ADVERTISEMENT

ಕೊಡಗು: ಭಾಗಶಃ ಹಾನಿ, ಸರ್ವೆಯಲ್ಲಿ ತಾರತಮ್ಯ, ಭುಗಿಲೆದ್ದ ಆಕ್ರೋಶ

ಸಂತ್ರಸ್ತರ ಅಳಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 14:13 IST
Last Updated 17 ಸೆಪ್ಟೆಂಬರ್ 2018, 14:13 IST
ಕುಸಿದಿರುವ ಮನೆಯ ದೃಶ್ಯ
ಕುಸಿದಿರುವ ಮನೆಯ ದೃಶ್ಯ   

ಮಡಿಕೇರಿ: ಭೂಕುಸಿತ, ಮಹಾಮಳೆಯಿಂದ ಸಂತ್ರಸ್ತರಾದವರಿಗೆ ಭವಿಷ್ಯದ ಚಿಂತೆ ಕಾಡುತ್ತಲೇ ಇದೆ. ಜಿಲ್ಲಾಡಳಿತ ಪುನರ್ವಸತಿಗೆ 100 ಎಕರೆ ಜಾಗ ವಶಕ್ಕೆ ಪಡೆದು ಸಮತಟ್ಟು ಕಾರ್ಯ ಪೂರ್ಣಗೊಳಿಸಿದೆ.

ಗುರುತಿಸಲಾದ ಜಾಗದಲ್ಲಿ ಮೂರು ಮಾದರಿಯ ಮನೆಗಳ ನಿರ್ಮಾಣ ಕಾರ್ಯ ಬಿಟ್ಟರೆ, ಪುನರ್ವಸತಿಯ ಕಾರ್ಯ ವೇಗ ಪಡೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಗ್ರಾಮೀಣ ಪ್ರದೇಶಕ್ಕೆ ರಸ್ತೆ ಸಂಪರ್ಕಿಸುವ ಕಾಮಗಾರಿಗಳು ತಾತ್ಕಾಲಿಕವಾಗಿ ಮಾತ್ರ ನಡೆಯುತ್ತಿವೆ. ಕೇಂದ್ರದ ವಿಶೇಷ ಪ್ಯಾಕೇಜ್‌ ಘೋಷಣೆಯ ವಿಳಂಬದಿಂದ ಮನೆ ನಿರ್ಮಾಣ, ಶಾಶ್ವತ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾರ್ಯವೂ ವಿಳಂಬವಾಗಿದೆ.

ADVERTISEMENT

ಕಾಫಿ ತೋಟವನ್ನು ಕಳೆದುಕೊಂಡ ರೈತರಿಗೆ ಎಷ್ಟು ಪ್ರಮಾಣದ ಪರಿಹಾರವನ್ನು ನೀಡಲಾಗುತ್ತದೆ ಎಂಬುದೂ ಅಂತಿಮವಾಗಿಲ್ಲ. ಹೀಗಾಗಿ, ಸಂತ್ರಸ್ತರು ದಿಕ್ಕು ತೋಚದೇ ಕಾಲಕಳೆಯುವ ಸ್ಥಿತಿಯಲ್ಲಿಯೇ ಇದ್ದಾರೆ.

ತೋಟದ ಮಾಲೀಕರು ಕಂಗಾಲು: ಜಿಲ್ಲೆಯಲ್ಲಿ 4 ಸಾವಿರ ಎಕರೆಯಷ್ಟು ಕಾಫಿ ತೋಟ ಭೂಕುಸಿತಕ್ಕೆ ಸಿಲುಕಿದೆ. ಇನ್ನು ಕೆಲವು ವರ್ಷಗಳು ಅಲ್ಲಿ ಬೆಳೆ ಬೆಳೆಯಲು ಅಸಾಧ್ಯ ಎನ್ನುವ ಸ್ಥಿತಿಯಿದೆ.

ಮಕ್ಕಂದೂರು, ಮುಕ್ಕೋಡ್ಲು, ತಂತಿಪಾಲ, ಕಾಂಡನಕೊಲ್ಲಿ, ಎಮ್ಮೆತಾಳ, ಹಟ್ಟಿಹೊಳೆಯಲ್ಲಿ ನಾಲ್ಕರಿಂದ ಐದು ಎಕರೆ ಭೂಮಿ ಹೊಂದಿದ್ದ ಬೆಳೆಗಾರರು, ಸಂಪೂರ್ಣ ತೋಟವನ್ನೇ ಕಳೆದುಕೊಂಡಿದ್ದಾರೆ. ಆದರೆ, ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಕನಿಷ್ಠಮಟ್ಟದ ಪರಿಹಾರ ನೀಡುತ್ತಿರುವುದು ಆಕ್ರೋಶಕ್ಕೆ ತುತ್ತಾಗಿದೆ.

ಈಗಿನ ನಿಯಮಾವಳಿಯಂತೆ ಹೆಕ್ಟೇರ್‌ಗೆ ₹ 18 ಸಾವಿರ ಮಾತ್ರ ಪರಿಹಾರ ಲಭಿಸಲಿದೆ. ಎಷ್ಟೇ ಪ್ರಮಾಣದ ಭೂಮಿ ಕಳೆದುಕೊಂಡಿದ್ದರೂ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಪರಿಹಾರ ಲಭಿಸಲಿದೆ. ಇಷ್ಟು ಪರಿಹಾರ ನೀಡುವುದಾದರೆ ಬೇಡ ಎನ್ನುವ ಮಾತುಗಳು ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿವೆ.

ಕೆಲವೆಡೆ ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೂ ಭಾಗಶಃ ಹಾನಿಯೆಂದು ಅಧಿಕಾರಿಗಳು ಉಲ್ಲೇಖಿಸಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

‘ಹೆಬ್ಬಟ್ಟಗೇರಿ ಗ್ರಾಮಕ್ಕೆ ತೆರಳಲು ರಸ್ತೆಯೇ ಇಲ್ಲ. ಸುತ್ತಲೂ ಬೆಟ್ಟ ಕುಸಿದು ನಿಂತಿದೆ. ಮತ್ತೆ ಮಳೆ ಬಂದರೆ ಭಾರೀ ಅನಾಹುತದ ಸಾಧ್ಯತೆಯಿದೆ. ಆದರೂ, ಅಧಿಕಾರಿಗಳು ವಾಸಯೋಗ್ಯವೆಂದು ವರದಿ ನೀಡಿದ್ದಾರೆ. ಬೇಕಿದ್ದರೆ ಅಧಿಕಾರಿಗಳೇ ಇಲ್ಲಿಗೆ ಬಂದು ಬದುಕಲಿ’ ಎಂದು ಗ್ರಾಮಸ್ಥ ನಾರಾಯಣ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.