ADVERTISEMENT

ಕೋವಿಡ್-19 ಭೀತಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ನರ್ಸ್‌‌ಗಳ ನಿಯೋಜನೆ

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 14:00 IST
Last Updated 21 ಮಾರ್ಚ್ 2020, 14:00 IST
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ   

ಮಡಿಕೇರಿ: ಇದೇ 27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, 27 ಪರೀಕ್ಷೆ ಕೇಂದ್ರಗಳಲ್ಲೂ ನರ್ಸ್‌ಗಳ ನಿಯೋಜನೆ ಮಾಡಲಾಗುವುದು. ಮಾಸ್ಕ್‌ ಧರಿಸಿಯೇ ಪರೀಕ್ಷೆ ಬರೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣದಲ್ಲಿ ಜಿಲ್ಲಾಡಳಿತ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದರು.

ಕೋವಿಡ್-19 ದೇಶವನ್ನೇ ಬೆಚ್ಚಿ ಬೀಳಿಸಿದೆ. ರಾಜ್ಯದಲ್ಲಿ ವಿಶೇಷವಾಗಿ ಮಡಿಕೇರಿಯಲ್ಲಿ 242 ಜನರು ವಿದೇಶದಿಂದ ಜಿಲ್ಲೆಗೆ ಬಂದಿದ್ದಾರೆ. ಅವರಿಗೆ ಅವರವರ ಮನೆಯಲ್ಲೇ ವೈದ್ಯಕೀಯ ತಪಾಸಣೆ ನಡೆಸಿ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ಹೋಂ ಕ್ವಾರಂಟೈನ್‌ನಲ್ಲಿ ಇರುವ ಮಂದಿಗೆ ಜಿಲ್ಲಾಡಳಿತವೂ ಅಗತ್ಯ ಸವಲತ್ತುಗಳನ್ನು ಒದಗಿಸುತ್ತಿದೆ. ಅಗತ್ಯ ವಸ್ತುಗಳ ಸಾಗಣೆ ಹೊರತು ಪಡಿಸಿ ಈಗಾಗಲೇ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಮೂರು ಜಿಲ್ಲೆಯ ಗಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದರು.
ಕೊರೊನಾ ಮಹಾಮಾರಿಯನ್ನು ಪ್ರಧಾನಿ ಮೋದಿ ಅವರೇ ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ್ದಾರೆ. ಶಂಕಿತ 8 ಮಂದಿ ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ತಪಾಸಣೆಗೆ ಒಳಗಾಗಿದ್ದಾರೆ‌ ಎಂದು ಹೇಳಿದರು.

ಹಕ್ಕಿಜ್ವರ ಜಿಲ್ಲೆಗೆ ವ್ಯಾಪಿಸಿಲ್ಲ. ಇದರ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ ಎಂದು ಹೇಳಿದರು.
ಅತತೀಸೂಕ್ಷ್ಮ ಹಾಗೂ ಸೂಕ್ಷ್ಮ ವಲಯಗಳ ಎಸ್ಸೆ‌ಸ್ಸೆಲ್ಸಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಗಳು ಆಗುವುದಿಲ್ಲ. ಕೊರೊನಾ ತಡೆಗಟ್ಟಲು ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಮದುವೆ- ಶುಭ ಸಮಾರಂಭಗಳನ್ನು ಮುಂದೂಡಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕಿದೆ. ಮೈಸೂರಿಗೆ 300 ಕೊರೊನಾ ತಪಾಸಣಾ ಕಿಟ್‌ಗಳ ಫೈಕಿ 92 ಬಳಸಿದ್ದು, ಇನ್ನೂ 400 ಬರಲಿವೆ. ಜನರು ಧೈರ್ಯವಾಗಿ ಇರಬೇಕು ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಧಾನಿ ಮೋದಿ ಅವರು ನಾಳೆ ದೇಶದಾದ್ಯಂತ ಕರೆ ಕೊಟ್ಟಿರುವ ಜನರು ಕಫ್ಯೂಗೆ ಜನತೆ ಬೆಂಬಲ ಸೂಚಿಸಬೇಕು. ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.‌

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ. ಪನ್ನೇಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT