ADVERTISEMENT

ಹೆದ್ದಾರಿ ಬದಿ ಪಟ್ಟಣದಲ್ಲಿ ಟ್ರಾಫಿಕ್‌ನದ್ದೇ ಚಿಂತೆ

ಸುಂಟಿಕೊಪ್ಪ: ಸಂತೆಯ ದಿನ ಜನರು ಹೈರಾಣ, ಚಾಲಕರಿಗೂ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:30 IST
Last Updated 14 ಮಾರ್ಚ್ 2020, 19:30 IST
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ನಿಲುಗಡೆಯಾದರಿಂದ ಉಳಿದ ವಾಹನಗಳಿಗೆ ತೊಂದರೆಯಾಗಿರುವುದು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ನಿಲುಗಡೆಯಾದರಿಂದ ಉಳಿದ ವಾಹನಗಳಿಗೆ ತೊಂದರೆಯಾಗಿರುವುದು.   

ಸುಂಟಿಕೊಪ್ಪ: ಪಟ್ಟಣದ ಹೃದಯ ಭಾಗದಲ್ಲೇ ರಾಷ್ಟ್ರೀಯ ಹೆದ್ದಾರಿ–275 ಹಾದುಹೋಗಿದ್ದು, ದಿನಂಪ್ರತಿ ಈ ರಸ್ತೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರು ಸೇರಿದಂತೆ ಸ್ಥಳೀಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ತುರ್ತು ಸಂದರ್ಭದಲ್ಲಿ ವಾಹನ ನಿಲುಗಡೆ ಮಾಡಲು ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೇ ಚಾಲಕರು ಹೈರಾಣಾಗಿದ್ದಾರೆ.

ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ಸರಿಯಾದ ಜಾಗವಿಲ್ಲದೇ ಇರುವುದರಿಂದ ಪ್ರವಾಸಿಗರು ಸೇರಿದಂತೆ ಇತರರು ಯಾವುದೇ ವ್ಯಾಪಾರ ಮಾಡಲು ಸಾದ್ಯವಾಗಿಲ್ಲ. ದೂರದ ಕುಶಾಲನಗರ ಅಥವಾ ಮಡಿಕೇರಿಯತ್ತ ತೆರಳುತ್ತಿರುವುದರಿಂದ ವ್ಯಾಪಾರವು ಕೂಡ ಕುಂಠಿತವಾಗಿದೆ ಎಂಬ ನೋವು ವ್ಯಕ್ತವಾಗುತ್ತಿದೆ.

ಪಟ್ಟಣದಲ್ಲಿ ಪಾರ್ಕಿಂಗಿಗಾಗಿ ಯಾವುದೇ ಜಾಗ ಗುರುತಿಸಿಲ್ಲ. ಆದರೂ, ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ 10-12 ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ಬೆಳಿಗ್ಗೆ ಪಾರ್ಕಿಂಗ್ ಮಾಡುವ ಹೆಚ್ಚಿನ ವಾಹನಗಳು ಸಂಜೆಯ ನಂತರವೇ ಚಾಲಕರು ತಮ್ಮ ವಾಹನವನ್ನು ಅಲ್ಲಿಂದ ತೆರವುಗೊಳಿಸುತ್ತಿರುವುದರಿಂದ ಬೇರೆ ವಾಹನಗಳ ಪಾರ್ಕಿಂಗ್ ಮಾಡುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ.

ಒಂದುವೇಳೆ ಅಂಗಡಿಗಳಿಗೆ ತೆರಳಿ ದಿನನಿತ್ಯದ ಸಾಮಗ್ರಿಗಳನ್ನು ಕೊಳ್ಳಬೇಕಾದರೆ ಅಂಗಡಿಗಳ ಮುಂದೆಯೇ ನಿಲ್ಲಿಸಬೇಕಾಗುತ್ತದೆ. ಆದರೆ, ಪೊಲೀಸರು ಅದಕ್ಕೆ ಅವಕಾಶವನ್ನು ನೀಡುತ್ತಿಲ್ಲ. ಇದರಿಂದ ವಾಹನಗಳ ಮಾಲೀಕರು, ಚಾಲಕರು ಸಮಸ್ಯೆಗೆ ಒಳಗಾಗಿದ್ದಾರೆ.

ADVERTISEMENT

ಸಮರ್ಪಕವಾದ ವಾಹನ ನಿಲುಗಡೆ ಸ್ಥಳವಿಲ್ಲದಿರುವುದರಿಂದ ಸಿಕ್ಕಸಿಕ್ಕಲ್ಲಿ ವಾಹನಗಳನ್ನು ನಿಲ್ಲಿಸಿ ಚಾಲಕರು ತೆರಳಿದಾಗ ಪೊಲೀಸರು ಅದಕ್ಕೆ ಲಾಕ್ ಮಾಡಿದಂತಹ ಸಂದರ್ಭ ಪೊಲೀಸರು ಮತ್ತು ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಘಟನೆಯೂ ಇದೆ.

ಪ್ರಮುಖವಾಗಿ ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಮಿತಿಮೀರುತ್ತಿದ್ದು ಆ ಸಮಯದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗುತ್ತಿದೆ. ಸಾರ್ವಜನಿಕರು ರಸ್ತೆ ದಾಟಲು ಕಷ್ಟಪಡುತ್ತಿದ್ದಾರೆ.

ಅದರಲ್ಲೂ ಶನಿವಾರ ಮತ್ತು ಭಾನುವಾರವಂತೂ ಆಟೊ ರಿಕ್ಷಾಗಳನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲುಗಡೆಗೊಳಿಸುತ್ತಿರುವುದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರಿಗೂ ಬಹಳಷ್ಟು ಅಡ್ಡಿ ಉಂಟಾಗಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಮಿತಿಮೀರುತ್ತಿದ್ದು, ವಾಹನ ನಿಲುಗಡೆ ಜಾಗ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ದೂರುತ್ತಾರೆ ಸಾರ್ವಜನಿಕರು.

ಬಸ್ ತಂಗುದಾಣವಿಲ್ಲದೇ ಜನರು ತತ್ತರ

ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇಲ್ಲಿ ಪ್ರತಿನಿತ್ಯ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಓಡಾಡುತ್ತಿರುತ್ತವೆ. ಆದರೆ, ಬಸ್‌ಗಳನ್ನು ನಿಲುಗಡೆಗೊಳಿಸಲು ಇಲ್ಲಿ ಬಸ್‌ ತಂಗುದಾಣವೇ ಇಲ್ಲ!

ಪ್ರಯಾಣಿಕರು, ವಯೋವೃದ್ಧರು, ವಿದ್ಯಾರ್ಥಿಗಳು ಅಂಗಡಿಗಳ ಮುಂದೆಯೇ ನಿಲ್ಲಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ. ಕೆಲವೊಮ್ಮೆ ಬಸ್‌ಗಳು ಪ್ರಯಾಣಿಕರನ್ನು ಬಿಟ್ಟು ಹೋಗಿರುವ ದೃಶ್ಯವು ಸರ್ವೇ ಸಾಮಾನ್ಯ. ಹೆಚ್ಚು ಹೊತ್ತು ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಸಂದರ್ಭ ಟ್ರಾಫಿಕ್ ಸಮಸ್ಯೆ ಉಂಟಾಗಿ ಕೆಲವೇ ಮಂದಿ ಪ್ರಯಾಣಿಕರನ್ನು ಹತ್ತಿಸುವ ಸ್ಥಿತಿ ಬಂದಿದೆ.

ಇದಲ್ಲದೇ ರಸ್ತೆಬದಿಯ ಅಂಗಡಿ ಮಳಿಗೆಗಳ ಮಾಲೀಕರು ಬೆಳಿಗ್ಗಿನಿಂದ ರಾತ್ರಿಯ ತನಕ ತಮ್ಮ ವಾಹನಗಳನ್ನು ನಿಲ್ಲಿಸುತ್ತಿರುವ ಬಗ್ಗೆ ಉಳಿದ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಲು ಸಾದ್ಯವಾಗುತ್ತಿಲ್ಲ. ಮಾದಾಪುರ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಆ ಭಾಗದಲ್ಲಿ ಶಾಲೆಗಳು ಕಾರ್ಯಚರಿಸುತ್ತಿರುವುದರಿಂದ ಅಲ್ಲಿಯೂ ವಾಹನಗಳ ನಿಲುಗಡೆಗೆ ಕಷ್ಟವಾಗುತ್ತದೆ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ.

ಸುಂಟಿಕೊಪ್ಪ ಪಟ್ಟಣ ಕಿರಿದಾಗಿದೆ. ವಾಹನಗಳ ನಿಲುಗಡೆಗೆ ಸಾಧ್ಯವಾಗುತ್ತಿಲ್ಲ. ಈಗ ಇರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ತೆರವುಗೊಳಿಸಿದರೆ ವಿಸ್ತಾರವಾದ ಜಾಗ ದೊರೆತು ಬಸ್ ತಂಗುದಾಣ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ದೊರೆಯಲಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಹಲವು ವರ್ಷಗಳಿಂದ ಕಂಡುಬರುತ್ತಿರುವ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಿದಲ್ಲಿ ಸಾರ್ವಜನಿಕರು, ವಾಹನ ಮಾಲೀಕರು ಮತ್ತು ಚಾಲಕರು ನಿಟ್ಟುಸಿರು ಬಿಡುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.