ADVERTISEMENT

ಮಡಿಕೇರಿ: ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 16:50 IST
Last Updated 6 ಫೆಬ್ರುವರಿ 2021, 16:50 IST
 ‘ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ’ವನ್ನು ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಲೋಕಾರ್ಪಣೆ ಮಾಡಿದರು.
‘ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ’ವನ್ನು ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಲೋಕಾರ್ಪಣೆ ಮಾಡಿದರು.    

ಮಡಿಕೇರಿ: ಜನರಲ್ ಕೆ.ಎಸ್‌. ತಿಮ್ಮಯ್ಯ (1906-1965) ಅವರ ಬದುಕಿನ ಚಿತ್ರಣ ನೀಡುವ ಮ್ಯೂಸಿಯಂ ಅನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶನಿವಾರ ಇಲ್ಲಿ ಲೋಕಾರ್ಪಣೆ ಮಾಡಿದರು.

‘ಯೋಧರ ನಾಡು’ ಕೊಡಗಿನ ಸೇನಾ ಪರಂಪರೆ ಹಾಗೂ ಹಿರಿಮೆ ಬಿಂಬಿಸುವ ಮ್ಯೂಸಿಯಂ ಇದಾಗಿದ್ದು, ತಿಮ್ಮಯ್ಯ ಅವರು ಬಾಲ್ಯದಲ್ಲಿ ಆಟವಾಡಿ ಬೆಳೆದಿದ್ದ ನಿವಾಸವನ್ನೇ ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸಲಾಗಿದೆ.

ಮ್ಯೂಸಿಯಂ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್, ಆ ಬಳಿಕ ವಸ್ತುಸಂಗ್ರಹಾಲಯದ ಯುದ್ಧ ವಿಮಾನ, ಯುದ್ಧ ಟ್ಯಾಂಕರ್‌, ಕೆ.ಎಸ್. ತಿಮ್ಮಯ್ಯ ಅವರ ಬಾಲ್ಯ ಕಾಲದ ಛಾಯಾಚಿತ್ರಗಳು, ಕೊಡವ ಉಡುಗೆ, ಸೇನಾ ಸಮವಸ್ತ್ರ, ಮಿನಿ ರಾಕೆಟ್ ಲಾಂಚರ್, ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕು ವೀಕ್ಷಿಸಿದರು.

ADVERTISEMENT

ಇದೇ ವೇಳೆ, ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂ ಸದಸ್ಯರು, ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ರಾಷ್ಟ್ರಪತಿ ಕೋವಿಂದ್‌ ಅವರಿಗೆ ಧನ್ಯವಾದ ಸಮರ್ಪಿಸಿದರು. ಕೋವಿಡ್–19 ಕಾರಣದಿಂದ ಸೀಮಿತ ಮಂದಿಗೆ ಮಾತ್ರ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು.

ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ಭಾರತೀಯ ಸೇನೆಗೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ಅದರಲ್ಲೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರು ದೇಶದ ಹಿರಿಮೆ. ತಿಮ್ಮಯ್ಯ ಮ್ಯೂಸಿಯಂ ಯುವಕರಿಗೆ ಸ್ಫೂರ್ತಿ ಆಗಲಿದ್ದು, ಸೇನಾ ಪರಂಪರೆ ಉಳಿಸಲು ಸಾಧ್ಯವಾಗಲಿದೆ’ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರೆ, ಬಿಪಿನ್‌ ರಾವತ್‌, ‘ಇದೊಂದು ಅದ್ಭುತ ಗಳಿಗೆ. ತಿಮ್ಮಯ್ಯ ಅವರ ಹೆಸರು ಭಾರತೀಯ ಯೋಧರ ಮನಸ್ಸಿನಲ್ಲಿ ಉಳಿದಿದೆ’ ಎಂದು ಬಣ್ಣಿಸಿದರು.

ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡುವಂತೆ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ರಾಷ್ಟ್ರಪತಿಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹಾಜರಿದ್ದರು.

ತಲಕಾವೇರಿಯಲ್ಲಿ ವಿಶೇಷ ಪೂಜೆ

ಮ್ಯೂಸಿಯಂ ಉದ್ಘಾಟನೆಗೂ ಮೊದಲು ಜೀವನದಿ ತಲಕಾವೇರಿಗೂ ಭೇಟಿ ನೀಡಿದ ರಾಷ್ಟ್ರಪತಿ ಕೋವಿಂದ್‌, ಪತ್ನಿ ಸವಿತಾ, ಪುತ್ರಿ ಸ್ವಾತಿ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಬ್ರಹ್ಮಗಿರಿಯ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡರು.

ಕಳೆದ ವರ್ಷಕುಸಿದಿದ್ದ ಗಜಗಿರಿ ಬೆಟ್ಟದ ದೃಶ್ಯವನ್ನು ಕಾರಿನಲ್ಲಿಯೇ ವೀಕ್ಷಿಸಿದರು. ಮುಖ್ಯ ಅರ್ಚಕರಾದ ರಾಜೇಶ್ ಆಚಾರ್ಯ, ಸುಧೀರ್ ಆಚಾರ್ಯ, ಸಹಾಯಕ ಅರ್ಚಕರಾದ ಅಖಿಲೇಶ್, ಪ್ರಸಾದ್ ಹಾಗೂ ಶ್ರೀನಿವಾಸ್ ಪೂಜೆ ನೆರವೇರಿಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಸ್ತೆ ಬದಿಯಲ್ಲಿ ನೆರೆದಿದ್ದ ಜನರತ್ತ ಕೈಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.