ADVERTISEMENT

ಕೊಡಗಿನ ಗಡಿ ಭಾಗದಲ್ಲಿ ಗಣಿಗಾರಿಕೆಗೆ ಅನುಮತಿ; ಆತಂಕ

ವಿವಿಧ ಸಂಘಟನೆಗಳಿಂದ ಗಣಿಗಾರಿಕೆ ಸ್ಥಗಿತಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 7:39 IST
Last Updated 5 ಫೆಬ್ರುವರಿ 2024, 7:39 IST
ಹೊಸೂರು ರಮೇಶ್
ಹೊಸೂರು ರಮೇಶ್   

ಶನಿವಾರಸಂತೆ: ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿ ಭಾಗವಾದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಸಕೋಟೆ ಬೆಟ್ಟದ ಸಮೀಪ ಗಣಿಗಾರಿಕೆ ನಡೆಸಲು ಮುಂದಾಗಿರುವುದು ಆತಂಕ ಮೂಡಿಸಿದೆ. ಇದರಿಂದ ಅತಿ ಸೂಕ್ಷ್ಮ ಜಿಲ್ಲೆ ಎನಿಸಿದ ಕೊಡಗಿನ ಭೂಮಿಗೆ ಆಪತ್ತು ಕಾದಿದೆ ಎಂದೇ ಸ್ಥಳೀಯರು ಆರೋಪಿಸುತ್ತಾರೆ.

ಕೊಡಗಿನಿಂದ ಕೆಲವೇ ಕಿ.ಮೀ ದೂರದಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿರುವ ಈ ಪ್ರದೇಶವು ಪಶ್ಚಿಮ ಘಟ್ಟಕ್ಕೆ ಸೇರಿದ್ದು, ಸದಾ ಹಚ್ಚಹಸಿರಿನಿಂದ ಕೂಡಿದೆ. ಕೊಡಗಿನ ಭತ್ತದ ರಾಶಿ ಬೆಟ್ಟ, ಹೇರೂರು ಗವಿ ಬೆಟ್ಟ, ಮಧ್ಯದಲ್ಲಿ ಹೊಸಕೋಟೆ ಬೆಟ್ಟಗಳಿಂದ ಕೂಡಿದ್ದು ಸದಾ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿದೆ. ಈ ಬೆಟ್ಟದ ತುದಿಯಿಂದ ಹುಟ್ಟುವ ಅನೇಕ ತೊರೆಗಳು ಮುಂದೆ ದೊಡ್ಡ ಹೊಳೆಯಾಗಿ ಹೇಮಾವತಿ ಜಲಾಶಯ ಸೇರುತ್ತಿವೆ. ಈ ಪ್ರದೇಶವು ಅನೇಕ ಜಾತಿಯ ಮರಗಿಡಗಳು ಸೇರಿದಂತೆ ಅಪಾರ ಜೀವವೈವಿಧ್ಯವನ್ನು ಒಳಗೊಂಡಿದೆ. ಅನೇಕ ಪ್ರಭೇದದ ಪ್ರಾಣಿ, ಪಕ್ಷಿಗಳು ನೋಡಲು ಸಿಗುತ್ತವೆ. ಹೇರೂರು ಬೆಟ್ಟದ ತತ್ತ ತುದಿಯಲ್ಲಿ ಸುಂದರವಾದ ಕೆರೆಯೊಂದು ನಿರ್ಮಾಣವಾಗಿದೆ. ಇಲ್ಲಿ ಗಣಿಗಾರಿಕೆ ನಡೆದರೆ ಇವುಗಳಿಗೆಲ್ಲ ಆಪತ್ತು ಇದೆ ಎಂಬ ಭೀತಿ ಎದುರಾಗಿದೆ.

ನೈರುತ್ಯ ಮಾನ್ಸುನ್ ಮಾರುತಗಳನ್ನು ಈ ಬೆಟ್ಟಗಳು ತಡೆದು ಇಲ್ಲಿನ ಭಾಗಗಳಿಗೆ ಪ್ರತಿ ವರ್ಷ ಉತ್ತಮವಾದ ಮಳೆಯಾಗುತ್ತಿದೆ. ಇಲ್ಲಿನ ರೈತರು ಸಮೃದ್ಧಿ ಜೀವನವನ್ನು ನಡೆಸಲು ಈ ಬೆಟ್ಟಗಳು ಅತ್ಯವಶ್ಯಕವಾಗಿದೆ. ಪ್ರತಿ ವರ್ಷ ಸುತ್ತಮುತ್ತಲಿನ ಹಳ್ಳಿಯವರು ಸೇರಿ ಬೆಟ್ಟದ ತುತ್ತ ತುದಿಯಲ್ಲಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾರೆ.

ADVERTISEMENT

ಗಣಿಗಾರಿಕೆಗೆ ಸಿದ್ಧತೆ ನಡೆಯುತ್ತಿರುವ ಪ್ರದೇಶದ ಸಮೀಪದಲ್ಲೇ ಈ ಹಿಂದೆ 2018 ರಲ್ಲಿ ಕೊಡಗು ಭಾಗದ ಭೂಮಿಯಲ್ಲಿ 2 ಬಾರಿ ಭೂಕುಸಿತ ಸಂಭವಿಸಿದೆ. ಬೆಟ್ಟದ ಕೆಳಗಡೆ ಸುಮಾರು 30 ಗ್ರಾಮಗಳಿದ್ದು, ಎಲ್ಲಾ ರೈತಾಪಿ ವರ್ಗದವರು ಕುಟುಂಬದ ತೋಟಗದ್ದೆಗಳು ಇವೆ. ಈ ಗಣಿಗಾರಿಕೆಯಿಂದ ಮುಂದಿನ ದಿನಗಳಲ್ಲಿ ಭೂಕುಸಿತ ಸಂಭವಿಸಬಹುದು ಎಂದು ರೈತರು ಆತಂಕಕ್ಕೀಡಾಗಿದ್ದಾರೆ.

2005ನೇ ಇಸವಿಯಲ್ಲಿ ಈ ಭಾಗದಲ್ಲಿ ಗಣಿಗಾರಿಕೆ ಪ್ರಾರಂಭವಾಗಿದ್ದು, ಈ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಇಲ್ಲಿನ ರೈತಾಪಿ ವರ್ಗದವರು, ಹೊಸೂರು ಹೇಮಾವತಿ ಸಂಘಟನೆ, ಕೊಡಗು ಜಿಲ್ಲೆ ಕಾವೇರಿ ಸೇನೆ, ಅನೇಕ ಪರಿಸರವಾದಿಗಳು ಹೊರಟ ನಡೆಸಿ ಕೊಡಗು ಮತ್ತು ಹಾಸನ ಜಿಲ್ಲಾಧಿಕಾರಿ ಮತ್ತು ಸರ್ಕಾರದ ಗಮನಕ್ಕೆ ತಂದು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ, ಇತ್ತೀಚೆಗಿನ ದಿನಗಳಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಬಂದಿದ್ದು, ಹೊರ ರಾಜ್ಯದ ಕೆಲಸಗಾರರು ಬಂದು ತಂತ್ರಜ್ಞಾನವನ್ನು ಬಳಸಿ ಗಣಿಗಾರಿಕೆ ಸಿದ್ಧತೆ ಮಾಡಿ ಭೂಮಿಪೂಜೆಯನ್ನೂ ಮಾಡಲಾಗಿದೆ. ಈ ಸುಂದರ ಪರಿಸರವನ್ನು ಉಳಿಸಲು ಅನೇಕ ಪರಿಸರವಾದಿಗಳು, ಸಂಘಟನೆಗಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಹಾಸನ ಮತ್ತು ಕೊಡಗು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.

ಸುಂದರ ಪರಿಸರದಲ್ಲಿ ಅನೇಕ ರೈತರು ತಮ್ಮ ಜೀವನ ನಡೆಸುತ್ತಿದ್ದಾರೆ. ರೈತರ ರಕ್ಷಣೆಗಾಗಿ ಸರ್ಕಾರ ಮುಂದಾಗಬೇಕಾಗಿದೆ.
- ಹೊಸೂರು ರಮೇಶ್ ಅಧ್ಯಕ್ಷರು ಹೇಮಾವತಿ ಸಂಘಟನೆ ಹಾಸನ ಜಿಲ್ಲೆ.
ಹೊಸಬೀಡು ಶಶಿ
ಕೊಡಗಿನ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವುದನ್ನು ಈಗಾಗಲೇ ನಾವು ಹೋರಾಟ ಮಾಡಿ ನಿಲ್ಲಿಸಿದ್ದೇವೆ. ಕೊಡಗಿನ ಗಡಿ ಭಾಗದ ಹೊಸೂರು ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೊಡಗಿಗೆ ಆಪತ್ತು ಹೆಚ್ಚಾಗಲಿದೆ ಸರ್ಕಾರ ತಕ್ಷಣವೇ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆದೇಶಿಸಬೇಕು.
- ಹೊಸಬೀಡು ಶಶಿ ಉಪಾಧ್ಯಕ್ಷ ಕಾವೇರಿ ಸೇನೆ ಕೊಡಗು ಜಿಲ್ಲೆ
ನಿಯಮಾನುಸಾರ ಅನುಮತಿ ಪಡೆದೇ ಗಣಿಗಾರಿಕೆ
‘ಹೊಸೂರು ಗ್ರಾಮದಲ್ಲಿ 12 ಎಕರೆ ಪ್ರದೇಶದಲ್ಲಿ ಖಾಸಗಿಯವರು ಗಣಿಗಾರಿಕೆ ನಡೆಸಲು ನಿಯಮಾನುಸಾರ ಸರ್ಕಾರದಿಂದ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2023ರ ಸೆಪ್ಟೆಂಬರ್‌ನಿಂದ ಮುಂದಿನ 30 ವರ್ಷದವರೆಗೆ ಪರವಾನಗಿ ನೀಡಲಾಗಿದೆ. ಕಂದಾಯ ಇಲಾಖೆ ಅರಣ್ಯ ಇಲಾಖೆ ಪರಿಸರ ಇಲಾಖೆಗಳು ನಿರಾಪೇಕ್ಷಣಾ ಪತ್ರಗಳನ್ನೂ ನೀಡಿವೆ. ಸದ್ಯ ಸ್ಥಳದಲ್ಲಿ ಗಣಿಗಾರಿಕೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾಸನ ಜಿಲ್ಲೆಯ ಭೂವಿಜ್ಞಾನಿ ಲಕ್ಷ್ಮಿಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.