ADVERTISEMENT

ಶನಿವಾರಸಂತೆ: ಬಹುದಿನದ ಕನಸು ನನಸಾಗುವ ಕ್ಷಣ

ಶನಿವಾರಸಂತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ಇಂದು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 5:45 IST
Last Updated 11 ಸೆಪ್ಟೆಂಬರ್ 2024, 5:45 IST
<div class="paragraphs"><p>ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿದ್ದ ಗುಂಡಿಗಳನ್ನು ತರಾತುರಿಯಲ್ಲಿ ಮಂಗಳವಾರ ಮುಚ್ಚಲಾಯಿತು</p></div>

ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿದ್ದ ಗುಂಡಿಗಳನ್ನು ತರಾತುರಿಯಲ್ಲಿ ಮಂಗಳವಾರ ಮುಚ್ಚಲಾಯಿತು

   

ಶನಿವಾರಸಂತೆ: ಇಲ್ಲಿನ ಸಾರ್ವಜನಿಕರ ಬಹುದಿನದ ಕನಸು ನನಸಾಗುವ ವೇಳೆ ಹತ್ತಿರ ಬಂದಿದೆ. ಸುಮಾರು 50 ವರ್ಷಗಳಿಂದ ಇಲ್ಲಿನ ಜನರು ಬಸ್ ನಿಲ್ದಾಣಕ್ಕಾಗಿ ಒತ್ತಾಯಿಸುತ್ತಿದ್ದರು. ಅದೀಗ ಕೈಗೂಡುವ ಹೊತ್ತು ಬಂದಿದೆ. ಸೆ. 11ರಂದು ಬೆಳಿಗ್ಗೆ 11 ಗಂಟೆಗೆ ಬಸ್‌ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಲಿದೆ.

ವಿಧಾನಸಭಾ ಚುನಾವಣೆ ವೇಳೆಯಲ್ಲಿ ಶಾಸಕ ಡಾ.ಮಂತರ್‌ಗೌಡ ಇಲ್ಲಿನ ಜನರು ಕೈಹಿಡಿದರೆ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ, ಚುನಾವಣೆಯಲ್ಲಿ ಜಯಶಾಲಿಯಾಗಿ ಶನಿವಾರಸಂತೆಗೆ ಆಗಮಿಸಿದ ವೇಳೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಬಸ್ ನಿಲ್ದಾಣವನ್ನು ಮಾಡಲಾಗುವುದು ಎಂದು ತಮ್ಮ ಭರವಸೆಯನ್ನು ಪುನರುಚ್ಚರಿಸಿದ್ದರು. ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ ಸ್ಥಳದಲ್ಲಿ ಬುಧವಾರ ಇಂದು ಶೀಲಾನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ADVERTISEMENT

ಇಲ್ಲಿನ ಐ.ಬಿ ರಸ್ತೆಯ ಪ್ರವಾಸಿ ಮಂದಿರದ ಬಳಿ ಜಾಗವನ್ನು ಗುರುತುಪಡಿಸಿ ಬಸ್ ನಿಲ್ದಾಣಕ್ಕೆ ಕಾಯ್ದಿರಿಸಲಾಗಿತ್ತು. ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಕಂದಾಯ ಇಲಾಖೆಯಿಂದ ಹತ್ತಾಂತರಿಸಲಾಗಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಆಸಕ್ತಿಯಿಂದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಶಾಸಕರಿಂದ ಅನುದಾನ ಕೋರಲಾಯಿತು. ಈ ಬಗ್ಗೆ ಶಾಸಕರು ಅಲ್ಪ ಪ್ರಮಾಣದ ಅನುದಾನದಿಂದ ಉತ್ತಮ ಸೌಕರ್ಯವುಳ್ಳ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತರಿಸುವಂತೆ ಶನಿವಾರಸಂತೆಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಸೂಚಿಸಿದರು. ನಿಗಮಕ್ಕೆ ಆ ಜಾಗವನ್ನು ಹಸ್ತಾಂತರ ಮಾಡಲಾಗಿದೆ.

ಶನಿವಾರಸಂತೆಯು ಪ್ರಮುಖವಾಗಿ ರೈತರು ತಾವು ಬೆಳೆದಂತ ಬೆಳೆಗಳನ್ನು ಮಾರಾಟ ಮಾಡುವ ಕೇಂದ್ರವಾಗಿ ಹೆಸರು ಮಾಡಿದೆ. ಹಾಸನದ ಗಡಿ ಗ್ರಾಮಗಳಿಗೆ ಶನಿವಾರಸಂತೆ ಹೋಬಳಿಯು ಹೊಂದಿಕೊಂಡಿದೆ. ಹೀಗಿದ್ದರೂ, ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದ ಕಾರಣ ಅಂಗಡಿ ಮುಂಗಟ್ಟಿನ ಎದುರು ನಿಂತು ಬಸ್ ಹತ್ತುವ ಸನ್ನಿವೇಶವಿದೆ. ಮಳೆಯಲ್ಲಿ ನೆನೆದು, ಬೇಸಿಗೆಯಲ್ಲಿ ಬಾಡಿ ಬಸ್‌ ಗಳನ್ನು ನಿರೀಕ್ಷಿಸುವುದು ಇಲ್ಲಿನ ಜನರ ಗೋಳಾಗಿದೆ.

ಶನಿವಾರಸಂತೆಯಲ್ಲಿ 7 ಕೆಎಸ್‌ಆರ್‌ಟಿಸಿ ಬಸ್‌ಗಳು ರಾತ್ರಿ ವೇಳೆ ತಂಗುತ್ತಿವೆ. ಚಾಲಕರು ಮತ್ತು ನಿರ್ವಾಹಕರು ಶೌಚಾಲಯದ  ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಇದೀಗ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಳ್ಳುತ್ತಿರುವುದು ಅವರಿಗೂ ಸಂತಸ ತಂದಿದೆ.

ಸಚಿವರ ಆಗಮನ: ಗುಂಡಿಗೆ ಸಿಕ್ಕಿತು ಮುಕ್ತಿ!

ಶನಿವಾರಸಂತೆ: ಇಲ್ಲಿನ ಸೆ. 11ರಂದು ನಡೆಯಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶಿಲಾನ್ಯಾಸಕ್ಕೆ ನೆರವೇರಿಸಲು ಸಾರಿಗೆ ಮತ್ತು ಮುಜುರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಬರಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎಚ್ಚೆತ್ತು ಗ್ರಾಮ ಪಂಚಾಯಿತಿ ತರಾತುರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಸಿದೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು, ಸವಾರರು ಹೈರಣಾಗಿದ್ದರು. ಅಷ್ಟೂ ದಿನಗಳಿಂದ ನೋಡಿದರೂ ನೋಡದಂತಿದ್ದ ಗ್ರಾಮ ಪಂಚಾಯಿತಿ ಈಗ ಸಚಿವರ ಆಗಮನವಾಗುತ್ತಿದೆ ಎಂಬ ಮಾಹಿತಿ ಅರಿತು ಗುಂಡಿ ಮುಚ್ಚುವ ಕಾರ್ಯ ನಡೆಸುತ್ತಿದೆ.

ಈ ಕಾರ್ಯವನ್ನೂ ಸಂಚಾರ ಇಲ್ಲದ ಸಮಯದಲ್ಲಿ ರಾತ್ರಿ ವೇಳೆ, ನಸುಕಿನಲ್ಲಿ ನಡೆಸದೇ ಮಂಗಳವಾರ ಮಧ್ಯಾಹ್ನ ನಡೆಸಿದ್ದರಿಂದ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕೇವಲ ಇಲ್ಲಿ ಮಾತ್ರವಲ್ಲ ಪಟ್ಟಣದಲ್ಲೆಲ್ಲ ಇರುವ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಯಿತಿಯ ಕಸ ವಿಲೇವಾರಿ ವಾಹನವನ್ನು ಅಡ್ಡಲಾಗಿ ನಿಲ್ಲಿಸಿರುವುದು.

ವಿಶೇಷ ವರದಿ ಪ್ರಕಟಿಸಿದ್ದ ‘ಪ್ರಜಾವಾಣಿ’

ಶನಿವಾರಸಂತೆಯಲ್ಲಿ ಬಸ್‌ ನಿಲ್ದಾಣ ಇಲ್ಲದೆ ಪ್ರಯಾಣಿಕರು ಪಡುತ್ತಿರುವ ಸಂಕಷ್ಟ ಕುರಿತು ‘ಪ್ರಜಾವಾಣಿ’ ಈ ಹಿಂದೆ ‘ಬಸ್‌ನಿಲ್ದಾಣಕ್ಕೆ ಮೊರೆ ಇಟ್ಟ ಜನತೆ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

ಬಿಸಿಲಿನಲ್ಲಿ ಬಸವಳಿಯುವ ಹಾಗೂ ಮಳೆಯಲ್ಲಿ ನೆನೆಯುವ ಪ್ರಯಾಣಿಕರ ಪಡಿಪಾಟೀಲನ್ನು ವರದಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.