ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ‘ಕಕ್ಕಡ 18’ರ ಆಚರಣೆಗೆ ಭರದ ಸಿದ್ಧತೆ ನಡೆದಿದೆ.
ಕೃಷಿ ಪ್ರಧಾನ ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಳಿಸಿ ಸಂಭ್ರಮದಿಂದ ಹಬ್ಬ ಆಚರಿಸುವುದು ರೂಢಿ. ಮದ್ದುಸೊಪ್ಪಿನ ಅಥವಾ ಆಟಿಸೊಪ್ಪಿನ ಪಾಯಸಯನ್ನು ತಯಾರಿಸಿ ಸೇವಿಸುವುದು ಈ ದಿನದ ವಿಶೇಷ. ಕಕ್ಕಡ 18ರಂದು ಈ ಪಾಯಸವನ್ನು ತಯಾರಿಸಿ ಸೇವಿಸಬೇಕು ಎಂಬ ನಂಬಿಕೆ ಹಿಂದಿನಿಂದಲೇ ನಡೆದು ಬಂದಿದೆ.
ಇಂದು ಮನೆಮನೆಗಳಲ್ಲೂ ಆಟಿ ಪಾಯಸವನ್ನು ಮಾಡಿ ಸೇವಿಸುತ್ತಾರೆ. ಕಕ್ಕಡ 18ರ ಮುನ್ನ ದಿನವಾದ ಶನಿವಾರ ಮಾರುಕಟ್ಟೆಗಳಲ್ಲಿ ಆಟಿಸೊಪ್ಪಿನ ಮಾರಾಟ ಬಿರುಸಿನಿಂದ ಸಾಗಿತು. ಈ ಸೊಪ್ಪಿನಿಂದ ತೆಗೆದ ನೀರಿಗೆ ವಿಶೇಷ ಪರಿಮಳ, ನೇರಳೆ ಬಣ್ಣ ಇರುತ್ತದೆ. ಇದು ಈ ಸಸ್ಯದ ವೈಶಿಷ್ಟ್ಯ. ಕಟ್ಟಡ ತಿಂಗಳ ಮೊದಲ ದಿನದಿಂದ 18ನೇ ದಿನದ ತನಕ 18 ಬಗೆಯ ಔಷಧೀಯ ಗುಣಗಳು ಇದರಲ್ಲಿ ಸೇರುತ್ತವೆ ಎಂಬ ಪ್ರತೀತಿ ಇದೆ. ನಂತರ ಈ ಸಸ್ಯದಲ್ಲಿ ಔಷಧೀಯ ಗುಣಗಳು ಒಂದೊಂದಾಗಿ ಕಡಿಮೆಯಾಗುತ್ತಾ ಬರುತ್ತವೆ ಎಂದು ಹಿರಿಯರು ಹೇಳುತ್ತಾರೆ.
ಆಟಿಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿ ಇರುವುದನ್ನು ಹಿರಿಯರು ಮನಗಂಡಿದ್ದರು. ಅಂತೆಯೇ ಮದ್ದು ಸೊಪ್ಪಿನ ಪಾಯಸವನ್ನು ತಯಾರಿಸಿ ಸೇವಿಸುವುದು ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಪಾಯಸದೊಂದಿಗೆ ಇತರೆ ಸಿಹಿ ಖಾದ್ಯಗಳನ್ನು ಮಹಿಳೆಯರು ತಯಾರಿಸುತ್ತಾರೆ. ಸೊಪ್ಪು ಕುದಿಸಿದ ನೀರನ್ನು ಬಳಸಿ ಹಲ್ವ, ಇಡ್ಲಿ, ಕೇಸರಿಬಾತ್... ಹೀಗೆ ಬಗೆಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಕಕ್ಕಡ 18 ಅನ್ನು ಕೊಡಗಿನ ಹಬ್ಬವಾಗಿ ಆಚರಣೆ ಮಾಡುತ್ತಾರೆ. ಧೋ ಎಂದು ಮಳೆ ಸುರಿಯುವ ಈ ತಿಂಗಳಲ್ಲಿ ಶೀತ ಹವೆಯ ಕಾರಣದಿಂದ ಸಣ್ಣಪುಟ್ಟ ಕಾಯಿಲೆಗಳು ಬಾರದಂತೆ ರೋಗನಿರೋಧಕ ಶಕ್ತಿಯುಳ್ಳ ಆಹಾರವನ್ನು ಸೇವಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಇದನ್ನು ಆಚರಿಸಲಾಗುತ್ತದೆ. ಕೊಡಗಿನ ತೋಟಗಳು, ಮನೆಯಂಗಳದಲ್ಲಿ ಯಾವ ಆರೈಕೆಯೂ ಇಲ್ಲದೆ ಬೆಳೆಯುವ ಈ ಸಸ್ಯಕ್ಕೆ ಶನಿವಾರ ಅಧಿಕ ಬೇಡಿಕೆ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.