ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಬಿರುಗಾಳಿ ಸಮೇತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರೆ ಮತ್ತೆ ಕೆಲವು ಕಡೆ ಮನೆಗಳ ಗೋಡೆ ಕುಸಿದು ತೀವ್ರ ಹಾನಿಯಾಗಿದೆ.
ಶ್ರೀಮಂಗಲ, ಬೀರುಗ, ಬಿರುನಾಣಿ, ಹುದಿಕೇರಿ, ನಾಲ್ಕೇರಿ, ಪೊನ್ನಂಪೇಟೆ ಭಾಗದಲ್ಲಿ ಮೂರು ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ಅಜ್ಜಮಾಡ ನಂದ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆಯಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ನಂದ ಹಾಗೂ ಒಬ್ಬರು ಕಾರ್ಮಿಕ ಪಾರಾಗಿದ್ದಾರೆ. ಮನೆಯ ಒಂದುಭಾಗದ ಗೋಡೆ ಕುಸಿದಿರುವುದರಿಂದ ಚಾವಣಿಯೂ ಕುಸಿದು ಬಿದ್ದಿದೆ.
ಬೀರುಗ ಗ್ರಾಮದ ಮುಕ್ಕಾಟೀರ ಕಾಶಿ ಅವರ ಕಾರ್ಯಪ್ಪ ಅವರ ಮನೆ ಗೋಡೆ ಬಿದ್ದು ಚಾವಣಿಯೂ ಕುಸಿದಿದೆ. ಈ ಎರಡು ಕುಟುಂಬದವರಿಗೆ ಕಾಳಜಿ ಕೇಂದ್ರವೇ ಗತಿಯಾಗಿದೆ. ಭಾನುವಾರ ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಈ ಭಾಗದ ಜನತೆಗೆ ಹೆಚ್ಚಿನ ಆತಂಕ ಎದುರಾಗಿದೆ. ಒಂದು ಕಡೆ ಭೀಕರ ಗಾಳಿಯಿಂದ ಎಲ್ಲೆಂದರಲ್ಲಿ ಮರಗಳು ಧರೆಗುರುಳುತ್ತಿವೆ. ಮತ್ತೊಂದು ಕಡೆ ತೀವ್ರ ಮಳೆಯಿಂದ ಮನೆಗಳ ಗೋಡೆಗಳು ಕುಸಿಯುತ್ತಿವೆ.
ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪೊನ್ನಂಪೇಟೆ, ಗೋಣಿಕೊಪ್ಪಲು ಪಟ್ಟಣಗಳನ್ನು ಬಿಟ್ಟರೆ ಬಹುಪಾಲು ಗ್ರಾಮೀಣ ಭಾಗಗಳು ಕತ್ತಲಲ್ಲಿ ಮುಳುಗಿವೆ. ಇದರಿಂದ ಕುಡಿಯುವ ನೀರು, ಮೊಬೈಲ್ ಚಾರ್ಜ್ ಮೊದಲಾದವುಗಳಿಗೆಲ್ಲ ಸಮಸ್ಯೆ ಎದುರಾಗಿದೆ.
ಇರ್ಪು ಜಲಪಾತ ಮತ್ತು ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಗೆ ಶ್ರೀಮಂಗಲ, ಹರಿಹರ, ಬಲ್ಯಮಂಡೂರು, ಕಾನೂರು, ಬಾಳೆಲೆ, ನಿಟ್ಟೂರು ಭಾಗದಲ್ಲಿ ಲಕ್ಷ್ಮಣತೀರ್ಥ ನದಿ ಪ್ರವಾಹ ತೀವ್ರಗೊಂಡಿದೆ. ನದಿ ಬಯಲಿನ ಬಲ್ಯಮಂಡೂರು, ಹರಿಹರ ನಡುವಿನ ರಸ್ತೆ ನೀರಿನಲ್ಲಿ ಮುಳುಗಿದ್ದು ಈ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಾನೂರು ಭಾಗದ ಗದ್ದೆಗಳು ನದಿ ಪ್ರವಾಹದಲ್ಲಿ ಮುಳುಗಿವೆ. ಬಾಳೆಲೆ, ಕೊಟ್ಟಗೇರಿ ನಡುವಿನ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಈ ಭಾಗದಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದದ ರಸ್ತೆ ನೀರಿನಲ್ಲಿ ಮುಳುಗಿದ್ದು, ಈ ಭಾಗದ ರಸ್ತೆ ಸಂಪರ್ಕವೂ ಕಡಿತವಾಗಿದೆ. ಬಾಳೆಲೆ, ನಿಟ್ಟೂರು ನಡುವಿನ ಗದ್ದೆ ಬಯಲು ಪ್ರವಾಹದಿಂದ ಸಾಗರದಂತೆ ಕಂಡು ಬರುತ್ತಿದೆ.
ಬಿರುನಾಣಿ ಪರಕಟಗೇರಿ ನಡುವಿನ ಮುಖ್ಯ ರಸ್ತೆಯು ಕೂಡ ಅಪಾಯಕ್ಕೆ ಸಿಲುಕಿದೆ. ಇಲ್ಲಿ ಹರಿಯುತ್ತಿರುವ ನದಿ ನೀರಿನ ಪ್ರವಾಹ ಹೆಚ್ಚಿದ್ದರೆ ಸೇತುವೆ ಮಧ್ಯಭಾಗದಲ್ಲಿನ ರಸ್ತೆ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜತೆಗೆ ಸೇತುವೆ ದಡ ಕೂಡ ಕುಸಿಯುವ ಭೀತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.