋಚಿ ಪೊಯಿಲೆ ಪೊಯಿಲೆ...’ ಇಂತಹ ಉದ್ಘೋಷಗಳು ಅನುರಣಿಸುವುದು ಗ್ರಾಮದ ಮಂದ್‌ಗಳಲ್ಲಿ.
ಪುತ್ತರಿ (ಹುತ್ತರಿ) ಹಬ್ಬ ಕಳೆದ 2-3 ದಿನಗಳಲ್ಲಿ ಕೋಲಾಟಗಳು ಹಬ್ಬಕ್ಕೆ ರಂಗು ತುಂಬುತ್ತವೆ. ನಾಪೋಕ್ಲು ಸಮೀಪದ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿ, ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ, ಭಾಗಮಂಡಲದ ಕಾವೇರಿ ಕೋಲ್ ಮಂದ್‌ನಲ್ಲಿ, ಪೇರೂರು ಗ್ರಾಮದ ಮಂದ್‌ನಲ್ಲಿ …ಹೀಗೆ ವಿವಿಧೆಡೆಗಳಲ್ಲಿ ಪುತ್ತರಿ ಹಬ್ಬ ಕಳೆದ ಬಳಿಕ ಕೋಲಾಟಗಳು ಸಾಂಪ್ರದಾಯಿಕವಾಗಿ ನಡೆಯುತ್ತವೆ. ಸಾಂಪ್ರದಾಯಿಕ ‘ಪುತ್ತರಿ ಕೋಲಾಟ’ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬದ ಸಂಭ್ರಮವನ್ನು ವಿಸ್ತರಿಸುತ್ತವೆ.
ಪುತ್ತರಿ ಹಬ್ಬವೆಂದರೆ ವಾರಗಟ್ಟಲೆ ಸಂಭ್ರಮ. ಹಬ್ಬ ಒಂದು ದಿನವಾದರೂ ಅದಕ್ಕೆ ಸಂಬಂಧಿಸಿ ಆಚರಣೆಗಳೂ ವಾರಗಟ್ಟಲೆ ಜರುಗುತ್ತವೆ. ಪುತ್ತರಿಯ ಅಂಗವಾಗಿ ಆ ದಿನಗಳಲ್ಲಿ ಮಂದ್ ಎಂಬ ಊರ ಕ್ರೀಡಾಂಗಣದಲ್ಲಿ ಊರವರೆಲ್ಲರೂ ಸೇರಿ ನೃತ್ಯ, ಕುಣಿತ ಮತ್ತು ಶೌರ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಎರಡೂ ಕೈಗಳಲ್ಲಿ ಬೆತ್ತದ ಬಾರು ಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಕ್ರಮಬದ್ಧವಾಗಿ ಬೀಸುತ್ತಾ ಕುಣಿಯುವ ಕೋಲಾಟ ‘ಪುತ್ತರಿ ಕೋಲಾಟ’ವೆಂದೇ ಪ್ರಸಿದ್ಧಿ ಪಡೆದಿದೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಪುತ್ತರಿ ಹಬ್ಬವು ಅಲ್ಲಿನ ಸಂಪ್ರದಾಯ, ಕೃಷಿ ಚಟುವಟಿಕೆಯ ಮೇಲಿನ ಆಸಕ್ತಿ ಇತ್ಯಾದಿಗಳ ಪ್ರತಿರೂಪವಾಗಿದೆ.
ನಾಪೋಕ್ಲು, ಬೇತು ಮತ್ತು ಕೊಳಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ನೂರಂಬಾಡ ಕೋಲ್ ಮಂದ್‌ನಲ್ಲಿ ಪುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಕೋಲಾಟ ನಡೆಯುತ್ತದೆ. ಬಳಿಕ ಬೇತು, ಕೊಳಕೇರಿ ಮತ್ತು ನಾಪೋಕ್ಲು- ಈ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಮಂದ್‌ಗೆ ಪ್ರದಕ್ಷಿಣೆ ಬಂದು ಕೋಲಾಟ ನಡೆಸುವರು. ಪುತ್ತರಿ ಕೋಲಾಟದ ಉದ್ಘೋಷ ಮಂದ್‌ನುದ್ದಕ್ಕೂ ಪಸರಿಸುವಾಗ ಗ್ರಾಮಸ್ಥರ ಉತ್ಸಾಹ, ಹರ್ಷೋದ್ಘಾರ ಮುಗಿಲು ಮುಟ್ಟುತ್ತದೆ. ಪ್ರತಿವರ್ಷ ನಾಡ್ ಮಂದ್‌ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎಂದು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿಯೊಂದಿಗೆ ಪುತ್ತರಿ ಕೋಲಾಟಕ್ಕೆ ತೆರೆ ಎಳೆಯಲಾಗುತ್ತದೆ.
ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ 6 ಗ್ರಾಮಗಳ ಗ್ರಾಮಸ್ಥರು ಊರ ತಕ್ಕ್, ನಾಡತಕ್ಕ್ ಮುಖ್ಯಸ್ಥರೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಓಲಗದೊಂದಿಗೆ ಕಪಾಳ ವೇಷಧಾರಿಗಳೊಂದಿಗೆ ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಸೇರಿ ಕೋಲಾಟ ನಡೆಸುತ್ತಾರೆ. ಐಕೊಳ, ಬಾಡಗ, ಕಾಂತೂರು, ಕೋಡಂಬೂರು, ಮುತ್ತಾರುಮುಡಿ ಹಾಗೂ ಕಿಗ್ಗಾಲು ಗ್ರಾಮಸ್ಥರು ಒಟ್ಟಾಗಿ ಸಂಪ್ರಾದಾಯದಂತೆ 3 ಸುತ್ತು ಕೋಲು ಹೊಡೆದು ಸಂಭ್ರಮಿಸುತ್ತಾರೆ.
ಇನ್ನು ಭಾಗಮಂಡಲದ ಕಾವೇರಿ ಕೋಲ್ ಮಂದ್‌ನಲ್ಲಿ ನಾಲ್ಕು ಗ್ರಾಮದವರಿಂದ ಪುತ್ತರಿಕೋಲಾಟ ಸಂಭ್ರಮದಿಂದ ನಡೆಯುತ್ತದೆ. ಭಾಗಮಂಡಲದ ತಾವೂರು, ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಗ್ರಾಮಸ್ಥರು ಒಟ್ಟಾಗಿ ಕಾವೇರಿಯ ಮಾನಿ ಮಂದ್‌ನಲ್ಲಿ ಪುತ್ತರಿ ಕೋಲಾಟ ನಡೆಸುತ್ತಾರೆ. ಬಳಿಕ, ಭಾಗಮಂಡಲಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಒಟ್ಟು ಸೇರಿ ಭಗಂಡೇಶ್ವರ ದೇವಾಲಯಕ್ಕೆ ಬಂದು ಅಲ್ಲಿಂದ ವಾದ್ಯಗೋಷ್ಠಿಯೊಂದಿಗೆ ತೆರಳಿದ ಮಂದಿ 8 ಸುತ್ತಿನ ಕೋಲಾಟ ನಡೆಸಿ ನಂತರ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಹಿಂತಿರುಗಿ ಕೋಲು ಒಪ್ಪಿಸುವರು.
ನಾಪೋಕ್ಲುವಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿನ ಪುತ್ತರಿ ಕೋಲಾಟ ಮಹತ್ವದ್ದಾಗಿದೆ. ನಾಪೋಕ್ಲು, ಬೇತು ಮತ್ತು ಕೊಳಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್‌ನಲ್ಲಿ ಪುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದಂತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್‌ನತ್ತ ಸಾಗುವರು. ಅಲ್ಲಿ 3 ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಮಂದ್‌ಗೆ ಪ್ರದಕ್ಷಿಣೆ ಬರುವುದರೊಂದಿಗೆ ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ.... ಉದ್ಘೋಷದೊಂದಿಗೆ ಮಂದ್‌ನಲ್ಲಿ ಕೋಲಾಟ ನಡೆಸುವುದು ಸಂಪ್ರದಾಯ ಎನಿಸಿದೆ.
ಹೀಗೆ, ಕೊಡಗಿನಾದ್ಯಂತ ಪುತ್ತರಿ ಹಬ್ಬಕ್ಕೆ ಕೋಲಾಟಳು ಸಾಂಸ್ಕೃತಿಕ ರಂಗು ತುಂಬುತ್ತವೆ.
ಪುತ್ತರಿ ಹಬ್ಬವನ್ನು ವಿಸ್ತರಿಸುವ ಕೋಲಾಟ ಅನೇಕ ಮಂದ್‌ಗಳಲ್ಲಿ ಸಾಂಪ್ರದಾಯಿಕ ಆಚರಣೆ ಎಲ್ಲರೂ ಸೇರಿ ಭಾಗವಹಿಸುವ ವಿಶಿಷ್ಟ ಕಾರ್ಯಕ್ರಮ
‘ದೇವರು ವಾಡೆಗೆ ಆಗಮಿಸುವರು’
ನಾಪೋಕ್ಲುವಿನ ಬಿದ್ದಾಟ೦ಡ ವಾಡೆಯಲ್ಲಿ ಪ್ರತಿ ವರ್ಷ ನಡೆಯುವ ಪುತ್ತರಿ ಕೋಲಾಟ ಪ್ರಸಿದ್ಧವಾಗಿದೆ. ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಿಂದ ಕೋಲಾಟದ ಸಂದರ್ಭ ಪ್ರತಿ ವರ್ಷ ದೇವರು ಬಿದ್ದಾಟ೦ಡ ವಾಡೆಗೆ ತೆರಳುವರು. ವರ್ಷಕ್ಕೆ ಎರಡು ಕೋಲಾಟದ ಸಂದರ್ಭ ದೇವರು ವಾಡೆಗೆ ಆಗಮಿಸುವರು ಎಂಬ ಪ್ರತೀತಿ ಇದೆ. ಕೊಂಡಿರ ಗಣೇಶ್ ನಾಣಯ್ಯ ಮಾಜಿ ಸೈನಿಕ ನಾಪೋಕ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.