
ಮಡಿಕೇರಿ: ಸಾವಯವ ಗೊಬ್ಬರದ ಬಳಕೆಯಿಂದ ಸಮಗ್ರ ಕೃಷಿ ಮಾಡಿ ಉತ್ತಮ ಇಳುವರಿ ಪಡೆದವರು ತಾಲ್ಲೂಕಿನ ಮರಗೋಡು ಗ್ರಾಮದ ಪ್ರೇಮಾ ಗಣೇಶ್. ಇವರಿಗೆ ಕೃಷಿ ಪಂಡಿತ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳು ಸಿಕ್ಕಿವೆ. ಈ ವರ್ಷ ಕಾಳು ಮೆಣಸಿಗೆ ಸಂಬಂಧಿಸಿದಂತೆ ಭಾರತೀಯ ಸಾಂಬರ ಮಂಡಳಿಯು ಇವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ.
ಇವರ 35 ಎಕರೆ ತೋಟದಲ್ಲಿ ಕಾಫಿ, ಕಾಳು ಮೆಣಸು, ಅಡಿಕೆ, ಹಲವು ಬಗೆಯ ಹಣ್ಣಿನ ಗಿಡಗಳು, ಹಸು ಮತ್ತು ಕೋಳಿ ಸಾಕಾಣಿಕೆ ಸೇರಿದಂತೆ ಸಮಗ್ರ ಕೃಷಿ ನಳನಳಿಸುತ್ತಿದೆ.
ಇವರ ತೋಟದಲ್ಲಿಯೇ ಒಟ್ಟು 3 ಕೆರೆಗಳಿವೆ. ಇವುಗಳ ಸುತ್ತಲೂ ಸಮೃದ್ಧ ಅಡಿಕೆ ಬೆಳೆಯುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಇದ್ದ ಕಾಳು ಮೆಣಸಿನ ಬಳ್ಳಿಗಳ ಬದಲಿಗೆ ಅವರು ಈಗ ವಿನೂತನವಾದ ತಳಿಗಳನ್ನು ಹಾಕಿದ್ದಾರೆ. ತೇವಂ, ಕೂರ್ಗ್ ಎಕ್ಸೆಲ್, ಚಂದ್ರ ಎಂಬ ಹೊಸ ತಳಿಗಳ ಸುಮಾರು 3 ಸಾವಿರಕ್ಕೂ ಹೆಚ್ಚು ಬಳ್ಳಿಗಳನ್ನು ನೆಟ್ಟಿದ್ದಾರೆ.
ಇವರು ಅನೇಕ ಬಗೆಯ ಹಣ್ಣಿನ ಗಿಡಗಳನ್ನೂ ಬೆಳೆಯುವ ಮೂಲಕ ಸೈ ಎನಿಸಿದ್ದಾರೆ. ಅದರಲ್ಲಿ ಲಿಚಿ ಹಣ್ಣಿನ ಮರವೊಂದರಲ್ಲಿ 400 ಕೆ.ಜಿಯಷ್ಟು ಇಳುವರಿ ಪಡೆದು ದಾಖಲೆ ನಿರ್ಮಿಸಿದ್ದಾರೆ. ಲಿಚಿ ಅಲ್ಲದೇ ದುರೇನಿಯಾ, ರಾಂಬುಟನ್, 6 ತಳಿಯ ಸಪೋಟ ಗಿಡಗಳು, 8 ತಳಿಯ ಮಾವು, ಸೀಬೆ, ಬಾಳೆ, ಹಲಸಿನ ಮರಗಳು ಇವರ ತೋಟದಲ್ಲಿವೆ.
ಗಿರ್ ತಳಿಯ ಹಸುಗಳು ಸೇರಿದಂತೆ ಯಶಸ್ವಿಯಾಗಿ ಪಶಸಂಗೋಪನೆ ಮಾಡುತ್ತಿರುವ ಇವರ ಬಳಿ ನಿತ್ಯ ಮೊಟ್ಟೆ ಇಡುವ ಬಿವಿ 380 ತಳಿಯ ಕೋಳಿಗಳೂ ಇವೆ.
ಕಾಫಿಯಲ್ಲಿ ಒಂದು ಎಕರೆಗೆ 40–50 ಬ್ಯಾಗ್ ಪಡೆಯುವ ಮೂಲಕ ಯಶಸ್ವಿ ಕಾಫಿ ಬೆಳೆಗಾರರು ಎಂಬ ಮನ್ನಣೆಗೂ ಇವರು ಪಾತ್ರರಾಗಿದ್ದಾರೆ.
ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಹುಳ ಗೊಬ್ಬರ, ಜೀವಾಮೃತ ಇವೆಲ್ಲದರ ಬಳಕೆಯಿಂದ ಈ ಕೃಷಿ ಸಾಧ್ಯವಾಗಿದೆ ಎಂದು ಪ್ರೇಮಾ ಗಣೇಶ್ ಹೇಳುತ್ತಾರೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘1981ರಿಂದ ಪತಿ ಕೆ.ಎಂ.ಗಣೇಶ್ ಅವರೊಂದಿಗೆ ಸೇರಿ ಸಮಗ್ರ ಕೃಷಿ ಮಾಡುತ್ತಿರುವೆ. ಯಾಂತ್ರಿಕರಣವನ್ನು ಹೆಚ್ಚು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವೆ. ರಾಸಾಯನಿಕ ಗೊಬ್ಬರಗಳ ಜತೆಗೆ ವೈಜ್ಞಾನಿಕವಾಗಿ ಸಾವಯವ ಗೊಬ್ಬರವನ್ನೂ ಹಾಕುವುದರಿಂದ ಉತ್ತಮ ಇಳುವರಿ ಬಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.