
ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಮಲ್ಲಿಕಾರ್ಜುನ ಕಾಲೊನಿಯಲ್ಲಿ ಪ್ಲಾಸ್ಟಿಕ್ ಶೀಟ್ ಹೊದಿಸಿದ ಟೆಂಟ್‌ನಲ್ಲಿ ವಾಸ ಮಾಡುತ್ತಿದ್ದ ವೃದ್ಧೆ ಬೈರಿ ಎಂಬವರಿಗೆ ಇದೀಗ ಮನೆಯ ಭಾಗ್ಯ ದೊರಕಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ಎಂ. ಲತೀಫ್ ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಆ.6 ರಂದು ' ಪ್ರಜಾವಾಣಿ' ಗೆ ಮಾತು ಕೊಟ್ಟಿದ್ದರು. ಅವರು ನುಡಿದಂತೆ ನಡೆದಿದ್ದಾರೆ. ಶುಕ್ರವಾರ ಸಂಜೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರ ಮೂಲಕ ಬೈರಿಗೆ ಮನೆಯನ್ನು ಹಸ್ತಾಂತರಿಸಲಾಯಿತು.
ಬೈರಿ ಅವರಿಗೆ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಸಿದ ಟೆಂಟ್‌ನಲ್ಲಿ ಜೀವನ ನಡೆಸುತ್ತಿದ್ದ ಬಗ್ಗೆ ‘ಪ್ರಜಾವಾಣಿ’ ಈ ಹಿಂದೆ ಬೆಳಕು ಚೆಲ್ಲಿತ್ತು. ಇದಕ್ಕೆ ಸ್ಪಂದಿಸಿದ ಅವರು ಶಾಸಕ ಡಾ.ಮಂತರ್ ಗೌಡ ಅವರ ಸಹಕಾರದಿಂದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದರು.
ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೊನಿಯಲ್ಲಿ ಬದುಕು ಸಾಗಿಸುತ್ತಿದ್ದ 80 ವರ್ಷವಯಸ್ಸಿನ ಬೈರಿ ಮತ್ತು 45 ವರ್ಷ ವಯಸ್ಸಿನ ಮಗ ವಿಶ್ವನಾಥ್(ಬಾಡು) ಹಲವು ತಿಂಗಳಿನಿಂದ ಪ್ಲಾಸ್ಟಿಕ್ ಶೆಡ್ ನಿರ್ಮಿಸಿ ಬದುಕು ತ್ತಿದ್ದರು. ಇವರಿಗೆ ಗುರುತಿನ ಚೀಟಿ, ಆಧಾರ್ ಕಾರ್ಡ್ , ರೇಷನ್ ಕಾರ್ಡ್ , ಇನ್ನಿತರ ದಾಖಲಾತಿಗಳು ಇರಲಿಲ್ಲ. ಹಲವು ವರ್ಷಗಳಿಂದ ಮಳೆ,ಗಾಳಿ, ಚಳಿಯಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದರು.
ಗಾಳಿಗೆ ಪ್ಲಾಸ್ಟಿಕ್ ಹೊದಿಕೆ ಹಾರಿಹೋಗುವ ಭಯದಲ್ಲೇ ದಿನದೂಡುತ್ತಿದ್ದರು. ಬೈರಿಗೆ ಕಿವಿ ಕೇಳದ ಸ್ಥಿತಿಯಲ್ಲಿದ್ದರೆ, ಮಗ ವಿಶ್ವನಾಥ ಅನಾರೋಗ್ಯಪೀಡಿತನಾಗಿ ಅಕ್ಕಪಕ್ಕದವರು ನೀಡುವ ಮತ್ತು ತನ್ನ ಮತ್ತೊಬ್ಬ ಮಗ ಅಣ್ಣು ನೀಡುವ ಆಹಾರ, ಸಾಮಗ್ರಿಗಳಿಂದ ಬದುಕು ಸಾಗಿಸುತ್ತಿದ್ದರು.
ಅಂದು ಕಷ್ಟದ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಬಗ್ಗೆ ಎಂದು ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡು, ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು, ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಸ್ಥಳೀಯ ಅಧಿಕಾರಿಗಳು, ಶಾಸಕರು ಭೇಟಿ ನೀಡಿ ಬೈರಿ ಅವರ ಸ್ಥಿತಿಗತಿ ಪರಿಶೀಲಿಸಿ ತೆರಳಿದ್ದರು.
ಇದೇ ವೇಳೆ, ಪಿ.ಎಂ.ಲತೀಫ್ ಅವರು ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಸಿ ಕೊಡುವ ಭರವಸೆಯನ್ನು ನೀಡಿ ಆಗಸ್ಟ್ ತಿಂಗಳಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಜನವರಿ 2ರಂದು ಶಾಸಕರ ಮುಂದಾಳತ್ವದಲ್ಲಿ ಮನೆಯನ್ನು ಬೈರಿಗೆ ಹಸ್ತಾಂತರಿಸುವ ಮೂಲಕ ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದು ಗ್ರಾಮಸ್ಥರು ಶ್ಲಾಘನೆಗೆ ಪಾತ್ರವಾಗಿದೆ.
ತಾಯಿ ಮತ್ತು ಮಗನ ಪರಿಸ್ಥಿತಿ ಗಮನಿಸಿ ಮರುಕ ಉಂಟಾಯಿತು. ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದೆ. ಅವರಿಗೆ ಕೊಟ್ಟ ಮಾತಿನಂತೆ ನನ್ನಿಂದಾಗುವಂತೆ ನಿರ್ಮಿಸಿ ಮನೆ ನೀಡಿದೆ ಸಂತೃಪ್ತಿ ಇದೆ.ಪಿ.ಎಂ. ಲತೀಫ್ ಸಮಾಜ ಸೇವಕ ಸುಂಟಿಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.