ADVERTISEMENT

ಹುಲಿ ಸೆರೆಗೆ ಹೆಚ್ಚಿದ ಆಗ್ರಹ: ಜಿಲ್ಲಾಧಿಕಾರಿ ಕಾರಿಗೆ ತಡೆ

ಹುಲಿ ಸೆರೆಗೆ ಹೆಚ್ಚಿದ ಆಗ್ರಹ: ಬೆಳ್ಳೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 16:27 IST
Last Updated 18 ಮಾರ್ಚ್ 2021, 16:27 IST
ಜಿಲ್ಲಾಧಿಕಾರಿ ವಾಹನ ತಡೆದು ಪ್ರತಿಭಟಿಸಿದ ಬೆಳ್ಳೂರು ಗ್ರಾಮಸ್ಥರು
ಜಿಲ್ಲಾಧಿಕಾರಿ ವಾಹನ ತಡೆದು ಪ್ರತಿಭಟಿಸಿದ ಬೆಳ್ಳೂರು ಗ್ರಾಮಸ್ಥರು   

ಪೊನ್ನಂಪೇಟೆ: ಹುಲಿ ಸೆರೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರು, ಗುರುವಾರ ಬೆಳ್ಳೂರಿನಲ್ಲಿ ಡಿಸಿ ಕಾರಿನ ಮುಂಭಾಗ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಳೂರಿನಲ್ಲಿ ನಡೆದಿದ್ದ ಪ್ರತಿಭಟನ ಸ್ಥಳದ ಸಮೀಪದಲ್ಲೇ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಕಾರು ತೆರಳುವುದನ್ನು ಗಮನಿಸಿದ ಪ್ರತಿಭಟನಕಾರರು, ವಾಹನ ತಡೆದು ಹುಲಿ ಸೆರೆ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪೊನ್ನಂಪೇಟೆ-ಕುಟ್ಟ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು.

ADVERTISEMENT

ಪ್ರತಿಭಟನನಿರತರ ಒತ್ತಾಯದ ಮೇರೆಗೆ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಣಾವತ್ ಸ್ಥಳಕ್ಕೆ ಭೇಟಿ ನೀಡಿದ ನಂತರವಷ್ಟೇ ಜಿಲ್ಲಾಧಿಕಾರಿ ವಾಹನ ತೆರಳಲು ಅವಕಾಶವಾಯಿತು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆದಿದೆ. ಜನರು ಇಲಾಖೆಯೊಂದಿಗೆ ಸಹಕರಿಸಬೇಕು. ಹುಲಿ ದಾಳಿಯಿಂದ ಜನರಲ್ಲಿ ಆತಂಕವಿದೆ. ಆದಷ್ಟು ಬೇಗ ಸೆರೆ ಹಿಡಿಯಲಾಗುವುದು. ಸೆರೆ ಪ್ರಯತ್ನ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕಾರ್ಯಾಚರಣೆ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಹಲವು ದಿನ ಅವಕಾಶ ನೀಡಿದರೂ ಹುಲಿ ಸೆರೆ ಹಿಡಿಯುವುದು ಕಾಣಿಸುತ್ತಿಲ್ಲ. ಹುಲಿಯನ್ನು ಸೆರೆ ಹಿಡಿಯುವ ಅಥವಾ ಹತ್ಯೆ ವಿಚಾರದಲ್ಲಿ ಜಿಲ್ಲಾಧಿಕಾರಿ ಬಂದು ನೀಡಿದ ಮಾಹಿತಿ ಯಾವುದೂ ಪೂರ್ಣವಾಗಿಲ್ಲ. ರೈತರು ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡುತ್ತಿಲ್ಲ ಎಂಬಂತೆ ಮಾತನಾಡಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಣಾವತ್ ಮಾತನಾಡಿ ಪರಿಹಾರದ ಚೆಕ್ ನೀಡಲು ಕುಟುಂಬದ ಸದಸ್ಯರಲ್ಲಿ ಬ್ಯಾಂಕ್ ಖಾತೆ ಇಲ್ಲದಿರುವುದು ತೊಂದರೆಯಾಗಿದೆ. ಆದಷ್ಟು ಬೇಗ ಪರಿಹಾರ ಧನ ವಿತರಿಸುವ ಕೆಲಸ ಮಾಡಲಾಗುವುದು. ಶಾರ್ಪ್ ಶೂಟರ್‌ಗಳು ವೈಯಕ್ತಿಕ ಕಾರಣದಿಂದ ಕಾರ್ಯಾಚರಣೆಯಿಂದ ತೆರಳಿದ್ದಾರೆ. ಎರಡು ಬಾರಿ ಹುಲಿ ಕಾಣಿಸಿಕೊಂಡಿದೆ. ಆದರೆ ಅದನ್ನು ಸೆರೆಹಿಡಿಯಲು ಆಗಲಿಲ್ಲ. ಈಗಾಗಲೇ ಒಂದು ಹುಲಿ ಸೆರೆ ಹಿಡಿಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಯೋಗಾನಂದ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರೈತ ಸಂಘದ ಮುಖಂಡರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.