ಮಡಿಕೇರಿ: ಕೊಡಗು ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ‘ಪತ್ರಿಕಾ ದಿನಾಚರಣೆ’ಯಲ್ಲಿ ‘ಪ್ರಜಾವಾಣಿ’ಯ ಡಿ.ಪಿ. ಲೋಕೇಶ್ ಮತ್ತು ಎಂ.ಎಸ್.ಸುನಿಲ್ ಸೇರಿದಂತೆ 10 ಮಂದಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಡೆಕಲ್ ಸಂತೋಷ್, ಮೋಹನ್ ರಾಜ್, ಪ್ರಸಾದ್ ಸಂಪಿಗೆಕಟ್ಟೆ, ವಿಘ್ನೇಶ್ ಭೂತನಕಾಡು, ವಿನೋದ್ ಮೂಡಗದ್ದೆ, ಸೈಯ್ಯದ್ ಇರ್ಫಾನ್, ಟಿ.ಜೆ. ಪ್ರವೀಣ್ ಕುಮಾರ್ ವಾರ್ಷಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ದತ್ತಿ ನಿಧಿಯನ್ನು ನೀಡಿರುವ ಕಾಂತಿ ಸತೀಶ್, ನಾಗೇಂದ್ರ ಪ್ರಸಾದ್ ಮತ್ತು ಅಂಜನ್ ಪ್ರಸಾದ್, ಗುಡ್ಡೆಮನೆ ವಿಶು ಕುಮಾರ್, ಬಿ.ಜಿ.ಅನಂತಶಯನ, ಭಾಗೀರಥಿ ಮಹಂತೇಶ್ ಅವರನ್ನು ಗೌರಿಸಲಾಯಿತು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕರಾದ ತೇಲಪಂಡ ಶಿವಕುಮಾರ್ ನಾಣಯ್ಯ, ‘ಪ್ರಜಾತಂತ್ರ ವ್ಯವಸ್ಥೆಗೆ ವಿವಿಧ ಕಾಲ ಘಟ್ಟಗಳಲ್ಲಿ ಎದುರಾದ ಸಂಕಷ್ಟಗಳ ಸಂದರ್ಭಗಳಲ್ಲೆಲ್ಲ ಪತ್ರಿಕಾ ಕ್ಷೇತ್ರ ಅದಕ್ಕೆ ಎದುರಾಗಿ ಕಾರ್ಯ ನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂರಕ್ಷಣೆಗೆ ಶ್ರಮಿಸಿದೆ’ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ‘ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿರುವ ಪತ್ರಿಕಾ ಕ್ಷೇತ್ರದಲ್ಲಿ ಎಲ್ಲರೂ ಒಗ್ಗೂಡಿ ಮುನ್ನಡೆಯುವ ಕುರಿತು ಚಿಂತಿಸುವ ಅಗತ್ಯ ಇದೆ’ ಎಂದು ಹೇಳಿದರು.
ಹಿರಿಯರಾದ ಕೆ.ತಿಮ್ಮಪ್ಪ ಮಾತನಾಡಿ, ‘ಸರ್ಕಾರದ ಗ್ರಾಮೀಣ ಬಸ್ ಪಾಸ್‌ಗಳನ್ನು ಪಡೆಯುವಲ್ಲಿನ ನಿರ್ಬಂಧಗಳನ್ನು ಬದಲಾವಣೆ ಮಾಡುವ ಮೂಲಕ ಆ ಸೌಲಭ್ಯ ಎಲ್ಲಾ ಪತ್ರಕರ್ತರಿಗೆ ದೊರಕುವಂತೆ ಆಗಬೇಕು’ ಎಂದು ಒತ್ತಾಯಿಸಿದರು.
ಕ್ಷೇಮಾಭಿವದೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ, ‘ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಜ್ಞಾನವನ್ನು ಪಡೆದುಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.
ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ‘ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿದೆಯಾದರು, ಅದರಲ್ಲಿನ ನಿರ್ಬಂಧಗಳಿಂದ ಅದನ್ನು ಹೆಚ್ಚಿನವರು ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘ಪ್ರಸ್ತುತ ಕೃತಕ ಬುದ್ಧಿ ಮತ್ತೆಯ ಸವಾಲು ಪತ್ರಿಕಾ ಕ್ಷೇತ್ರದ ಮುಂದಿದೆಯಾದರು ಅದು ಅಷ್ಟಾಗಿ ಪತ್ರಿಕಾ ಕ್ಷೇತ್ರದ ಮೇಲೆ ಪ್ರಭಾವ ಬೀರಿಲ್ಲ’ ಎಂದು ಹೇಳಿದರು.
ಪದಾಧಿಕಾರಿಗಳಾದ ಟಿ.ಜೆ. ಪ್ರವೀಣ್ ಕುಮಾರ್, ಸುರೇಶ್ ಬಿಳಿಗೇರಿ, ಶಿವಪ್ಪ, ಹನೀಫ್, ರಂಜಿತ್ ಕವಲಪಾರ, ನವೀನ್ ಚಿನ್ನಪ್ಪ, ಗುರುದರ್ಶನ್, ನಾಸೀರ್, ಪ್ರಭಾಕರ್, ವತ್ಸಲಾ, ದುಶ್ಯಂತ್ ಮತ್ತು ಉಷಾ ಪ್ರೀತಂ, ಪಿ.ಎಂ.ರವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.