ADVERTISEMENT

ನಕ್ಸಲ್‌ ತಂಡ ಪ್ರತ್ಯಕ್ಷ: ಕೊಡಗು ಗಡಿಭಾಗದಲ್ಲಿ ಎಎನ್‌ಎಫ್‌ ಶೋಧ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 10:57 IST
Last Updated 7 ಮಾರ್ಚ್ 2019, 10:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೇರಳ ರಾಜ್ಯದ ವಯನಾಡು ಭಾಗದಲ್ಲಿ ನಕ್ಸಲ್‌ ತಂಡವು ಮತ್ತೆ ಪ್ರತ್ಯಕ್ಷವಾಗಿದ್ದು ಕೊಡಗಿನ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಗುರುವಾರ ಇಡೀ ದಿವಸ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಸಿಬ್ಬಂದಿ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದರು.

ಕುಟ್ಟ, ಮಾಕುಟ್ಟ, ಇರ್ಫು, ಬ್ರಹ್ಮಗಿರಿ, ನಾಪೋಕ್ಲು, ಭಾಗಮಂಡಲ, ಸಂಪಾಜೆ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲೂ ವಯನಾಡು ಭಾಗದಲ್ಲಿ ಪ್ರತ್ಯಕ್ಷವಾಗಿದ್ದ ನಕ್ಸಲ್‌ ತಂಡವು ಕರಪತ್ರ ಎಸೆದು ಕಣ್ಮರೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

2018ರ ಜನವರಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಿತ್ತಮಜಲಿಗೆ ಮೂವರು ಶಸ್ತ್ರಸಜ್ಜಿತರು ‘ನಾವು ನಕ್ಸಲರು’ ಎಂದು ಹೇಳಿಕೊಂಡು ಬಂದಿದ್ದರು. ಅದೇ ತಂಡವು ಫೆ.3ರಂದು ಕೊಡಗಿನ ಗಡಿಭಾಗವಾದ ಕೊಯಿನಾಡು ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿ ಮನೆಯೊಂದರಲ್ಲಿ ದವಸ, ಧಾನ್ಯ ಸಂಗ್ರಹಿಸಿ ತೆರಳಿತ್ತು. ನಾಪೋಕ್ಲು ಸಮೀಪದ ನಾಲಾಡಿ ಕಾಫಿ ತೋಟದ ಲೈನ್‌ಮನೆಗೂ ಶಂಕಿತ ನಕ್ಸಲ್‌ ತಂಡ ಭೇಟಿ ಕೊಟ್ಟಿತ್ತು.

ಕೊಯಿನಾಡಿಗೆ ಬಂದಿದ್ದ ತಂಡದಲ್ಲಿ ಪೊಲೀಸರಿಗೆ ಬೇಕಾಗಿದ್ದ ಉಡುಪಿಯವಿಕ್ರಂಗೌಡಇದ್ದ ಎನ್ನುವ ಮಾಹಿತಿ ಲಭಿಸಿತ್ತು. ಎಎನ್‌ಎಫ್‌ ಸಿಬ್ಬಂದಿ, ಅರಣ್ಯ ಪ್ರದೇಶದಲ್ಲಿ ಶೋಧ ತೀವ್ರಗೊಳಿಸಿದ್ದರ ಪರಿಣಾಮ ಶಂಕಿತ ನಕ್ಸಲ್‌ ತಂಡವು ಕೇರಳದ ಕಡೆಗೆ ತೆರಳಿತ್ತು. ಈಗ ಮತ್ತೆ ಮಲೆನಾಡಿನ ಗಡಿಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.