ADVERTISEMENT

ನಾಪೋಕ್ಲು: ಶ್ರದ್ಧಾ–ಭಕ್ತಿಯ ಪೊಲಿಂಕಾನ ಉತ್ಸವ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 5:58 IST
Last Updated 5 ಆಗಸ್ಟ್ 2024, 5:58 IST
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ಪೊಲಿಂಕಾನ ಉತ್ಸವ ಆಚರಿಸಲಾಯಿತು
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ಪೊಲಿಂಕಾನ ಉತ್ಸವ ಆಚರಿಸಲಾಯಿತು   

ನಾಪೋಕ್ಲು: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಕರ್ಕಾಟಕ ಮಾಸ, ಆಷಾಢ ಕೃಷ್ಣಪಕ್ಷದ ಅಮಾವಾಸ್ಯೆಯಂದು ಭಾನುವಾರ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ಜರುಗಿತು.

ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣವಿಟ್ಟು ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ವಿಸರ್ಜಿಸಲಾಯಿತು. ಪೊಲಿಂಕಾನ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಪೊಲಿಂಕಾನ ಉತ್ಸವ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ಪೂಜೆ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆಯನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದರು.

ADVERTISEMENT

ಆಷಾಢ ಮಾಸದ ಅಮಾವಾಸ್ಯೆ ದಿನದಂದು ಭಗಂಡೇಶ್ವರ ದೇವಾಲಯದಲ್ಲಿ ಮಧ್ಯಾಹ್ನ ಪೂಜೆ ಸಲ್ಲಿಸಿ ಬಳಿಕ ಬಾಳೆದಿಂಡಿನಿಂದ ಅಲಂಕರಿಸಿದ ಮಂಟಪಕ್ಕೆ ಪೂಜೆ ಸಲ್ಲಿಸಿ, ಪೊಲಿಂಕಾನ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ವಾಡಿಕೆ. ನಾಡಿನ ಜೀವನದಿ ಕಾವೇರಿಯ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇದಾಗಿದೆ. ವಿಶೇಷವಾಗಿ ಅಲಂಕರಿಸಿ ಕಾವೇರಿ ಮಾತೆಗೆ ಬೇಕಾದ ವಸ್ತುಗಳನ್ನು ಬಾಗಿನ ಅರ್ಪಿಸುವ ಕಾರ್ಯಕ್ರಮವು ಪೊಲಿಂಕಾನದ ವಿಶೇಷ ಪೂಜಾ ಕಾರ್ಯಕ್ರಮವಾಗಿದೆ.

ಭಾಗಮಂಡಲ ಭಗಂಡೇಶ್ವರ ದೇವಾಯಲಯದ ಅರ್ಚಕವೃಂದ ಪೊಲಿಂಕಾನ ಉತ್ಸವಕ್ಕೆ ಚಾಲನೆ ನೀಡಿತು.  ಆಡಳಿತಾಧಿಕಾರಿ ಚಂದ್ರಶೇಖರ್, ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ಸ್ಥಳೀಯ ಪ್ರಮುಖರು ಇದ್ದರು.

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ನಡೆದ ಪೊಲಿಂಕಾನ ಉತ್ಸವವನ್ನು ಭಕ್ತರು ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.