ADVERTISEMENT

ಪೊನ್ನಂಪೇಟೆ |ಕೃಷಿಯಂತ್ರ ಮೇಳದಲ್ಲಿ ರೈತರನ್ನು ಆಕರ್ಷಿಸಿದ ನೂತನ ಯಂತ್ರಗಳು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 15:19 IST
Last Updated 4 ನವೆಂಬರ್ 2023, 15:19 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಕೂರ್ಗ್ ತಾಂತ್ರಿಕ ಕಾಲೇಜಿನ ಕೃಷಿ ಮೇಳದಲ್ಲಿ ಕೃಷಿಕರನ್ನು ಆಕರ್ಷಿಸಿದ ಡ್ರೋನ್‌ ಸ್ಪೇಯರ್ ಯಂತ್ರ
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಕೂರ್ಗ್ ತಾಂತ್ರಿಕ ಕಾಲೇಜಿನ ಕೃಷಿ ಮೇಳದಲ್ಲಿ ಕೃಷಿಕರನ್ನು ಆಕರ್ಷಿಸಿದ ಡ್ರೋನ್‌ ಸ್ಪೇಯರ್ ಯಂತ್ರ   

ಗೋಣಿಕೊಪ್ಪಲು: ಕಾರ್ಮಿಕರ ಸಮಸ್ಯೆ ನೀಗಿಸಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೃಷಿ ಯಂತ್ರಗಳು ನೂತನವಾಗಿ ಆವಿಷ್ಕಾರಗೊಂಡಿರುವ ಕೃಷಿ ಯಂತ್ರಗಳು ಕೃಷಿಕರನ್ನು ಆಕರ್ಷಿಸಿದವು.

ಪೊನ್ನಂಪೇಟೆ ಕೂರ್ಗ್ ತಾಂತ್ರಿಕ ಕಾಲೇಜಿನ ಬೆಳ್ಳಿಹಬ್ಬದ ಅಂಗವಾಗಿ ಶುಕ್ರವಾರ ದಿಂದ ಮೂರು ದಿನಗಳ ಕಾಲ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಕೃಷಿ ಯಂತ್ರ ಮೇಳಕ್ಕೆ ಬಂದಿದ್ದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ರೈತರು ನೂತನ ಕೃಷಿ ಯಂತ್ರಗಳನ್ನು ಕಂಡು ಸಂತಸ ಪಟ್ಟರು. ಆದರೆ ಅವುಗಳ ಬೆಲೆ ಕೇಳಿ ಕೆಲವರು ಹೌಹಾರಿದರು.

ಮೇಳದಲ್ಲಿ ಅತ್ಯಾಧುಕಿನ ಕೃಷಿ ಯಂತ್ರೋಪಕರಣ ವಾದ ಡ್ರೋನ್‌ ಸ್ಪೇಯರ್ ಎಲ್ಲರ ಗಮನ ಸೆಳೆಯಿತು. ಶಿವಮೊಗ್ಗದ ವರದಾ ಜೀವನ್ ಎಂಬವರು ಯಂತ್ರದ ಬಗ್ಗೆ ಕೂಲಂಕಷವಾಗಿ ಕೃಷಿಕರಿಗೆ ಮಾಹಿತಿ ನೀಡಿದರು. ಅಡಿಕೆ, ಭತ್ತ, ಏಲಕ್ಕಿ , ಕಾಫಿ, ಚಹಾ ಮೊದಲಾದ ಬೇಳೆಗಳಿಗೆ ಯಂತ್ರದ ಸಹಾಯದಿಂದ ರೋಗ ನಿವಾರಕ ಔಷಧಿ ಸಿಂಪರಣೆ ತಿಳಿಸಿದರು. ಒಂದು ಡ್ರೋನ್‌ ಯಂತ್ರಕ್ಕೆ ₹8 ಲಕ್ಷ ವೆಚ್ಚವಾಗುತ್ತಿದ್ದು ಒಂದ ಎಕರೆ ಭತ್ತದ ಗದ್ದೆಗೆ 15 ನಿಮಿಷದಲ್ಲಿ ಔಷಧಿ ಸಿಂಪರಣೆ ಮಾಡ ಬಹುದು. ದುಬಾರಿ ಯಂತ್ರ ಖರೀದಿವುಸುದು ಕಷ್ಟವಾದಲ್ಲಿ 1 ಗಂಟೆಗೆ ₹ 600 ರಂತೆ ಬಾಡಿಗೆಗೂ ಸಿಗಲಿದೆ ಎಂದು ವಿವರಿಸಿದರು.

ADVERTISEMENT

ತೋಟ ಮತ್ತು ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಮಾಡುವ ಮಂಗ, ಕಾಡಾನೆ ಮತ್ತಿತರ ವನ್ಯಜೀವಿಗಳನ್ನು ಬೆದರಿಸುವುದಕ್ಕೆ ಉಡುಪಿಯ ಮಾಧವ ಎಂಬವರು ತಯಾರಿಸಿದ ಬಂದೂಕು (ಏರ್ ಗನ್) ಕೂಡ ಮೇಳದಲ್ಲಿ ಆಕರ್ಷಿಸಿತು. ವನ್ಯ ಜೀವಿಗಳ ಹಾವಳಿಯಿಂದ ಬೇಸತ್ತಿರುವ ರೈತರು ಇದನ್ನು ಪರೀಕ್ಷಿಸಿ ಖುಷಿ ಪಟ್ಟರೆ ಮತ್ತೆ ಕೆಲವರು ಖರೀದಿಸಿದರು.
ಟಿಲ್ಲರ್, ಭತ್ತ ಮತ್ತು ಕಾಫಿ ಕೊಯ್ಲಿನ ಯಂತ್ರ, ಕಾಳು ಮೆಣಸು, ಅಡಿಕೆ ಕೊಯ್ಲಿನ ಯಂತ್ರ, ಸ್ಪಿಂಕ್ಲರ್ ಪೈಪ್, ಮೊದಲಾದ ಯಂತ್ರಗಳನ್ನು ರೈತರು ಕುತೂಹಲದಿಂದ ವೀಕ್ಷಿಸಿದರು.

ಮೇಳಕ್ಕೆ ಬಂದಿದ್ದ ಮಹಿಳೆಯರು ಕೃಷಿ ಯಂತ್ರೋಪಕರಣವನ್ನು ವೀಕ್ಷಿಸುವ ಬದಲು ತಿಂಡಿತಿನಿಸುಗಳು ಮತ್ತು ವಸ್ತ್ರ ಉಪಕರಣ ಮಳಿಗೆಗೆ ಹೆಚ್ಚು ಲಗ್ಗೆ ಇಟ್ಟರು. ಬೆಳಗಾವಿ, ಬಿಜಾಪುರ, ಇಳಕಲ್, ಶಿಮೊಗ್ಗ, ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು, ಕೇರಳದ ಕಣ್ಣೂರು, ತಲಚೇರಿ, ಮಾನಂದವಾಡಿ ಮೊದಲಾದ ಕಡೆಗಳಿಂದ ಬಂದಿರುವ 100 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ವಿವಿಧ ಆಟಿಕೆಗಳನ್ನು ಗೃಹೋಪಯೋಗಿ ವಸ್ತುಗಳು, ಆಭರಣ, ಸೌಂದರ್ಯವರ್ಧಕ ವಸ್ತುಗಳು, ತಿಂಡಿ ತಿನಿಸು ಮೊದಲಾದ ವಸ್ತುಗಳೇ ಹೆಚ್ಚಾಗಿ ಕಂಡು ಬಂದವು.

ಗಿಡಮರಗಳ ಪ್ರಿಯರಾದ ಕೊಡಗಿನ ಜನರು ಪುತ್ತೂರಿನ ವಿವಿಧ ಬಗೆ ಹಲಸು, ನಿಂಬೆ, ಸಪೋಟ, ಮಾವು ಮೊದಲಾದ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು. ಮಹಿಳೆಯರ ಮೂಲಕ ಮೇಳದಲ್ಲಿ ಹೆಚ್ಚು ಖರೀದಿಯಾದದ್ದು ಬಟ್ಟೆ ಮತ್ತು ತಿಂಡಿ ತಿನಿಸುಗಳು, ಬಿಜಾಪುರದ ಜೋಳದ ರೊಟ್ಟಿ, ತುಮಕೂರಿನ ರಾಗಿ ರೊಟ್ಟಿ ತಿನಿಸು ಗಳು ಸವಿದ ಮಹಿಳೆಯರು, ಯುವತಿಯರು ಅವುಗಳನ್ನು ಮನೆಗೂ ಖರೀದಿಸಿದರು. ಮೇಳಕ್ಕೆ ಶುಕ್ರವಾರ ಭೇಟಿ ನೀಡಿದ್ದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ನೂತನ ಯಂತ್ರಗಳ ಆವಿಷ್ಕಾರದ ಬಗ್ಗೆ ಮಾಹಿತಿ ಪಡೆದುಕೊಂಡರು. ಶಾಸಕ ಎ.ಎಸ್.ಪೊನ್ನನ್ನಣ್ಣ ಜತೆಗಿದ್ದರು.

ಕಾಳು ಮೆಣಸು ಅಡಿಕೆ ಕಾಫಿ ಬಿಡಿಸುವ ಯಂತ್ರಗಳು ಬೆಳೆಗಾರರನ್ನು ಸೆಳೆದವು.
ಮೇಳದಲ್ಲಿ ಹೆಚ್ಚು ಖರೀದಿಯಾದ ಪುತ್ತೂರಿನ ವಿವಿಧ ಬಗೆಯ ಹಲಸು ಮಾವು ನಿಂಬೆ ಹಣ್ಣಿನ ಗಿಡಗಳು
ಭತ್ತ ಕೊಯ್ಲಿನ ಪರಿಕರಗಳೂ ಮೇಳದಲ್ಲಿ ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.