ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಂಠಿಗೆ ಹೊಸದೊಂದು ಕಾಯಿಲೆ ತಗುಲಿದ್ದು, ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಪೈರಿಕ್ಯುಲೇರಿಯಾ ಬೆಂಕಿ ರೋಗವೆಂದು ಹೆಸರಿಸಿರುವ ಈ ಕಾಯಿಲೆ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.
ಶುಂಠಿ ನಾಟಿ ಮಾಡಿದ 70 ರಿಂದ 80 ದಿನಗಳಲ್ಲೇ ಈ ಕಾಯಿಲೆ ಕಾಣಿಸಿಕೊಂಡಿದೆ. ಈ ಕುರಿತು ಕಲ್ಲಿಕೋಟೆಯ ಐ.ಸಿ.ಎ.ಆರ್– ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದು, ಇದು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಕಂಡುಬರುವ ಬೆಂಕಿ ರೋಗವನ್ನು ತರುವ ಶಿಲೀಂಧ್ರವಾದ ಪೈರಿಕ್ಯುಲೇರಿಯಾ ಎಂಬ ರೋಗಾಣುವಿನಿಂದ ಹರಡುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಶುಂಠಿ ಕೊಯ್ಲು ಮಾಡುವ ಸಂದರ್ಭದಲ್ಲಿ ಒಂದು ಹೊಸ ರೋಗ ಕಾಣಿಸಿಕೊಂಡು ರೈತರಲ್ಲಿ ಆಂತಕ ಉಂಟು ಮಾಡಿತ್ತು. ಈಗ ಆರಂಭದಲ್ಲೇ ಕಾಣಿಸಿಕೊಂಡು ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ.
ರೋಗದ ಲಕ್ಷಣಗಳು:
ಪ್ರಾರಂಭದಲ್ಲಿ ಗಿಡದ ಎಲೆಗಳ ಮೇಲೆ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲೂ ಕಂದು ಬಣ್ಣ ಉಂಟಾಗುತ್ತದೆ. ಇಂತಹ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಗಿಡದ ಎಲೆಗಳು ಹಳದಿಯಾಗಿ ಸುಟ್ಟು ಹೋದಂತೆ ಕಂಡು ಬರುತ್ತದೆ.
ಒಮ್ಮೆ ಸೋಂಕು ತಗುಲಿದರೆ ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ. ರೋಗ ತೀವ್ರವಾದಾಗ ಶುಂಠಿಯ ಎಲೆ ಮತ್ತು ಕಾಂಡದ ಒಣಗುವಿಕೆಗೆ ಕಾರಣವಾಗುತ್ತದೆ. ಇದರಿಂದ ಗೆಡ್ಡೆಗಳ ಬೆಳವಣಿಗೆಯು ಕುಂಟಿತವಾಗಿ ಗೆಡ್ಡೆಗಳ ತೂಕದಲ್ಲಿ ಶೇ 30ರಷ್ಟು ನಷ್ಟ ಉಂಟಾಗುತ್ತದೆ ಎಂದು ಗೋಣಿಕೊಪ್ಪಲುವಿನ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ಕೆ.ವಿ.ವೀರೇಂದ್ರಕುಮಾರ್ ಹೇಳುತ್ತಾರೆ.
ರೋಗಕ್ಕೆ ಕಾರಣ:
ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರದ ಬೀಜಕಣಗಳು ಗಾಳಿಯ ಮುಖಾಂತರ ಇತರ ಗಿಡಗಳಿಗೂ ಹರಡುತ್ತವೆ. ಈ ರೋಗ ವೃದ್ಧಿಯಾಗಲು ಹೆಚ್ಚು ಆರ್ದ್ರತೆ (ಶೇ 86–98), ಕಡಿಮೆ ರಾತ್ರಿ ಉಷ್ಣಾಂಶ (20 ಸೆ.) ಮತ್ತು ಸಾರಜನಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ರೋಗ ಬರುತ್ತದೆ. ಬೆಳಗಿನ ಇಬ್ಬನಿ, ಮೋಡ ಕವಿದ ವಾತಾವರಣ, ಸಾಲುಗಳ ನಡುವಿನ ಅಂತರ, ಹೆಚ್ಚು ಮಳೆ ಮತ್ತು ತುಂತುರು ಮಳೆ ಹನಿ, ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆ ಈ ರೋಗ ತೀವ್ರವಾಗಿ ಹರಡಲು ಕಾರಣಗಳಾಗಿವೆ. ಈ ರೋಗವು ಕೇವಲ 15 ರಿಂದ 20 ಗಂಟೆಗಳ ಅವಧಿಯಲ್ಲಿ ಇತರೆ ಪ್ರದೇಶಗಳಿಗೂ ವೇಗವಾಗಿ ಹರಡುತ್ತದೆ ಎಂದು ಅವರು ಹೇಳುತ್ತಾರೆ.
Highlights - 15 ರಿಂದ 20 ಗಂಟೆಗಳ ಅವಧಿಯಲ್ಲಿ ವೇಗವಾಗಿ ಹರಡುವ ಕಾಯಿಲೆ ಕೆಲವೇ ಗಂಟೆಗಳ ಅವಧಿಯಲ್ಲಿ ಈ ಹೊಲವನ್ನೇ ಆವರಿಸಿಕೊಳ್ಳುವ ಶಿಲೀಂಧ್ರ ಮುನ್ನಚ್ಚರಿಕೆ ವಹಿಸಲು ಸಲಹೆ
ಸೋಮವಾರಪೇಟೆ ಪಿರಿಯಾಪಟ್ಟಣ ಹುಣಸೂರು ಕುಶಾಲನಗರ ತಾಲ್ಲೂಕುಗಳಲ್ಲಿ ಹೆಚ್ಚಾಗಿರುವುದು ಕಂಡು ಬಂದಿದೆ. ಸೂಕ್ತ ಮುಂಜಾಗ್ರತೆ ವಹಿಸಬೇಕುಡಾ.ಕೆ.ವಿ.ವೀರೇಂದ್ರಕುಮಾರ್ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಗೋಣಿಕೊಪ್ಪಲು
ಹತೋಟಿ ಹೇಗೆ?
ಗೋಣಿಕೊಪ್ಪಲುವಿನ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ಕೆ.ವಿ.ವೀರೇಂದ್ರಕುಮಾರ್ ಅವರು ಈ ರೋಗದ ಹತೋಟಿಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದಾರೆ.
‘ಸಾರಜನಕವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಕೊಡಬೇಕು. ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು 1.0 ಮಿ.ಲಿ ಪ್ರೊಪಿಕೋನಜೋಲ್ ಅಥವಾ 2.0 ಗ್ರಾಂ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಎಂಬ ಶಿಲೀಂಧ್ರನಾಶಕದಲ್ಲಿ ಪ್ರತಿ ಲೀಟರ್ ನೀರಿಗೆ ಬೆರಸಿ 30 ನಿಮಿಷಗಳ ಕಾಲ ಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು. ಈ ರೋಗದ ಬಾಧೆ ಈಗಾಗಲೆ ಕಂಡು ಬಂದಿರುವ ಶುಂಠಿಯ ತೋಟಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 1.0 ಮಿ.ಲಿ ಪ್ರೊಪಿಕೋನಜೋಲ್ ಅಥವಾ ಟೆಬುಕೊನಜೋಲ್ 1.0 ಮಿ.ಲಿ ಶಿಲೀಂಧ್ರನಾಶಕ ಅಂಟು ದ್ರಾವಣವನ್ನು ಸೇರಿಸಿ ಮಳೆ ಬಿಡುವು ಕೊಟ್ಟಾಗ ಸಿಂಪಡಿಸಬೇಕು. ಪೈರಿಕ್ಯುಲೇರಿಯ ಶಿಲೀಂಧ್ರವು ಅತಿ ವೇಗವಾಗಿ ಹರಡುವುದರಿಂದ ರೈತರು ತ್ವರಿತಗತಿಯಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ’ ಎಂದು ಅವರು ಹೇಳಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ಗೋಣಿಕೊಪ್ಪಲುವಿನ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರವನ್ನು ಮೊ:9741621493 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.