ಮಡಿಕೇರಿ: ‘ಮಂಜಿನ ನಗರ’ಯಲ್ಲಿ ಸಾಲು ದೀಪಗಳಂತೆ ಬೆಳಕಿನ ಹೊಳೆಯನ್ನೇ ಹರಿಸುತ್ತಾ ಸಾಗಿದ ಮಂಟಪಗಳು ನಗರದಲ್ಲಿ ಗುರುವಾರ ರಾತ್ರಿ ಕಂಗೊಳಿಸಿದವು. ಇಲ್ಲಿಯವರೆಗೂ ನಡೆದ ದಸರಾ ಉತ್ಸವಕ್ಕೆ ಕಾರಿರುಳಿನಲ್ಲೂ ಸಂಭ್ರಮದ ಬೆಳಕಿನ ತೆರೆಯನ್ನೆಳೆದವು. ಇಂತಹ ಅಪರೂಪದ ದೃಶ್ಯಗಳನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು.
ಇಲ್ಲಿ ಗುರುವಾರ ರಾತ್ರಿ ಆರಂಭವಾದ ಮಡಿಕೇರಿ ದಸರಾ ದಶ ಮಂಟಪಗಳ ಶೋಭಾಯಾತ್ರೆಯಲ್ಲಿ ಇಂತಹ ದೃಶ್ಯಗಳು ಕಂಡು ಬಂದವು.
ಪಡುವಣದಲ್ಲಿ ಸೂರ್ಯ ಮುಳುಗಿ ಕತ್ತಲಾವರಿಸುತ್ತಿದ್ದಂತೆ ಜನರ ಪ್ರವಾಹವೇ ನುಗ್ಗಿ ಬಂದಂತೆ ಒಮ್ಮೆಗೆ ಜನರು ಮಡಿಕೇರಿಗೆ ಲಗ್ಗೆ ಇಟ್ಟರು. ಎಲ್ಲಿ ನೋಡಿದರಲ್ಲಿ ಜನರೇ ಕಂಡು ಬಂದು, ಇಡೀ ನಗರ ಅಕ್ಷರಶಃ ಜನರಿಂದ ತುಂಬಿ ಹೋಯಿತು. ವಾಹನ ಸಂಚಾರಕ್ಕೆ ಇರಲಿ, ಜನರು ನಡೆದಾಡುವುಕ್ಕೂ ಕೆಲವು ಕಡೆ ಪರದಾಡುವಷ್ಟು ಜನದಟ್ಟಣೆ ಉಂಟಾಯಿತು.
ಮಂಟಪಗಳಲ್ಲಿದ್ದ ಕಲಾಕೃತಿಗಳು, ಅವುಗಳ ಚಲನವಲನಗಳನ್ನು ಚಕಿತ ಕಣ್ಣುಗಳಿಂದ ವೀಕ್ಷಿಸಿದರು. ರಾಕ್ಷಸರ ಮರ್ಧನದಂತಹ ಪ್ರಸಂಗಗಳು ನಡೆದಾಗ ಹೋ ಎಂದು ಉದ್ಘರಿಸಿದರು. ಎಲ್ಲ ಮಂಟಪಗಳು ಮೊದಲಿಗೆ ಪರೀಕ್ಷಾರ್ಥವಾಗಿ ನಡೆಸಿದ ಪ್ರದರ್ಶನಗಳನ್ನು ಆಯಾ ಭಾಗದ ಸ್ಥಳೀಯರು ಗುಂಪುಗೂಡಿ ವೀಕ್ಷಿಸಿದರು.
ಮಂಟಪಗಳಲ್ಲಿನ ಅಪೂರ್ವವಾದ ಬೆಳಕಿನ ವಿನ್ಯಾಸ, ವಿಸ್ಮಯಗೊಳಿಸುವ ಕಥಾಹಂದರ, ನೋಡಿದರೆ ನೋಡುತ್ತಲೇ ಇರಬೇಕೆನ್ನುವಂತೆ ಮಾಡಿತು. ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ರಕ್ಷಣೆಗಾಗಿ ನಿಯೋಜಿಸಲಾಗಿತ್ತು.
ನಗರದ ಒಂದೊಂದು ಭಾಗಗಳಲ್ಲಿ ರೂಪಿತವಾದ ಹತ್ತು ಮಂಟಪಗಳ ಚಲನೆಗೆ ಇಲ್ಲಿನ ಐತಿಹಾಸಿಕ ಪೇಟೆ ಶ್ರೀರಾಮ ಮಂದಿರದ ಮಂಟಪವು ಚಾಲನೆ ನೀಡಿತು. ‘ಕೃಷ್ಣನಿಂದ ಗೀತೋಪದೇಶ’ದ ಕಥಾವಸ್ತುವಿನ ಈ ಮಂಟಪವು ಭಗವದ್ಗೀತೆಯ ಸಂದೇಶಗಳನ್ನು ಪಸರಿಸುತ್ತ ಸಾಗುತ್ತಿದ್ದಂತೆ ‘ಬೆಳಕಿನ ದಸರೆ’ ಆರಂಭಗೊಂಡಿತು.
ಇದರ ಬೆನ್ನಲ್ಲೆ ದೇಚೂರು ಶ್ರೀರಾಮಮಂದಿರವು ತನ್ನ 107ನೇ ವರ್ಷದ ಮಂಟಪೋತ್ಸವಕ್ಕೆ ಅಣಿಯಾಯಿತು. ‘ರಾಮಾಂಜನೇಯ ವೈಭವ’ ಎಂಬ ಕಥಾಹಂದರವನ್ನು ಪ್ರದರ್ಶಿಸಿತು.
ದಂಡಿನ ಮಾರಿಯಮ್ಮ ಮಂಟಪ ಸಮಿತಿಯು ತನ್ನ 95ನೇ ವರ್ಷದ ಮಂಟಪೋತ್ಸವದಲ್ಲಿ ‘ಶಿವನಿಂದ ಅಂಧಾಸುರನ ವಧೆ’ ಕಥಾ ಪ್ರಸಂಗವನ್ನು, ತನ್ನ 63ನೇ ಮಂಟಪೋತ್ಸವದ ಸಂಭ್ರಮದಲ್ಲಿ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ‘ಆನಂದ ರಾಮಾಯಣ’ ಕಥಾವಸ್ತುವನ್ನು ಪ್ರದರ್ಶಿಸಿದವು.
ತನ್ನ 62 ವರ್ಷದ ಮಂಟಪೋತ್ಸವದಲ್ಲಿ ಶ್ರೀ ಕಂಚಿಕಾಮಾಕ್ಷಮ್ಮ ಮತ್ತು ಮುತ್ತುಮಾರಿಯಮ್ಮ ಬಾಲಕ ಮಂಡಳಿಯು ‘ಪರಶುರಾಮನಿಂದ ಕಾರ್ತಿವೀರ ಅರ್ಜುನನ ಕಾಳಗ ಅನಾವರಣ’ ಎಂಬ ಕಥಾಪ್ರಸಂಗವನ್ನು, 52ನೇ ವರ್ಷದ ಮಂಟಪೋತ್ಸವದಲ್ಲಿ ಪರಶಿವನಿಂದ ಜಲಂಧರನ ವಧೆ’ ಪ್ರಸಂಗವನ್ನು ಪ್ರದರ್ಶಿಸಿದವು.
51ನೇ ವರ್ಷಕ್ಕೆ ಅಡಿ ಇಟ್ಟಿರುವ ಇಲ್ಲಿನ ಕೋದಂಡರಾಮ ದೇವಾಲಯ ಸಮಿತಿಯು ತನ್ನ ಮಂಟಪದಲ್ಲಿ ನಡೆಸಿದ ‘ಶ್ರೀ ಕ್ಷೇತ್ರ ಅದಿಚುಂಚನಗಿರಿ ಕಾಲ ಭೈರವ ಮಹಾತ್ಮೆ’ಯನ್ನು, ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ತನ್ನ 50ನೇ ವರ್ಷದ ಮಂಟಪೋತ್ಸವದಲ್ಲಿ ಪ್ರದರ್ಶನಗೊಂಡ ‘ಶರಭವತಾರ ಮತ್ತು ಪ್ರತ್ಯಂಗಿರಾ ದೇವಿಯಿಂದ ಉಗ್ರ ನರಸಿಂಹನ ಉಗ್ರಾವತಾರ ಶಮನ’ ಕಥಾಪ್ರಸಂಗವನ್ನು ಜನರು ಕಣ್ತುಂಬಿಕೊಂಡರು.
ತನ್ನ 49ನೇ ಮಂಟಪೋತ್ಸವದಲ್ಲಿ ಕೋಟೆ ಮಹಾಗಣಪತಿ ದೇಗುಲ ಮಂಟಪ ಸಮಿತಿಯು ‘ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ’ ಕಥಾವಸ್ತುವನ್ನು, ತನ್ನ 30ನೇ ವರ್ಷದ ಮಂಟಪೋತ್ಸವದಲ್ಲಿ ಕರೆವಲೆ ಭಗವತಿ ಮಹಿಷಮರ್ಧಿನಿ ದೇಗುಲ ಮಂಟಪ ಸಮಿತಿಯು ಈ ಬಾರಿ ಆಂಜನೇಯನಿಂದ ದ್ರೋಣಗಿರಿಯನ್ನು ಹೊತ್ತು ತರುವ ಕಥಾ ಸಾರಾಂಶವನ್ನು ಪ್ರದರ್ಶಿಸಿದ್ದನ್ನು ನೋಡಿ ಮಂಟಪದಲ್ಲಿ ನೋಡಿ ಖುಷಿಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.