ADVERTISEMENT

‘ಕೊಂಬಾಟ್ ನೃತ್ಯ’ ಪ್ರದರ್ಶನದ ಆಕರ್ಷಣೆ

ಸಿದ್ದಾಪುರ ಸಮೀಪದ ಚೆಟ್ಟಳ್ಳಿಯ ಚೇರಳ ಶ್ರೀಭಗವತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 12:37 IST
Last Updated 4 ಮಾರ್ಚ್ 2019, 12:37 IST
ಚೇರಳ ಉತ್ಸವದಲ್ಲಿ ಕೊಂಬಾಟ್‌ ನೃತ್ಯ ಪ್ರದರ್ಶನದ ದೃಶ್ಯ
ಚೇರಳ ಉತ್ಸವದಲ್ಲಿ ಕೊಂಬಾಟ್‌ ನೃತ್ಯ ಪ್ರದರ್ಶನದ ದೃಶ್ಯ   

ಮಡಿಕೇರಿ: ಸಿದ್ದಾ‍ಪುರ ಸಮೀಪದ ಚೆಟ್ಟಳ್ಳಿಯ ಚೇರಳ ಶ್ರೀಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಇಲ್ಲಿ ‘ಕೊಂಬಾಟ್‌ ನೃತ್ಯ’ ಪ್ರದರ್ಶನವೇ ಉತ್ಸವದ ಆಕರ್ಷಣೆ. ಕೊಂಬಾಟ್‌ ಪ್ರದರ್ಶನದೊಂದಿಗೆ ಉತ್ಸವಕ್ಕೆ ತೆರೆಬಿತ್ತು.

ಫೆ. 26ರಂದು ಬೆಳಿಗ್ಗೆ ಗ್ರಾಮಸ್ಥರು ದೇವರ ಬೊಳಕ್‌ ಮರವನ್ನು ದುಡಿಕೊಟ್ಟ್ ಹಾಡಿನೊಂದಿಗೆ ದೇವಾಲಯದ ಮುಂದೆ ನಿಲ್ಲಿಸಿ, ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ದೇವರ ದೀಪ ಹಚ್ಚಿ ಬೊಳಕ್‌ ಮರ ಸುತ್ತ ಜಿಂಕೆ ಕೊಂಬನ್ನಿಟ್ಟು ಪೂಜಿಸಿ ದೇವರ ಹಬ್ಬಕಟ್ಟ್ ಬಿದ್ದಿತ್ತು.

ಮಾರ್ಚ್ 1ರಂದು ಪಟ್ಟಣಿ ಹಬ್ಬ ಆಯೋಜಿಸಲಾಗಿತ್ತು. ಕಲ್ಡಚ್ಚ ಹೋಗುವ ಸಂಪ್ರದಾಯದಂತೆ ಗ್ರಾಮದ 10 ವರ್ಷದ ಒಳಗಿನ ಹೆಣ್ಣು ಮಕ್ಕಳು ದೇವಾಲಯದಿಂದ ಕಳಸದ ನೀರನ್ನು ತೆಗೆದುಕೊಂಡು ಹೋಗಿ ಬನದಲ್ಲಿ ಪೂಜೆ ಮಾಡಿದ್ದರು.

ADVERTISEMENT

ಪಾಯಿಸವಿಟ್ಟು ನೈವೇದ್ಯವನ್ನೂ ಮಾಡಲಾಗಿತ್ತು. ಅಂದೇ ದಿನ ಮಧ್ಯಾಹ್ನ 3ಕ್ಕೆ ಗ್ರಾಮಸ್ಥರೆಲ್ಲ ಒಂದುಗೂಡಿ ಒಡ್ಡೋಲಗ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ಪೂಜೆ ಸಲ್ಲಿಸಿದ್ದರು.

ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರ ತಂದು ದೇವಾಲಯದಲ್ಲಿ ಮಹಾಪೂಜೆ ನೆರವೇರಿಸಲಾಗಿತ್ತು. ಕೊಂಬಾಟ್ ನೃತ್ಯ ಪ್ರದರ್ಶನದ ನಂತರ ದೇವರ ಭಂಡಾರವನ್ನು ಒಡ್ಡೋಲಗ ಹಾಗೂ ದುಡ್ಡಿಕೊಟ್ಟ್‌ನೊಂದಿಗೆ ದೇವತಕ್ಕರ ಮನೆಯಲ್ಲಿ ಇರಿಸಲಾಗಿತ್ತು.

ಮಾರ್ಚ್ 2ರಂದು ಅಯ್ಯಪ್ಪ ದೇವರ ಬನಕ್ಕೆ ತೆರಳಿ ದೇವರಿಗೆ ಬಲಿ ನೀಡಿ ದೇವರ ಪ್ರಸಾದವನ್ನು ಸ್ವೀಕರಿಸಲಾಗಿತ್ತು. ದೇವಾಲಯಕ್ಕೆ ಬಂದು ತೆಂಗಿನಕಾಯಿಗೆ ಗುಂಡು ಹೊಡೆದು ದೇವರ ಕಟ್ಟು ಮುರಿಯಲಾಗಿತ್ತು.

ಭಾನುವಾರ ಚೇರಳ ಶ್ರೀಭಗವತಿ ‘ದೇವರ ದೊಡ್ಡ ಹಬ್ಬ’ ನಡೆಯಿತು. ಭಗವತಿ ದೇವಿಗೆ ಭಕ್ತರು ಹೂಮಾಲೆ ಹಾಗೂ ವಸ್ತ್ರಾಭರಣದಿಂದ ಅಲಂಕರಿಸಿದ್ದರು. ಬಿಳಿ ಕುಪ್ಪಸದಟ್ಟಿ ಧಿರಿಸಿದ್ದ ಗ್ರಾಮಸ್ಥರು ಹಾಡಿನೊಂದಿಗೆ ನೃತ್ಯ ಪ್ರದರ್ಶನ ಮಾಡಿದರು.

ಚೇರಳ ತಮ್ಮಂಡ ಆನಂದ್‌ ಹಾಗೂ ಊರು ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಅವರ ನೇತೃತ್ವದಲ್ಲಿ ಪೂಜೆ ನೆರವೇರಿತು. ಹಬ್ಬಕ್ಕೆ ಬಂದವರಿಗೆ ಹಾಗೂ ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬಿಳಿ ಕುಪ್ಪಸದಟ್ಟಿ ತೊಟ್ಟಂತಹ ಗ್ರಾಮಸ್ಥರು ದೇವಾಲಯದಲ್ಲಿ ಇಟ್ಟಿದ್ದ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ನೃತ್ಯ ಪ್ರದರ್ಶನ ಮಾಡಿದರು. ಹೋ.. ವಯ್ಯ.. ಹೋ... ಹೋ... ವಯ್ಯ ಹೋ... ಎಂದು ದೇವರನ್ನು ಕರೆಯುತ್ತಾ 18 ಬಗೆಯ ವಿಶೇಷ ಕೊಂಬಾಟ್ ನೃತ್ಯ ಮಾಡಿದ್ದು ಎಲ್ಲರ ಮನಸೂರೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.