ADVERTISEMENT

ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ: ಐಎನ್ಎ ಸೇನೆಯಲ್ಲಿ ಕೊಡಗಿನ ಜನ

ಕೆ.ಎಸ್.ಗಿರೀಶ್
Published 23 ಜನವರಿ 2026, 4:49 IST
Last Updated 23 ಜನವರಿ 2026, 4:49 IST
ಮಣವಟ್ಟೀರ ಮೇದಪ್ಪ 
ಮಣವಟ್ಟೀರ ಮೇದಪ್ಪ    

ಮಡಿಕೇರಿ: ಕೊಡಗಿನಲ್ಲಿ ತೆರೆಮರೆಗೆ ಸರಿಯುತ್ತಿರುವ ಇತಿಹಾಸದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಇತಿಹಾಸವೂ ಸೇರಿದೆ.

ನೇತಾಜಿ ಹಾಗೂ ಕೊಡಗಿನ ನಡುವಿನ ಅವಿನಾಭಾವ ಸಂಬಂಧ ಮಸುಕಾಗುತ್ತಿದೆ. ಅವರೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ವೀರಯೋಧರಲ್ಲಿ ಕೊಡಗಿನವರೂ ಇದ್ದರು ಎಂಬುದು ಬಹುಜನರಿಗೆ ತಿಳಿದಿಲ್ಲ.

1941ರಲ್ಲಿ ಮೊದಲಿಗೆ ಬ್ರಿಟಿಷರು ನೇತಾಜಿ ಸೋದರ ಶರತ್‌ಚಂದ್ರ ಅವರನ್ನು ತಿರುಚನಾಪಳ್ಳಿಯಲ್ಲಿ ನಂತರ ಮಡಿಕೇರಿಯಲ್ಲಿ ಗೃಹಬಂಧನದಲ್ಲಿರಿಸಿದ್ದರು ಎಂದು ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ತಮ್ಮ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ. ಈ ಕುರಿತು ಅಧ್ಯಯನಗಳು ನಡೆಯಬೇಕಿದೆ. ‘ನೇತಾಜಿ ಅವರ ಐಎನ್ಎ ಸೇನೆಯಲ್ಲಿ ಕೊಡಗಿನ ಅನೇಕರು ಇದ್ದರು. ಹಲವರಿಗೆ ಐಎನ್ಎ ಪಿಂಚಣಿಯೂ ಬರುತ್ತಿತ್ತು’ ಎಂದು ಹಿರಿಯರು ಸ್ಮರಿಸುತ್ತಾರೆ.

ADVERTISEMENT

‘ಈಗ ಐಎನ್ಎನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಲ್ಲದಿದ್ದರೂ ಅವರ ಕುಟುಂಬದವರಿಗೆ ಗೌರವ ಸಲ್ಲಿಸಬೇಕಿದೆ. ನೆಲಜಿ ಗ್ರಾಮದ ಮಣವಟ್ಟಿರ ಮೇದಯ್ಯ, ಗಣಪತಿ, ಅಪ್ಪಚ್ಚು, ಬೆಂಗೂರು ಗ್ರಾಮದ ಪಿ.ಬಿ.ಕಾರ್ಯಪ್ಪ, ಚೇರಂಬಾಣೆಯ ಬಿ.ಬಾಡಗ ಗ್ರಾಮದಲ್ಲಿದ್ದ ಐಯ್ಯಣ್ಣ, ತ್ಯಾಗರಾಜ ಮೊದಲಿಯಾರ್ ಸೇರಿ ಹಲವರು ನೇತಾಜಿ ಜತೆಯಲ್ಲಿದ್ದರು’ ಎಂದು ಹಿರಿಯರು ನೆನೆಯುತ್ತಾರೆ.

ನೆನಪುಗಳು: 

‘ನಮ್ಮ ತಂದೆ ನೇತಾಜಿ ಅವರ ಜೊತೆ ಮಲೇಷ್ಯಾ, ಸಿಂಗಾಪುರ, ಮಯನ್ಮಾರ್ (ಬರ್ಮಾ)ದಲ್ಲಿದ್ದರು. ಮಯನ್ಮಾರದಲ್ಲಿ ಸೆರೆಯಾದರು. ಅವರೊಂದಿಗೆ ನಮ್ಮ ಕುಟುಂಬದ ಗಣಪತಿ ಹಾಗೂ ಅಪ್ಪಚ್ಚು ಎಂಬುವವರೂ ಹೋರಾಡಿದ್ದರು. ಅವರಿಗೆ ಐಎನ್ಎಸ್ ಪಿಂಚಣಿಯೂ ಬರುತ್ತಿತ್ತು. ಅವರನ್ನು ಇಂದಿರಾಗಾಂಧಿಯವರು ಸನ್ಮಾನಿಸಿದ್ದರು’ ಎಂದು ನೆಲಜಿ ಗ್ರಾಮದ ಮಣವಟ್ಟಿರ ಮೇದಯ್ಯ ಅವರ ಪುತ್ರ ಪೊನ್ನಣ್ಣ ‘ಪ್ರಜಾವಾಣಿ’ ಗೆ ತಿಳಿಸಿದರು. 

‘ಬೆಂಗೂರು ಗ್ರಾಮದ ಪಿ.ಬಿ.ಕಾರ್ಯಪ್ಪ ಸಹ ನೇತಾಜಿ ಜೊತೆಗಿದ್ದರು. ಮೇದಯ್ಯ ಅವರನ್ನು ವಿರಾಜಪೇಟೆಯಿಂದ ನಾಪೋಕ್ಲುವಿಗೆ ಮೆರವಣಿಗೆಯಲ್ಲಿ ಇಲ್ಲಿಗೆ ಕರೆ ತಂದಿದ್ದು ನೆನಪಿದೆ’ ಎಂದು ಹಿರಿಯ ಸಂಶೋಧಕ ಬಾಚರಣಿಯಂಡ ಪಿ.ಅಪ್ಪಣ್ಣ ಹೇಳಿದರು.

‘ಚೇರಂಬಾಣೆಯ ಬಿ.ಬಾಡಗ ಗ್ರಾಮದಲ್ಲಿದ್ದ ಐಯ್ಯಣ್ಣ ಎಂಬುವವರೂ ನೇತಾಜಿ ಜೊತೆಗಿದ್ದರು. ಇಲ್ಲಿ ಅವರು ನೇತಾಜಿ ಧರಿಸುತ್ತಿದ್ದ ಟೊಪ್ಪಿಯನ್ನೇ ಧರಿಸುತ್ತಿದ್ದರು. ಶರತ್‌ಚಂದ್ರ ಬೋಸ್‌ ಅವರನ್ನು ಈಗಿನ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಎದುರಲ್ಲಿದ್ದ ಬಂಗ್ಲೆಯಲ್ಲಿ ಗೃಹಬಂಧನಲ್ಲಿರಿಸಿದ್ದುದೂ ನೆನಪಿದೆ. ಕಿಟಕಿಯ ಮೂಲಕ ಅವರನ್ನು ನೋಡಿದ್ದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರತಿಕ್ರಿಯಿಸಿ, ‘ಹಿಂದೆ ಪುರಭವನದಲ್ಲಿ ನೇತಾಜಿ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಅದು ನಿಂತಿತು’ ಎಂದರು.

ಹಿರಿಯ ಮುತ್ಸದ್ದಿ ಎಂ.ಸಿ.ನಾಣಯ್ಯ ಪ್ರತಿಕ್ರಿಯಿಸಿ, ‘ಇತಿಹಾಸ ದಾಖಲಾಗಬೇಕು. ಅವರ ತ್ಯಾಗ ಬಲಿದಾನಗಳನ್ನು ಎಲ್ಲರೂ ಸ್ಮರಿಸಬೇಕು’ ಎಂದು ಹೇಳಿದರು.

‘ನೆಲಜಿ ಪ್ರೌಢಶಾಲೆಗೆ ನೇತಾಜಿ ಎಂಬ ಹೆಸರನ್ನಿಟ್ಟಿದ್ದು ಬಹಳ ವರ್ಷಗಳ ಕಾಲ ಅವರ ಜನ್ಮದಿನದಂದೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿತ್ತು’ ಎಂದು ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಹೇಳುತ್ತಾರೆ.

ಮಣವಟ್ಟೀರ ಮೇದಪ್ಪ
ಮಣವಟ್ಟಿರ ಮೇದಪ್ಪ ಅವರಿಗೆ ಅಂದಿನ ಕೇಂದ್ರ ಸರ್ಕಾರ ನೀಡಿರುವ ತಾಮ್ರ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.