ADVERTISEMENT

ನಾಪೋಕ್ಲು: ಅಪರೂಪವಾಗುತ್ತಿದೆ ನೈಸರ್ಗಿಕ ಅಣಬೆಗಳು

ಮೆಲ್ಲಗೆ ತೆರೆಮರೆಯತ್ತ ಸರಿಯುತ್ತಿವೆ ಶಿಲೀಂಧ್ರ ಸಸ್ಯಗಳು

ಸಿ.ಎಸ್.ಸುರೇಶ್
Published 19 ಜುಲೈ 2025, 5:08 IST
Last Updated 19 ಜುಲೈ 2025, 5:08 IST
ಈಚೆಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಕಂಡು ಬಂದ ಅಣಬೆಗಳು
ಈಚೆಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಕಂಡು ಬಂದ ಅಣಬೆಗಳು   

ನಾಪೋಕ್ಲು: ಕೊಡಗಿನ ಮಳೆಗಾಲವೆಂದರೆ ಹಾಗೆ. ಧೋ... ಎಂದು ಸುರಿಯುವ ಮಳೆ. ತಣ್ಣಗೆ ಬೀಸುವ ಗಾಳಿ. ಇಡೀ ವಾತಾವರಣವೇ ಶೀತಮಯ. ವಾಸಿಸುವ ಪರಿಸರವೆಲ್ಲಾ ಚಳಿಗೆ ಮುದುಡುವಾಗ ಶರೀರವೂ ಮುದುಡುತ್ತದೆ. ಶರೀರವನ್ನು ಬೆಚ್ಚಗಾಗಿಸುವ ಉಷ್ಣ ಆಹಾರಗಳಿಗೆ ಇಲ್ಲಿನ ಮಂದಿ ಮೊರೆ ಹೋಗುತ್ತಾರೆ. ಅಂತೆಯೇ ನೈಸರ್ಗಿಕ ರುಚಿಕರ ಅಣಬೆಗಳಿಗೆ ಇಲ್ಲಿನ ಮಂದಿ ಹಾತೊರೆಯುವುದು ಸಹಜವೇ.

ಹಿಂದೆ ಮಳೆಗಾಲ ಆರಂಭವಾಗುವ ಮುನ್ನ ತೇವದ ನೆಲದಿಂದ ಅಪರೂಪದ ಅಣಬೆಗಳು ಮೂಡಿದರೆ ಮಳೆಗಾಲದಲ್ಲಿ ಕಾಡುಗಳಲ್ಲಿ ಓಡಾಡಿದವರಿಗೆಲ್ಲ ಹತ್ತು ಹಲವು ಚಿತ್ರ ವಿಚಿತ್ರ ಅಣಬೆಗಳು ಕಾಣಸಿಗುತ್ತಿದ್ದವು. ದಟ್ಟ ಹಸಿರಿನ ಗಿಡಮರಗಳ ನಡುವೆ, ಒಣಗಿದ ಮರಗಳ ಕಾಂಡಗಳ ಮೇಲೆ ಬಿಳಿ, ಹಳದಿ, ಕಂದು ಬಣ್ಣದ ಅಣಬೆಗಳು ಅರಳಿ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸುತ್ತಿದ್ದವು. ಇದು ಸೌಂದರ್ಯದ ಮಾತಾದರೆ ಮಳೆಗಾಲದಲ್ಲಿ ಪುಟಿಯುವ ಕೆಲವು ಜಾತಿಯ ಮೃದು ಅಣಬೆಗಳು ಮಾಂಸದ ರುಚಿ ನೀಡಿದರೆ ಗುಡುಗು ಸಹಿತ ಸುರಿವ ಮಳೆ ಇಳಿಮುಖಗೊಂಡಾಗ ಏಳುವ ಕೆಲವು ಲಿಲ್ಲಿಪುಟ್ ಅಣಬೆಗಳು ಬಾಯಲ್ಲಿ ನೀರೂರಿಸುತ್ತಿದ್ದವು.

ಮೊದಲೆಲ್ಲಾ ಮುಂಗಾರಿನ ಅವಧಿಯಲ್ಲಿ ಸುತ್ತಮುತ್ತಲಿನ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ರುಚಿಕರ ಅಣಬೆಗಳು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿವೆ. ಹಿಂದೆ ಕಾಡಿನಲ್ಲಿ ಹೇರಳ ಪ್ರಮಾಣದಲ್ಲಿ ಸಿಗುತ್ತಿದ್ದ ಕಾಡು ಅಣಬೆಗಳು ಈ ಬಾರಿ ಕಡಿಮೆಯಾಗಿದೆ. ಕೆಲವು ಕಡೆ ಅಣಬೆ ಬೆಳೆಯಲೇ ಇಲ್ಲ. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಕಾಡಿನಲ್ಲಿ ಕಾಡು ಅಣಬೆಗಳು ಕಾಣಸಿಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಆಹಾರ ಅಣಬೆಗಳು ಅಪರೂಪವಾಗಿವೆ ಎನ್ನುತ್ತಾರೆ ಗ್ರಾಮೀಣ ಅಣಬೆ ಪ್ರಿಯರು.

ADVERTISEMENT

ಕಾಡಿನಲ್ಲಿ ಅಣಬೆ ಹುಟ್ಟುವ ಜಾಗ ಗೊತ್ತಿದವರು ಹುಡುಕಾಟ ನಡೆಸುವುದು ಸಾಮಾನ್ಯ. ನೆಲದಡಿ ಅಣಬೆಯ ಜೀವ ಕಣದ ಎಲೆಗಳು ಸೃಷ್ಟಿಯಾಗುತ್ತವೆ. ಭೂಮಿಯಿಂದ ಹೊರಗೆ ಬರುವುದು ಒಂದು ಜೈವಿಕ ಕ್ರಿಯೆ. ಇತ್ತೀಚಿನ ಹವಾಮಾನ ಬದಲಾವಣೆಯು ಅಣಬೆಗಳ ಹುಟ್ಟಿನ ಮೇಲೆ ಪರಿಣಾಮ ಬೀರಿದೆ. ಮಳೆಯ ಏರುಪೇರು, ವಾತಾವರಣದಲ್ಲಿ ತಂಪು ಕಡಿಮೆಯಾಗಿ ಬಿಸಿಲಿನ ವಾತಾವರಣ ಮೂಡಿರುವುದು ಅಣಬೆಗಳ ಗೋಚರಕ್ಕೆ ಅಡ್ಡಿಯಾಗಿದೆ.

ಖಾದ್ಯವಾಗಿ ಬಳಕೆಯಾಗುವ ಅಣಬೆಗಳು ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಹಲವು ಲಾಭಗಳಿವೆ. ಅಣಬೆಯನ್ನು ಆಯ್ಕೆ ಮಾಡುವ ಎಚ್ಚರದಿಂದ ಇರಬೇಕು. ವಿಷಕಾರಿ ಅಣಬೆಯನ್ನು ಆಯ್ಕೆ ಮಾಡಬಾರದು. ಇದನ್ನು ಸೂಪ್ ರೂಪದಲ್ಲಿ ಸೇವಿಸುವುದು ಬಹಳ ಉತ್ತಮ. ಸೂಪ್ ರೂಪದಲ್ಲಿ ಕುಡಿಯುವುದರಿಂದ ಔಷಧೀಯ ಗುಣಗಳು ಸಂಪೂರ್ಣವಾಗಿ ದೇಹವನ್ನು ಸೇರುತ್ತವೆ ಎಂದು ವೈದ್ಯರು ಹೇಳುತ್ತವೆ.

ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ, ಆಕಾರ ಹಾಗೂ ರೂಪಗಳಿವೆ. ತೇವದ ಮಣ್ಣಿನಲ್ಲಿ ಅಲ್ಲಲ್ಲಿ ಅಪರೂಪದ ಅಣಬೆಗಳು ಕಾಣ ಸಿಗುತ್ತವೆ. ಕೆಲವು ತರಕಾರಿಯಾಗಿ ಬಳಕೆಯಾದರೆ ಮತ್ತೆ ಕೆಲವು ನೋಟಕ್ಕಷ್ಟೇ ಚೆನ್ನ. ಕಾಫಿಯ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕುತ್ತಾರೆ. ತೇವದ ಮಣ್ಣಿನಲ್ಲಿ ಮರಗಳ ಬುಡದಲ್ಲಿ ಹೂವಿನ ಮೊಗ್ಗುಗಳಂತೆ ಹುಟ್ಟಿಕೊಳ್ಳುವ ಅಣಬೆಗಳನ್ನು ಕಂಡರೆ ಸಾಕು ಕಿತ್ತೊಯ್ಯುತ್ತಾರೆ. ಹಾಗೆಂದು ಎಲ್ಲಾ ಅಣಬೆಗಳನ್ನು ತಿನ್ನಲಾಗುವುದಿಲ್ಲ. ಬಹುತೇಕ ಅಣಬೆಗಳು ನೋಡಲಷ್ಟೇ ಸುಂದರ. ಅಣಬೆಗಳ ಜೀವನ ಶೈಲಿಯೇ ವಿಶಿಷ್ಟ. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ. ಬಗೆಬಗೆಯ ಆಕಾರ. ಗಾತ್ರ ಅಣಬೆಗಳು ಕೊಳೆತು ನಾರುವ ವಸ್ತುಗಳ ಮೇಲೆ, ಮರಗಳ ಕಾಂಡಗಳ ಮೇಲೆ, ಸೆಗಣಿಯ ಮೇಲೆ, ಕೊಳೆತ ಎಲೆಗಳ ಮೇಲೆ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತವೆ.

ಹಲವು ವರ್ಗೀಕರಣ ಮಾಡಲಾಗಿದೆ

‘ಅಣಬೆಗಳು ಶಿಲೀಂದ್ರ ಸಸ್ಯಗಳು. ಆದರೆ ಕೊಂಬೆ ರೆಂಬೆ. ಬೇರು ಎಲೆಗಳಿಂದ ವಂಚಿತವಾಗಿದೆ. ಪತ್ರಹರಿತ್ತಿಲ್ಲದ ಕಾರಣ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲಾರವು. ಒಂದರ್ಥದಲ್ಲಿ ಇವು ಜೀವಿ-ನಿರ್ಜೀವಿಗಳ ನಡುವೆ ಸಂಬಂಧ ಕಲ್ಪಿಸುವ ಕೊಂಡಿಗಳು. ಅಣಬೆಯನ್ನು ಕಿತ್ತಾಗ ನೆಲದೊಳಗೆ ಹುದುಗಿ ಬೇರಿನಂತೆ ಕಾಣುವ ಬಿಳಿ ದಂಟುಗಳೇ ಈ ಸಸ್ಯದ ಮುಖ್ಯ ಅಂಗ ಇದಕ್ಕೆ ಹೈಫ್ ಎನ್ನುತ್ತಾರೆ. ಭೂಮಿಯ ಮೇಲ್ಭಾಗಕ್ಕೆ ಛತ್ರಿಯಂತೆ ಬೆಳೆಯುವ ಭಾಗ ಸಸ್ಯದ ಫಲಕಾಯಗಳು. ಕೊಡೆಯಾಕಾರದ ತಳಭಾಗದಲ್ಲಿ ಇರುವ ಹಾಳೆ ಪದರಗಳಂಥ ರಚನೆಗಳೇ ಕಿವಿರುಗಳು. ಕೊಡೆಯ ಆಕಾರಗಳಲ್ಲಿ ವೈವಿಧ್ಯಗಳಿದ್ದು ಇವುಗಳ ಆಧಾರದಲ್ಲಿ ಅಣಬೆಗಳನ್ನು ವರ್ಗೀಕರಿಸಲಾಗಿದೆ ಎನ್ನುತ್ತಾರೆ ನಾಪೋಕ್ಲುವಿನ ವೈದ್ಯೆ ಡಾ.ಶೈಲಜಾ.

ಕಳೆನಾಶಕದ ವಿಪರೀತ ಬಳಕೆ

ಕಳೆನಾಶಕದ ವಿಪರೀತ ಬಳಕೆ ಕಳೆನಾಶಕಗಳ ಬಗ್ಗೆ ಅತಿಯಾದ ಬಳಕೆ ಅಣಬೆಗಳು ಕಡಿಮೆಯಾಗಲು ಮಹತ್ವದ ಕಾರಣ ಎಂದು ತಜ್ಞರು ಹೇಳುತ್ತಾರೆ. ಈ ಕುರಿತು ‘ಪ್ರಜಾವಾಣಿ’ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಭಾಗದ ವಿಷಯ ತಜ್ಞ ಹಾಗೂ ವಿಜ್ಞಾನಿ ಪ್ರಭಾಕರ್ ಅವರನ್ನು ಸಂಪರ್ಕಿಸಿದಾಗ ಅವರು ‘ಕಳೆನಾಶಕದ ಜೊತೆಗೆ ಕೀಟನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳ ಅತಿಯಾದ ಹಾಗೂ ಅವೈಜ್ಞಾನಿಕ ಬಳಕೆಯಿಂದ ಶಿಲೀಂಧ್ರಗಳೆಲ್ಲವೂ ನಾಶವಾಗುತ್ತದೆ’ ಎಂದು ಹೇಳಿದರು. ಇದರೊಂದಿಗೆ ಅಣಬೆ ಬೆಳೆಯಲು ಅಗತ್ಯವಾಗಿ ಬೇಕಾದ ವಾತಾವರಣದ ಅಂಶಗಳೂ ಈಗ ಕಾಣಿಸುತ್ತಿಲ್ಲ. ಅತಿ ಹೆಚ್ಚು ಮಳೆ ನಿರಂತರ ಮಳೆ ಬಿಸಿಲು ಇಲ್ಲದೇ ಇರುವುದು ಈ ಬಗೆಯ ಹವಾಮಾನ ಬದಲಾವಣೆಯೂ ಅಣಬೆಗಳು ಕಡಿಮೆಯಾಗಲು ಕಾರಣ ಎಂದರು.

ನಾಪೋಕ್ಲು ವ್ಯಾಪ್ತಿಯಲ್ಲಿ ಈಚೆಗೆ ಕಂಡು ಬಂದ ಅಣಬೆಗಳು
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಪ್ರತ್ಯಕ್ಷ ಎಂಬ ಬಾಲಕ ಶಾಲೆಗೆ ರಜೆ ಇದ್ದ ಕಾರಣ ಹುಡುಕಾಟ ನಡೆಸಿ ದೊಡ್ಡದಾದ ಅಣಬೆಯೊಂದನ್ನು ಪತ್ತೆ ಹಚ್ಚಿ ಸಂಭ್ರಮಿಸಿದ
ನಾಪೋಕ್ಲು ವ್ಯಾಪ್ತಿಯಲ್ಲಿ ಈಚೆಗೆ ಮೂಡಿದ ಕೊಡೆಯಾಕಾರದ ಅಣಬೆ
ನಾಪೋಕ್ಲು ಸಮೀಪ ಈಚೆಗೆ ಪುಟಿದೆದ್ದ ಅಣಬೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.