ವಿರಾಜಪೇಟೆ: ಪಟ್ಟಣದ ಕೊರತೆಗಳಲ್ಲಿ ಪ್ರಧಾನವಾಗಿದ್ದ ಪಾದಚಾರಿ ಮಾರ್ಗದ ನಿರ್ಮಾಣ ಕಾಮಗಾರಿ ಇದೀಗ ಆರಂಭವಾಗಿದ್ದು, ಬಿರುಸಿನಿಂದ ಸಾಗುತ್ತಿದೆ.
ವಿರಾಜಪೇಟೆ- ಮೈಸೂರು ರಸ್ತೆಯ ದೊಡ್ಡಟ್ಟಿ ಚೌಕಿಯಿಂದ ಪಟ್ಟಣದ ಕಾವೇರಿ ಕಾಲೇಜಿನವರೆಗಿನ ಒಟ್ಟು 2.22 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಈ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಕೆಗಾಗಿ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಬಿಡುಗಡೆಯಾಗಿರುವ ₹ 5.74 ಕೋಟಿ ಹಣದಲ್ಲಿ ಕಾಮಗಾರಿ ನಡೆಯುತ್ತಿದೆ.
ಕಾವೇರಿ ಕಾಲೇಜಿನಿಂದ ಕಾಮಗಾರಿ ಆರಂಭವಾಗಿದ್ದು, ಪಂಜರುಪೇಟೆಯ ಸರ್ವೋದಯ ವಿದ್ಯಾಸಂಸ್ಥೆಯ ಜಂಕ್ಷನ್‌ವರೆಗೆ ಚರಂಡಿ ನಿರ್ಮಾಣ ಹಾಗೂ ಸ್ಲ್ಯಾಬ್ ಅಳವಡಿಕೆಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನೆಲಹಾಸು ಅಳವಡಿಕೆಯ ಕಾರ್ಯ ನಡೆಯುತ್ತಿದೆ. ನೆಲಹಾಸುಗಳನ್ನು ಅಳವಡಿಸಿದ ಪಾದಚಾರಿ ಮಾರ್ಗವು, ಕಾವೇರಿ ಕಾಲೇಜಿನಿಂದ ಸರ್ವೋದಯ ವಿದ್ಯಾಸಂಸ್ಥೆಯವರೆಗೆ ಎರಡೂ ಬದಿಯೂ ಸುಮಾರು ತಲಾ 2 ಮೀಟರ್ ಅಗಲ ಹಾಗೂ ಸರ್ವೋದಯ ವಿದ್ಯಾಸಂಸ್ಥೆಯಿಂದ ದೊಡ್ಟಟ್ಟಿ ಚೌಕಿಯವರೆಗೆ ಎರಡೂ ಕಡೆ ಅಂದಾಜು 1 ಮೀಟರ್ ಅಗಲ ಇರಲಿದೆ.
ಅಗತ್ಯ ಸ್ಥಳಗಳಲ್ಲಿ ರ‍್ಯಾಂಪ್, ತಡೆಗಂಬಗಳ ಅಳವಡಿಕೆ ಹಾಗೂ ಮಾರ್ಕಿಂಗ್ ಮಾಡಲಾಗುತ್ತದೆ. ಜನ ಸಂಚಾರ ಹೆಚ್ಚಿರುವ ಪಟ್ಟಣದ ದೊಡ್ಡಟ್ಟಿ ಚೌಕಿಯಿಂದ ಸರ್ವೋದಯ ವಿದ್ಯಾಸಂಸ್ಥೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅಂದಾಜು 20 ಮೀಟರ್‌ಗೆ ಒಂದರಂತೆ ಆಧುನಿಕ ಶೈಲಿಯ ಸುಮಾರು 136 ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ.
ಕೆಲ ವರ್ಷಗಳ ಹಿಂದೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ರಸ್ತೆಯನ್ನು ವಿಸ್ತರಣೆಗೊಳಿಸಿದ್ದರಿಂದ ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆ ಗರಿಗೆದರಿ ವರ್ತಕರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಕಾಮಗಾರಿಯು ಈಚಿನ ದಿನಗಳಲ್ಲಿ ವಿರಾಜಪೇಟೆ-ಗೋಣಿಕೊಪ್ಪಲು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಂಟಾಗುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಲು ನೆರವಾಗಲಿದೆ. ಜೊತೆಗೆ, ಈ ಭಾಗದಲ್ಲಿ ಸರ್ವೋದಯ ಹಾಗೂ ಕಾವೇರಿ ಕಾಲೇಜಿನಂತಹ ವಿದ್ಯಾಸಂಸ್ಥೆಗಳಿರುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ನಿಸರ್ಗ ಬಡಾವಣೆ ಹಾಗೂ ಚಾಮುಂಡಿ ಬಡಾವಣೆ ಸೇರಿದಂತೆ ಬಿಟ್ಟಂಗಾಲದ ಕಡೆಗೆ ಸಾಗುವ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಲಿದೆ. ಕಾಮಗಾರಿಯ ಬಳಿಕ ಪಟ್ಟಣದ ಅಂದವು ಹೆಚ್ಚಲಿದೆ.
ವಾಯುವಿಹಾರ ನಡೆಸುವ ಹಿರಿಯರು ಸೇರಿದಂತೆ ಸಾರ್ವಜನಿಕರಿಗೆ ಪಟ್ಟಣದಲ್ಲಿ ಉದ್ಯಾನವಾಗಲಿ ಅಥವಾ ಸೂಕ್ತ ಸ್ಥಳಾವಕಾಶವಾಗಲಿ ಇಲ್ಲ. ಆದ್ದರಿಂದ ಬೆಳಿಗ್ಗೆ ಹಾಗೂ ಸಂಜೆ ಸಾರ್ವಜನಿಕರು ರಸ್ತೆಗಳಲ್ಲೆ ವಾಹನಗಳ ಜೊತೆಗೆ ಸಂಚರಿಸುವ ಮೂಲಕ ವಾಯುವಿಹಾರ ನಡೆಸಬೇಕಾದ ದುಸ್ಥಿತಿ ಪಟ್ಟಣದಲ್ಲಿದೆ. ಆದರೆ, 2.22 ಕಿ.ಮೀ ಉದ್ದದ ಪಾದಚಾರಿ ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ವಾಯುವಿಹಾರಿಗಳು ವಾಹನಗಳ ಭಯವಿಲ್ಲದೆ ನಿರಾತಂಕವಾಗಿ ವಾಯುವಿಹಾರ ನಡೆಸಬಹುದಾಗಿದೆ.
ಪಟ್ಟಣದ ಮುಖ್ಯರಸ್ತೆಯ ಕೆಲಭಾಗಗಳಲ್ಲಿ ಕಂಡು ಬರುವಂತೆ ಈ ಪಾದಚಾರಿ ಮಾರ್ಗವನ್ನು ಕೂಡ ವರ್ತಕರು ಒತ್ತುವರಿ ಮಾಡದಂತೆ ಪುರಸಭೆಯು ಎಚ್ಚರ ವಹಿಸುವುದು ಅಷ್ಟೇ ಮುಖ್ಯ. ಅಭಿವೃದ್ಧಿ ಕಾಮಗಾರಿಗಳ ಕುರಿತು ವೈಯ್ಯಕ್ತಿಕವಾಗಿ ಆಸಕ್ತಿ ತೋರಿಸಿ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಾಮಗಾರಿಯ ಸಂದರ್ಭ ಕೊಂಚವೂ ಲೋಪ ಹಾಗೂ ಕಳಪೆಯಾಗದಂತೆ ಈಗಾಗಲೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಪಾದಚಾರಿ ರಸ್ತೆ ಉದ್ಯಾನ ಭೇತ್ರಿ 2ನೇ ಹಂತದ ಯೋಜನೆಗಳಿಂದ ಜನತೆಗೆ ಅನುಕೂಲವಾಗಲಿದೆ. ಜೊತೆಗೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಕ್ರೀಡಾಂಗಣ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆಅರುಣ್.ಸಿ ವಿರಾಜಪೇಟೆ ನಿವಾಸಿ.
ಆಧುನಿಕ ಮಾದರಿ ನಗರವನ್ನಾಗಿ ವಿರಾಜಪೇಟೆಯನ್ನು ರೂಪಿಸಲು ಹಾಗೂ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಶ್ರಮ ವಹಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ದೊಡ್ಡಮೊತ್ತದ ಅನುದಾನ ನೀಡಿದ ನಗರಾಭಿವೃದ್ಧಿ ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಎ.ಎಸ್.ಪೊನ್ನಣ್ಣ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.