ADVERTISEMENT

ಭತ್ತದ ಬೇಸಾಯ ಬಿಟ್ಟ ರೈತರು..!

ನಾಲ್ಕುನಾಡು ವ್ಯಾಪ್ತಿಯಲ್ಲಿ ಮುಂಗಾರು ಕ್ಷೀಣ

ಸಿ.ಎಸ್.ಸುರೇಶ್
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
ನಾಪೋಕ್ಲು ಬಳಿಯ ಬೇತು ಗ್ರಾಮದಲ್ಲಿ ಭತ್ತದ ಬೇಸಾಯಕ್ಕಾಗಿ ಅಲ್ಪಪ್ರಮಾಣದಲ್ಲಿ ಗದ್ದೆ ಉಳುಮೆ ಮಾಡಿರುವುದು
ನಾಪೋಕ್ಲು ಬಳಿಯ ಬೇತು ಗ್ರಾಮದಲ್ಲಿ ಭತ್ತದ ಬೇಸಾಯಕ್ಕಾಗಿ ಅಲ್ಪಪ್ರಮಾಣದಲ್ಲಿ ಗದ್ದೆ ಉಳುಮೆ ಮಾಡಿರುವುದು   

ನಾಪೋಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ವಾರದಿಂದ ಬಿಸಿಲಿನ ವಾತಾವರಣವಿದ್ದು, ಬೆಳೆಗಾರರು ಭತ್ತದ ಬೇಸಾಯದಿಂದ ವಿಮುಖರಾಗಿದ್ದಾರೆ.

ಮಳೆಯ ಏರುಪೇರು ಬಹುತೇಕ ರೈತರನ್ನು ಬೇಸಾಯದಿಂದಲೇ ದೂರವೇ ಉಳಿಯುವಂತೆ ಮಾಡಿದೆ. ಇದರ ಪರಿಣಾಮ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಪಾಳು ಬಿದ್ದಿವೆ. ಕೆಲವು ರೈತರು ಬಾಳೆ ಸೇರಿದಂತೆ, ಮತ್ತಿತರ ಬೆಳೆಗಳತ್ತ ದೃಷ್ಟಿ ಹರಿಸಿದ್ದರೆ; ಅಲ್ಲಲ್ಲಿ ಉಳುಮೆ ನಡೆಸಿದ್ದ ರೈತರ ಗದ್ದೆಗಳು ಒಣಗುತ್ತಿವೆ.

ನೀರಿನ ಕೊರತೆ ಬಿತ್ತನೆ ಕಾರ್ಯಕ್ಕೆ ತೊಡಕಾಗಿದೆ. ನಾಲ್ಕುನಾಡು ವ್ಯಾಪ್ತಿಯಲ್ಲಿ ಭತ್ತದ ಕೃಷಿಯನ್ನು ಕೈಗೊಳ್ಳುವವರ ಸಂಖ್ಯೆ ಇಳಿಮುಖಗೊಳ್ಳುತ್ತಿದ್ದು, ಅಲ್ಲಲ್ಲಿ ಭತ್ತದ ಕೃಷಿ ಮಾಡುವವರು ಸಸಿ ಮಡಿ ತಯಾರಿಸಲು ಗದ್ದೆಯ ಉಳುಮೆ ಆರಂಭಿಸಿದ್ದರು. ಹಿಂದಿನ ವರ್ಷಗಳಲ್ಲಿ ಈ ಸಮಯದಲ್ಲಿ ಉತ್ತಮ ಮಳೆಯಾಗಿ ಸಸಿ ಮಡಿಯಲ್ಲಿ ಭತ್ತದ ಬಿತ್ತನೆ ಆರಂಭಗೊಂಡಿತ್ತು. ಆದರೆ ಈ ಬಾರಿ ಮುಂಗಾರು ತಡವಾಗುತ್ತಿದ್ದು, ಮಳೆ ಕ್ಷೀಣಗೊಂಡ ಪರಿಣಾಮ ಬೆಳೆಗಾರರಿಗೆ ಸಮಸ್ಯೆಯಾಗಿದೆ.

ADVERTISEMENT

‘ಹಿಂದೆ ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗದ್ದೆಗಳು ಉಳುಮೆಯಾಗಿ, ಭತ್ತದ ಸಸಿ ಮಡಿಗಳು ಸಿದ್ಧವಾಗುತ್ತಿದ್ದವು. ಈಚೆಗೆ ಕಾರ್ಮಿಕರ ಕೊರತೆ, ಬದಲಾದ ಹವಾಮಾನ, ಕುಂಠಿತಗೊಳ್ಳುವ ಇಳುವರಿ, ಉತ್ಪಾದನೆಗೆ ಅಧಿಕ ಖರ್ಚು ಮತ್ತಿತರ ಕಾರಣಗಳಿಂದ ಬೆಳೆಗಾರರು ಭತ್ತದ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಹವಾಮಾನದ ಏರುಪೇರು ಸಹ ಭತ್ತದ ಬೇಸಾಯಗಾರರನ್ನು ಕಂಗೆಡಿಸಿದೆ. ಯಾರೂ ಶ್ರಮ ವಹಿಸಲು ಸಿದ್ದರಿಲ್ಲ’ ಎಂದು ಬೇತು ಗ್ರಾಮದ ರೈತ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.

‘ಕೆಲವೇ ಕೆಲವು ರೈತರು ತಮಗೆ ಬೇಕಾದಷ್ಟು ಮಾತ್ರ ಭತ್ತ ಬೆಳೆಯುತ್ತಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಬೇತು, ಕೈಕಾಡು, ಪಾರಾಣೆ, ಕಕ್ಕಬ್ಬೆ ಸೇರಿದಂತೆ ಹಲವು ಗ್ರಾಮಗಳ ಭತ್ತದ ಗದ್ದೆಗಳಲ್ಲಿ ಕಾಡು ತುಂಬಿದೆ. ಪರ್ಯಾಯ ಕೃಷಿಯೂ ಸಾಧ್ಯವಾಗುತ್ತಿಲ್ಲ.’

‘ಇದರೊಟ್ಟಿಗೆ ಕಾಡುಪ್ರಾಣಿಗಳ ಉಪಟಳವೂ ಮಿತಿ ಮೀರಿದೆ. ಬೆಳೆಕೊಯ್ಲು ಸಮಯದಲ್ಲಿ ಕಾಡು ಹಂದಿಗಳು ಪೈರುಗಳನ್ನು ನಾಶಪಡಿಸುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೆಲವು ವರ್ಷಗಳಿಂದ ಕಾಡು ಹಂದಿ ಉಪಟಳಕ್ಕೆ ಭತ್ತದ ಬೇಸಾಯವನ್ನು ಕಡೆಗಣಿಸಿರುವ ರೈತರು, ಈ ಬಾರಿ ಮಳೆಯ ಕೊರತೆಯಿಂದಾಗಿ ಭತ್ತದ ಬೇಸಾಯದಿಂದ ದೂರವೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪಡಿಯಾಣಿ ಗ್ರಾಮದ ಅಶ್ರಫ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.