ಮಡಿಕೇರಿ: ವಿವಿಧ ಬ್ಯಾಂಕುಗಳಿಂದ ಸಾಲ ತೆಗೆದುಕೊಂಡು ಮರು ಪಾವತಿ ಮಾಡದೇ ಸಂಕಷ್ಟಕ್ಕೆ ಸಿಲುಕಿದ್ದ ಕಾಫಿ ಬೆಳೆಗಾರರಿಗಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ಒನ್ ಟೈಮ್ ಸೆಟಲ್‌ಮೆಂಟ್’ (ಓಟಿಎಸ್) ಜೂನ್ 30ಕ್ಕೆ ಕೊನೆಗೊಂಡಿದೆ. ಒಟ್ಟು 8 ತಿಂಗಳ ಕಾಲ ಚಾಲ್ತಿಯಲ್ಲಿದ್ದ ಈ ಕಾರ್ಯಕ್ರಮದಡಿ ₹ 3.5 ಸಾವಿರದಿಂದ ₹ 4 ಸಾವಿರ ಮಂದಿ ಪ್ರಯೋಜನಗಳನ್ನು ಪಡೆದುಕೊಂಡರು.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಕಾಫಿ ಮಂಡಳಿ ಹಾಗೂ ಇತರರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಈ ‘ಓಟಿಎಸ್’ಅನ್ನು ಜಾರಿಗೆ ತಂದು, ಜೂನ್ 30ರವರೆಗೆ ಕಾಲಮಿತಿ ನಿಗದಿ ಮಾಡಿತ್ತು. ಒಟ್ಟು ಸುಮಾರು 10 ಸಾವಿರ ಕಾಫಿ ಬೆಳೆಗಾರರು ಸಾಲ ಮರುಪಾವತಿಸಲಾಗದೇ ಸುಮಾರು ₹ 1,600 ಕೋಟಿಯಷ್ಟು ಸಾಲ ಬಾಕಿ ಉಳಿಸಿಕೊಂಡಿದ್ದರು. ಈ ಪೈಕಿ 3.5 ಸಾವಿರದಿಂದ 4 ಸಾವಿರ ಮಂದಿ ನಿಗದಿತ ಅವಧಿಯಲ್ಲಿ ಸಾಲ ಮರು ಪಾವತಿಸಿದ್ದಾರೆ ಎಂದು ಕಾಫಿ ಮಂಡಳಿ ಮೂಲಗಳು ತಿಳಿಸಿವೆ.
ಈ ‘ಓಟಿಎಸ್’ ಕಾರ್ಯಕ್ರಮದಡಿ ಸರಳ ಬಡ್ಡಿದರದಲ್ಲಿ ಸಾಲ ಮರುಪಾವತಿಸುವ ಅವಕಾಶ ಸಿಕ್ಕಿದ್ದು ವಿಶೇಷ. ₹ 25 ಲಕ್ಷದವರೆಗೆ 4 ವರ್ಷ ಮರುಪಾವತಿ ಮಾಡಿಲ್ಲದ ಸಾಲಕ್ಕೆ ಶೇ 3ರ ಸರಳ ಬಡ್ಡಿದರದಲ್ಲಿ ಸಾಲ ಮರುಪಾವತಿಸುವ ಅವಕಾಶ ಈ ‘ಓಟಿಎಸ್’ ಅಡಿಯಲ್ಲಿ ದೊರೆತಿತ್ತು. ಇದೇ ರೀತಿ ₹ 25 ಲಕ್ಷದಿಂದ ₹ 50 ಲಕ್ಷದವರೆಗೆ 4 ವರ್ಷಕ್ಕೂ ಮೀರಿದ ಸಾಲಕ್ಕೆ ಶೇ 4ರ ಸರಳ ಬಡ್ಡಿದರದಲ್ಲಿ ಸಾಲ ಮರುಪಾವತಿಸುವ ಅವಕಾಶ ನೀಡಲಾಯಿತು ಎಂದು ಮೂಲಗಳು ಹೇಳಿವೆ.
ಆದರೆ, ಇನ್ನೂ 6 ಸಾವಿರ ಬೆಳೆಗಾರರು ಈ ‘ಓಟಿಎಸ್’ ಕಾರ್ಯಕ್ರಮದಡಿ ಬಾರದೇ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇವರ ಮೇಲೆ ಈಗ ‘ಸಫ್ರೇಸಿ’ ಕಾಯ್ದೆಯ ತೂಗುಗತ್ತಿ ಇದೆ. ಈಗಲೂ ಸಾಲ ಮರುಪಾವತಿಗೆ ಅವಕಾಶ ಇದೆ. ಆದರೆ, ‘ಓಟಿಎಸ್’ ಅಡಿ ನೀಡಿದ ರಿಯಾಯಿತಿ ಬಡ್ಡಿದರದ ಸೌಲಭ್ಯ ಈಗ ಸಿಕ್ಕುವುದಿಲ್ಲ. ಆದರೆ, ಆಯಾಯ ಬ್ಯಾಂಕಿಗೆ ಸಂಬಂಧಿಸಿದಂತೆ ಬೇರೆ ರಿಯಾಯಿತಿಗಳಿರುತ್ತವೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೊಡಗು ಜಿಲ್ಲೆ ಒಂದರಲ್ಲೇ ಮಾರ್ಚ್ ಅಂತ್ಯದ ವೇಳೆಗೆ ಈ ಕಾರ್ಯಕ್ರಮದಡಿ 1,111 ಮಂದಿ ಸಾಲ ಮರುಪಾವತಿಸಿದ್ದರು. ಈ ‘ಓಟಿಎಸ್’ ಕಾರ್ಯಕ್ರಮವನ್ನು ಇನ್ನಷ್ಟು ಅವಧಿಗೆ ವಿಸ್ತರಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದರು.
ಕಾಫಿಗೆ ಈಗ ಉತ್ತಮ ದರ ಇದ್ದರೂ ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಕಾರ್ಮಿಕರ ಕೂಲಿಗಳು, ಉಲ್ಬಣಾವಸ್ಥೆ ತಲುಪಿದ ವನ್ಯಜೀವಿ– ಮಾನವ ಸಂಘರ್ಷಗಳು ಸೇರಿದಂತೆ ಅನೇಕ ಸಮಸ್ಯೆಗಳಿಂದ ಕಾಫಿ ಬೆಳೆಗಾರರು ನಲುಗಿದ್ದಾರೆ. ಬೆಳೆ ಹೆಚ್ಚು ಸಿಕ್ಕರೂ ಲಾಭ ಸಿಗದ ಸ್ಥಿತಿ ಇದೆ. ಹಾಗಾಗಿ, ಸಾಲ ಮರುಪಾವತಿ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಇದನ್ನು ಮನಗಂಡ ಕಾಫಿ ಮಂಡಳಿ ಹಾಗೂ ಇತರರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ‘ಓಟಿಎಸ್’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಇದಕ್ಕೆ ಕೆಲವು ಸಂಸದರು ಹಾಗೂ ಸಂಘಟನೆಗಳು, ಬೆಳೆಗಾರರ ಸಂಘಗಳೂ ಕೈಜೋಡಿಸಿದ್ದವು.
‘ಓಟಿಎಸ್’ನಿಂದ 4 ಸಾವಿರ ಬೆಳೆಗಾರರಿಗೆ ಪ್ರಯೋಜನ
‘ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ಓಟಿಎಸ್’ ಕಾರ್ಯಕ್ರಮದ ಲಾಭವನ್ನು 4 ಸಾವಿರ ಬೆಳೆಗಾರರು ಪಡೆದುಕೊಂಡರು. ಅವರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಮರುಪಾವತಿಸುವ ಅವಕಾಶ ಲಭ್ಯವಾಯಿತು. ಆದರೆ ಇನ್ನೂ 6 ಸಾವಿರ ಮಂದಿ ಈ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾದರು’ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಕಾರ್ಯಕ್ರಮದಿಂದ ಅನೇಕ ಮಂದಿ ತಮ್ಮ ತೋಟಗಳನ್ನು ಮನೆಗಳನ್ನು ಉಳಿಸಿಕೊಂಡರು. ಕೇಂದ್ರ ಸರ್ಕಾರ ನೀಡಿದ ಈ 8 ತಿಂಗಳ ಅವಕಾಶ ಫಲ ನೀಡಿತು ಎಂದರು.
‘ಓಟಿಎಸ್’ ಮುಂದುವರಿಸಲು ಒತ್ತಾಯ
‘ಓಟಿಎಸ್’ ಕಾರ್ಯಕ್ರಮವನ್ನು ಇನ್ನಷ್ಟು ಅವಧಿಗೆ ಮುಂದುವರಿಸಬೇಕು’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್ ಒತ್ತಾಯಿಸಿದರು. ಈ ಯೋಜನೆಯಡಿ ಅನೇಕ ಬೆಳೆಗಾರರು ಸಾಲ ಮರುಪಾವತಿಸಿದ್ದಾರೆ. ಇನ್ನೂ ಅನೇಕ ಬೆಳೆಗಾರರು ಉಳಿದುಕೊಂಡಿದ್ದಾರೆ. ಇವರಿಗೆ ಮತ್ತೊಂದು ಅವಧಿಗೆ ‘ಓಟಿಎಸ್’ ಮುಂದುವರಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.