CESC staff struggle in the pouring rain in su
ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ಬೀಸುತ್ತಿರುವ ಗಾಳಿ ಹಾಗೂ ಸುರಿಯುತ್ತಿರುವ ಮಳೆಗೆ ಮರ ಮತ್ತು ಕೊಂಬೆಗಳು ಬಿದ್ದು, ವಿದ್ಯುತ್ ಕಂಬಗಳು ಹಾಗೂ ತಂತಿಗಳು ಧರೆಗುರುಳಿವೆ.
ವಿದ್ಯುತ್ ವ್ಯತ್ಯಯದಿಂದ ಗ್ರಾಮಗಳು ಕತ್ತಲೆಯಲ್ಲಿ ಮುಳುಗುವುದನ್ನು ತಪ್ಪಿಸಲು ಸೆಸ್ಕ್ ಇಲಾಖೆಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಸುಂಟಿಕೊಪ್ಪ ಸೆಸ್ಕ್ ಇಲಾಖೆಯ ಕಿರಿಯ ಎಂಜಿನಿಯರ್ ಲವಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮುರಿದುಬಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ನೆಡುವುದು, ತುಂಡಾಗಿರುವ ತಂತಿಗಳನ್ನು ಬದಲಿಸಿ ಹೊಸ ತಂತಿಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೊಡಗರಹಳ್ಳಿ, ಹೊಸಕೋಟೆ, ಕೆಂಚಟ್ಟಿ ಎಮ್ಮೆಗುಂಡಿ, ಕಾನ್‌ಬೈಲ್, ನಾಕೂರು, ಮತ್ತಿಕಾಡು ಇನ್ನಿತರ ಗ್ರಾಮಗಳಲ್ಲಿ ಗಾಳಿಗೆ ಮರಗಳು ಮತ್ತು ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಆಗಾಗ್ಗೆ ಬೀಳುತ್ತಿರುವುದರಿಂದ ಬಹಳಷ್ಟು ಹಾನಿಯಾಗಿದೆ. ತೋಟಗಳ ಮಧ್ಯದಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು, ಈ ಅಪಾಯವನ್ನು ಲೆಕ್ಕಿಸದೆ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಜೊತೆಗೆ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಮೂಲಕ ಗ್ರಾಮಗಳಿಗೆ ತಕ್ಷಣದಲ್ಲಿ ಬೆಳಕು ನೀಡುವ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಂಟಿಕೊಪ್ಪ ಪಟ್ಟಣದಲ್ಲಿ ವಿದ್ಯುತ್ ಪರಿವರ್ತಕಗಳು ಆಗಾಗ್ಗೆ ಮಳೆ, ಗಾಳಿಗೆ ಸ್ಫೋಟಗೊಳ್ಳುತ್ತಿದ್ದು, ತಕ್ಷಣದಲ್ಲೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.
ಹೋಬಳಿ ವ್ಯಾಪ್ತಿಯಲ್ಲಿ ಬಹಳಷ್ಟು ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದರೂ, ಅವುಗಳನ್ನು ದುರಸ್ತಿಪಡಿಸುವುದರ ಮೂಲಕ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸೆಸ್ಕ್ ಸಿಬ್ಬಂದಿಯಿಂದ ತ್ವರಿತ ಸ್ಪಂದನೆ
ಸಾರ್ವಜನಿಕರಿಂದ ಶ್ಲಾಘನೆ ದುರಸ್ತಿಗಾಗಿ ಇನ್ನಿಲ್ಲದ ಶ್ರಮ ಮರ ಬಿದ್ದರೂ ತೊಂದರೆಯಾಗದಂತೆ ಕ್ರಮ ಭಾನುವಾರ ಮಧ್ಯಾಹ್ನ ಹೋಬಳಿಯ ಎಮ್ಮೆಗುಂಡಿ ತೋಟದ ಬಳಿ 66 ಕೆ.ವಿಯ ವಿದ್ಯುತ್ ತಂತಿಯ ಮೇಲೆ ಬೃಹದಾಕಾರದ ಮರವೊಂದು ಬಿದ್ದ ಪರಿಣಾಮ ಇಡೀ ಸುಂಟಿಕೊಪ್ಪ ಹಾಗೂ ಹೋಬಳಿ ಭಾಗಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಜನರಿಗೆ ತೊಂದರೆ ಆಗದ ರೀತಿಯಲ್ಲಿ ಮಡಿಕೇರಿ, ವಿರಾಜಪೇಟೆ ಮತ್ತು ಪಿರಿಯಾಪಟ್ಟಣ ಭಾಗದ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ನೀಡುವುದರ ಮೂಲಕ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿರುವುದು ಕಂಡು ಬಂತು. ಪನ್ಯ, ಕೆಂಚಟ್ಟಿ, ಗುಂಡುಗುಟ್ಟಿ ಬಳಿ ಸೆಸ್ಕ್ ಸಿಬ್ಬಂದಿ ವಿದ್ಯುತ್ ಸಂಪರ್ಕ ನೀಡಲು ಶ್ರಮ ಪಡುತ್ತಿರುವುದು ಕಂಡು ಬಂತು. ಈ ಕೆಲಸದ ನಡುವೆ ಮರದ ಕೊಂಬೆಗಳು ಬೀಳುತ್ತಿರುವುದರಿಂದ ಜೀವದ ಹಂಗು ತೊರೆದು ಸಿಬ್ಬಂದಿಗಳು ವಿದ್ಯುತ್ ಕಂಬಗಳ ಮೇಲೆ ನಿಂತು ಕೆಲಸವನ್ನು ನಿರ್ವಹಿಸುತ್ತಿರುವುದು ಅವರ ಶ್ರಮವನ್ನು ತೋರಿಸುತ್ತಿತ್ತು.
ಕೆಲಸ ಮಾಡುವ ಸಮಯದಲ್ಲಿ ಆಗಾಗ್ಗೆ ನಮ್ಮ ಗಮನಕ್ಕೆ ಬಾರದೆ ಮರಗಳ ಕೊಂಬೆಗಳು ಬೀಳುತ್ತಿದ್ದು ಈ ಸಂಕಷ್ಟದ ನಡುವೆ ಜನತೆಗೆ ವಿದ್ಯುತ್ ನೀಡುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆಪಾಷಾ, ಸೆಸ್ಕ್ ಸಿಬ್ಬಂದಿ
ಪಟ್ಟಣ ಮತ್ತು ಗ್ರಾಮದ ಜನರಿಗೆ ವಿದ್ಯುತ್ ತೊಂದರೆಯಾಗದಂತೆ ನಿಗಾ ವಹಿಸುತ್ತಿದ್ದೇವೆ. 24 ಗಂಟೆಗಳ ನಿರಂತರ ಸೇವೆ ನಾವು ನೀಡುತ್ತಿದ್ದೇವೆ. ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ.ಲವಕುಮಾರ್, ಕಿರಿಯ ಎಂಜಿನಿಯರ್ ಸೆಸ್ಕ್ ಸುಂಟಿಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.