
ಮಡಿಕೇರಿ: ಬಿಜೆಪಿ ವತಿಯಿಂದ ಸುದರ್ಶನ್ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಏಕತಾ ಅಭಿಯಾನದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ‘ಏಕತಾ ನಡಿಗೆ’ಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ವಂದೇ ಮಾತರಂ, ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ, ‘ಈ ರಾಷ್ಟ್ರದ ಉಕ್ಕಿನ ಮನುಷ್ಯ, ಅಖಂಡ ಭಾರತದ ಕನಸನ್ನು ಹೊತ್ತಿದ್ದ ಸರ್ದಾರ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನವನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸುತ್ತಿದ್ದೇವೆ. ಈ ವರ್ಷ 150ನೇ ಜನ್ಮದಿನಾಚರಣೆಯಾಗಿರುವುದರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲರಲ್ಲೂ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವುದು ನಮ್ಮ ಉದ್ದೇಶ’ ಎಂದರು.
ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅಖಂಡ ಭಾರತ ನಿರ್ಮಿಸುವ ಉದ್ದೇಶ ಹೊಂದಿದ್ದರು. ಕೆಲವೊಬ್ಬರಿಂದ ಭಾರತ ವಿಭಜನೆಯಾಯಿತು. ಆದರು, 552 ರಾಜರನ್ನೆಲ್ಲ ಒಟ್ಟುಗೂಡಿಸಿ ಎಲ್ಲರನ್ನೂ ಭಾರತಕ್ಕೆ ಸೇರಿಸಿದರು. ಏಕತೆಗೆ ಒತ್ತು ಕೊಡುವ ಕೆಲಸ ಮಾಡಿದರು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯರಾದ ಕೆ.ಎಸ್.ರಮೇಶ್, ಉಮೇಶ್ ಸುಬ್ರಮಣಿ, ಅನಿತಾ ಪೂವಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಮುಖಂಡ ರವಿ ಕುಶಾಲಪ್ಪ ಭಾಗವಹಿಸಿದ್ದರು.
ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಸಂಸ್ಮರಣೆ
ಸರ್ದಾರ್ ಪಟೇಲ್ ಜನ್ಮದಿನಾಚರಣೆ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸಂಸ್ಮರಣೆ ಹಾಗೂ ಉಪಪ್ರಧಾನಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ‘ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಭಾರತದ ಉಕ್ಕಿನ ಮಹಿಳೆ ಮಾತ್ರ ಆಗಿರಲಿಲ್ಲ. ಜಗತ್ತಿನ ಅತ್ಯಂತ ದಿಟ್ಟ ಮಹಿಳೆಯಾಗಿದ್ದರು ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ಅವರು ಭಾರತದ ಪ್ರಥಮ ಉಪ ಪ್ರಧಾನಿಯಾಗಿ ಗೃಹ ಸಚಿವರಾಗಿ ಹರಿದು ಹೋಗಿದ್ದ ದೇಶವನ್ನು ಒಂದುಗೂಡಿಸಿ ಏಕತೆಯ ಸಾಧನೆ ಮಾಡಿದರು’ ಎಂದು ಹೇಳಿದರು. ಆಪರೇಶನ್ ಪೋಲೋ ಮೂಲಕ ಹೈದರಾಬಾದ್ ವಿಮೋಚನೆಯಾಗಿದ್ದು ಇದು ಪಟೇಲರ ಕೊಡುಗೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ‘ಇಂದಿರಾ ಗಾಂಧಿ ಹಾಗೂ ವಲ್ಲಭಬಾಯ್ ಪಟೇಲ ಅವರ ಆದರ್ಶಗಳನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು. ಮುಡಾ ಅಧ್ಯಕ್ಷ ಬಿ.ವೈ.ರಾಜೇಶ್ ಮಾತನಾಡಿ ‘ಇಂದಿರಾ ಗಾಂಧಿ ವೃತ್ತದಲ್ಲಿ ಇಂದಿರಾ ಪ್ರತಿಮೆ ಅಳವಡಿಕೆಗೆ ನಗರಸಭೆಯಲ್ಲಿ ಹಿಂದೆಯೇ ನಿರ್ಣಯವಾಗಿದೆ. ಇದರ ಬಗ್ಗೆ ಪ್ರಸ್ತಾಪಿಸಲಾಗುವುದು’ ಎಂದು ಭರವಸೆ ನೀಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ ನಗರಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ ಭಾಗವಹಿಸಿದ್ದರು.
ಪೊಲೀಸರಿಂದ ‘ಏಕತೆಗಾಗಿ ಓಟ’
ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಜಿಲ್ಲೆಯ ಹಲವೆಡೆ ಶುಕ್ರವಾರ ಆಚರಿಸಲಾಯಿತು. ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ‘ಏಕತೆಗಾಗಿ ಓಟ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಶುಕ್ರವಾರ ನಗರದಲ್ಲಿ ರಸ್ತೆ ಓಟವನ್ನು ಆಯೋಜಿಸಲಾಗಿತ್ತು. ನಂತರ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಏಕತಾ ದಿವಸದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಡಿವೈಎಸ್‍ಪಿ ಸೂರಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.