ಕುಶಾಲನಗರ: ಗರ್ಭಿಣಿಯರು ಪೌಷ್ಟಿಕ ಹಾಗೂ ಸಮತೋಲನ ಆಹಾರ ಸೇವಿಸಬೇಕು. ಇದರಿಂದ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೂಡಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಿಕಾ ಮೂರ್ತಿ ಹೇಳಿದರು.
ಪಟ್ಟಣದ ಗುಮ್ಮನಕೊಲ್ಲಿಯ ವಿನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಗರ್ಭಿಣಿಯರಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯ ಕಾಪಾಡಲು ಈ ಕಾರ್ಯಕ್ರಮ ಆಯೋಜಿಸಿದೆ. ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು ಎಂದರು.
ಗುಮ್ಮನಕೊಲ್ಲಿ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮಮತಾ ಮಾತನಾಡಿ, ಗರ್ಭಿಣಿಯರು ಅಪೌಷ್ಟಿಕ ಆಹಾರ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯರ ಆರೈಕೆ, ಆರೋಗ್ಯ, ವಿಶ್ರಾಂತಿ, ವ್ಯಾಯಾಮ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಮತಾ ಮಾಹಿತಿ ನೀಡಿದರು.
ಗರ್ಭಿಣಿಯರಿಗೆ ಅರಿಶಿಣ, ಕುಂಕುಮ ಹಚ್ಚಿ, ಬಳೆ ತೊಡಿಸಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಲಾಯಿತು.
ಇದೇ ಸಂದರ್ಭ 6 ತಿಂಗಳ ಮಕ್ಕಳಿಗೆ ಅನ್ನಭ್ಯಾಸ ಹಾಗೂ 3 ವರ್ಷದ ಮಕ್ಕಳಿಗೆ ಅಕ್ಷರಭ್ಯಾಸ ನಡೆಸಲಾಯಿತು.
ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ನಂದಿನಿ, ಅಂಗನವಾಡಿ ಕಾರ್ಯಕರ್ತೆರಾದ ಪುಟ್ಟಮ್ಮ, ನೀಲಮ್ಮ, ಚಂದ್ರಿಕಾ, ನಾಗರತ್ನ, ಕವಿತಾ, ನಾಗಮಣಿ, ಸರಸ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.