ADVERTISEMENT

ಪತ್ರಿಕಾ ವಿತರಕರ ದಿನಾಚರಣೆ | ಮಡಿಕೇರಿ: ನಗರಸಭೆಗೆ ತಲುಪದ ಪತ್ರಿಕಾ ವಿತರಕರ ಕೂಗು

ಕೆ.ಎಸ್.ಗಿರೀಶ್
Published 4 ಸೆಪ್ಟೆಂಬರ್ 2025, 4:12 IST
Last Updated 4 ಸೆಪ್ಟೆಂಬರ್ 2025, 4:12 IST
ಮಡಿಕೇರಿಯಲ್ಲಿ ದಿನಪತ್ರಿಕೆಗಳನ್ನು ವಿಂಗಡಿಸಿಕೊಳ್ಳಲು ಕಡುಕಷ್ಟ ಅನುಭವಿಸುತ್ತಿರುವ ಪತ್ರಿಕಾ ವಿತರಕರು
ಮಡಿಕೇರಿಯಲ್ಲಿ ದಿನಪತ್ರಿಕೆಗಳನ್ನು ವಿಂಗಡಿಸಿಕೊಳ್ಳಲು ಕಡುಕಷ್ಟ ಅನುಭವಿಸುತ್ತಿರುವ ಪತ್ರಿಕಾ ವಿತರಕರು   

ಮಡಿಕೇರಿ: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ನೆನೆಯುತ್ತ, ಬೀಸುತ್ತಿರುವ ಶೀತಗಾಳಿಯಲ್ಲಿ ನಡುಗುತ್ತಾ, ದಿನಪತ್ರಿಕೆಗಳನ್ನು ವಿಂಗಡಿಸಲು ಹರಸಾಹಸಪಡುತ್ತಿದ್ದಾರೆ ಪತ್ರಿಕಾ ವಿತರಕರು. ಅಂಗೈ ಅಗಲದಷ್ಟು ಜಾಗಕ್ಕಾಗಿ ಇವರು ನಿರಂತರವಾಗಿ ನೀಡುತ್ತಿರುವ ಮನವಿಗೆ ಇಲ್ಲಿನ ನಗರಸಭೆ ಅಕ್ಷರಶಃ ಕಿವುಡಾಗಿದೆ.

ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರನ್ನು ಪ್ರತಿ ವರ್ಷವೂ ನಿರಂತರವಾಗಿ ಭೇಟಿ ಮಾಡಿ ಜಾಗಕ್ಕಾಗಿ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು ಬದಲಾಗುತ್ತಾರೆಯೇ ವಿನಹ ಅವರ ಮನೋಭಾವ ಮಾತ್ರ ಇನ್ನೂ ಬದಲಾಗಿಲ್ಲ ಎಂದು ಪತ್ರಿಕಾ ವಿತರಕರು ಬೇಸರ ವ್ಯಕ್ತಪಡಿಸುತ್ತಾರೆ.

ಪತ್ರಿಕಾ ವಿತರಕರ ಕಡುಕಷ್ಟದ ಕೆಲಸವನ್ನು ನೋಡಬೇಕಾದರೆ ಇಲ್ಲಿನ ಜನರಲ್‌ ತಿಮ್ಮಯ್ಯ ವೃತ್ತದಲ್ಲಿರುವ ಕಟ್ಟಡವೊಂದಕ್ಕೆ ಬೆಳಿಗ್ಗೆ 5 ಗಂಟೆಗೆ ಬರಬೇಕು. ಆಗ ಇವರು ಪಡುತ್ತಿರುವ ಕಷ್ಟದ ಅರಿವಾಗುತ್ತದೆ. ಬೀಸುತ್ತಿರುವ ಗಾಳಿಗೆ ತೂರಿ ಹೋಗುವ ಪತ್ರಿಕೆಗಳನ್ನು ಹಿಡಿದಿಟ್ಟುಕೊಂಡು, ಮಳೆ ನೆನೆಯದಂತೆ ಖಾಸಗಿಯವರ ಕಟ್ಟಡದಲ್ಲಿ ಆಶ್ರಯ ಬೇಡುತ್ತಾ ಒಂದು ಹನಿಯೂ ದಿನಪತ್ರಿಕೆಗಳಿಗೆ ಸೋಕದ ಹಾಗೆ ಜೋಪಾನವಾಗಿ ಪತ್ರಿಕೆ ವಿಂಗಡಿಸಿ ಮನೆಮನೆಗೆ ಹಾಕಲು ಹೊರಡುತ್ತಾರೆ.

ADVERTISEMENT

ಈಗ ಇವರಿಗೆ ಜಾನುವಾರುಗಳ ಕಾಟವೂ ಆರಂಭವಾಗಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ರಕ್ಷಿಸಿಕೊಳ್ಳಲು ಜಾನುವರುಗಳೂ ಇದೇ ಜಾಗವನ್ನು ಆಶ್ರಯಿಸು‌ತ್ತಿವೆ. ಇದರಿಂದ ಇವು ಹಾಕುವ ಗಂಜಲ, ಸಗಣಿಯನ್ನು ಸ್ವಚ್ಛಗೊಳಿಸಿ ನಂತರ ಪತ್ರಿಕೆಗಳ ವಿಂಗಡನೆಗೆ ಕೂರಬೇಕಿದೆ. ಇಷ್ಟು ಕಷ್ಟಪಟ್ಟರೂ, ನಗರಸಭೆ ಮಾತ್ರ ಈ ಕಾಯಕಯೋಗಿಗಳ ಕಷ್ಟ ನಿವಾರಣೆಗೆ ಪ್ರಯತ್ನ ನಡೆಸಿಲ್ಲ.

ಬೇಡಿಕೆ ಏನು?

ಒಂದು ನಿರ್ದಿಷ್ಟ ಸ್ಥಳದಲ್ಲಿ ಪತ್ರಿಕಾ ವಿತರಕರಿಗಾಗಿ ಜಾಗ ಹಾಗೂ ವಿದ್ಯುತ್ ಸಂಪರ್ಕ ನೀಡಿದರೆ ಸಾಕು. ಉಳಿದೆಲ್ಲ ವ್ಯವಸ್ಥೆಗಳನ್ನು ತಾವೇ ಮಾಡಿಕೊಳ್ಳುವುದಾಗಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಜಿ.ಸತೀಶ್ ಹೇಳುತ್ತಾರೆ.

ಈಗಾಗಲೇ ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ಅನುಮತಿ ನೀಡಿ, ಮೂಲಸೌಕರ್ಯಗಳನ್ನು ಅಲ್ಲಿನ ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಗಳು ಕಲ್ಪಿಸಿವೆ. ಅಷ್ಟೇ ಏಕೆ ಕುಶಾಲನಗರದಲ್ಲೂ ಪುರಸಭೆ ವ್ಯವಸ್ಥೆ ಕಲ್ಪಿಸಿದೆ. ಸದ್ಯ, ನಮಗೆ ಜಾಗಕ್ಕೆ ಅನುಮತಿ ಹಾಗೂ ವಿದ್ಯುತ್ ಸಂಪರ್ಕ ನೀಡಿದರೆ ಸಾಕು ಎಂದು ಇಲ್ಲಿನ ಪತ್ರಿಕಾ ವಿತರಕರು ಕೇಳುತ್ತಿದ್ದಾರೆ. ಆದರೆ, ಇವರ ಬೇಡಿಕೆ ಈಡೇರಿಸುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ.

ಟಿ.ಜಿ.ಸತೀಶ್.
ನಂಗಾರು ಜಮುನಾ ವಸಂತ್
ಮಡಿಕೇರಿಯ ಪತ್ರಿಕಾ ವಿತರಕರು ನಿರ್ದಿಷ್ಟ ಜಾಗದ ಕುರಿತು ಮನವಿ ಪತ್ರ ಸಲ್ಲಿಸಿದರೆ ಅದನ್ನು ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲು ಪರಿಗಣಿಸಲಾಗುವುದು
ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ

7 ಸಾವಿರ ಪತ್ರಿಕೆಯವರೆಗೆ...‌

ನಾನು 3ನೇ ತರಗತಿ ಓದುತ್ತಿರುವಾಗಲೆ ಮನೆಮನೆಗೆ ದಿನಪತ್ರಿಕೆಗಳನ್ನು ಹಾಕುತ್ತಿದ್ದೆ. ಸ್ವಂತವಾಗಿ ಪತ್ರಿಕಾ ವಿತರಕನಾಗಿ ಕಳೆದ 26 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಆಗ ನನ್ನ ಕೈಯಲ್ಲಿ ಕೇವಲ ಬೆರಳೆಣಿಕೆಯಷ್ಟು ದಿನಪತ್ರಿಕೆಗಳಿದ್ದವು. ಆದರೆ, ಈಗ ಸುಮಾರು 7 ಸಾವಿರಕ್ಕೂ ಅಧಿಕ ದಿನಪತ್ರಿಕೆಗಳನ್ನು ನಿತ್ಯವೂ ಸರಬರಾಜು ಮಾಡುತ್ತಿದ್ದೇನೆ. ನನ್ನದೇ ಆದ ಜನಪ್ರಿಯ ನ್ಯೂಸ್ ಏಜೆನ್ಸಿಯನ್ನು ಆರಂಭಿಸಿರುವೆ. ಇತ್ತೀಚಿನ ದಿನಗಳಲ್ಲಿ ಯುವ ತಲೆಮಾರು ದಿನಪತ್ರಿಕೆಗಳ ಖರೀದಿಯಿಂದ ದೂರವೇ ಉಳಿಯುತ್ತಿದ್ದಾರೆ

ಟಿ.ಜಿ.ಸತೀಶ್‌, ಪತ್ರಿಕಾ ವಿತರಕ, ಜನಪ್ರಿಯ ನ್ಯೂಸ್ ಏಜೆನ್ಸಿ.

ಪತ್ರಿಕೆ ಎಂದರೆ ಲಕ್ಷ್ಮಿ; ಜಮುನಾ
ಪತ್ರಿಕೆ ಎಂದರೆ ಅದು ಲಕ್ಷ್ಮಿ ಎಂದು ನಾನು ಭಾವಿಸಿರುವೆ. ಪತ್ರಿಕಾ ವಿತರಣೆಯನ್ನು ಕರಾರುವಕ್ಕಾಗಿ ಶಿಸ್ತುಬದ್ಧವಾಗಿ ಮಾಡಿದರೆ ಬದುಕು ಸಾಗಿಸಲು ಯಾವುದೇ ತೊಂದರೆ ಇರದು. ಆದರೆ ಸಮಾಜ ಮತ್ತು ಸರ್ಕಾರ ನಮಗೊಂದು ಗೌರವ ಕೊಡಬೇಕು. ಈ ಕ್ಷೇತ್ರಕ್ಕೆ ಕಾಲಿಡುವಾಗ ಒಂದು ತಿಂಗಳು ಇರುತ್ತೇನೋ ಅಥವಾ 6 ತಿಂಗಳು ಇರುತ್ತೇನೋ ಎಂಬ ಭಾವನೆಯಿಂದಲೇ ಬಂದೆ. ಆದರೆ ಈಗ 15 ವರ್ಷಗಳು ಉರುಳಿವೆ. ಒಂದು ದಿನವೂ ರಜೆ ಮಾಡದೇ ಪತಿಯ ಸಹಕಾರದಿಂದ ಕಾರ್ಯನಿರ್ವಹಿಸುತ್ತಿರುವೆ. ನಂಗಾರು ಜಮುನಾ ವಸಂತ್ ಪತ್ರಿಕಾ ವಿತರಕರು ಗೋಣಿಕೊಪ್ಪಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.