ADVERTISEMENT

‘ಆದಿವಾಸಿಗಳಿಗೆ ಕೃಷಿಭೂಮಿ, ಉದ್ಯೋಗ ನೀಡಿ’

ಕರ್ನಾಟಕ ರೈತ ಸಂಘ ಆಗ್ರಹ, ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 12:14 IST
Last Updated 28 ಜೂನ್ 2019, 12:14 IST
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ (ಎಐಕೆಕೆಎಸ್) ವತಿಯಿಂದ ಪ್ರತಿಭಟನೆ ನಡೆಯಿತು
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ (ಎಐಕೆಕೆಎಸ್) ವತಿಯಿಂದ ಪ್ರತಿಭಟನೆ ನಡೆಯಿತು   

ಮಡಿಕೇರಿ: ಜಿಲ್ಲೆಯ ಆದಿವಾಸಿ ನಿವಾಸಿಗಳಿಗೆ ಕೃಷಿಭೂಮಿ, ನಿವೇಶನ ಹಾಗೂ ಮೂಲಸೌಲಭ್ಯ ನೀಡುವುದರೊಂದಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ (ಎಐಕೆಕೆಎಸ್) ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ‘ಜಿಲ್ಲೆಯಲ್ಲಿರುವ ಬಡರೈತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ಇಲ್ಲದೇ, ಉಳ್ಳವರ ಲೈನ್‌ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೆಲವರು ನಿವೇಶನ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದರೂ ಇನ್ನೂ ಭೂಮಿ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ಲಂಚದಾಹದಿಂದ ಬಡವರ ಅರ್ಜಿಗಳು ವಿಲೇವಾರಿಯಾಗದೇ ಮೂಲೆ ಸೇರುತ್ತಿವೆ. ಜಿಲ್ಲೆಯಲ್ಲಿರುವ ಎಲ್ಲಾ ಆದಿವಾಸಿಗಳಿಗೆ ಮೂಲ ಸೌಲಭ್ಯದೊಂದಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕೃಷಿಗೆ ತಲಾ 3 ಎಕರೆ ಕೃಷಿಭೂಮಿ ನೀಡಬೇಕು. ಅಂಬೇಡ್ಕರ್ ಭವನಕ್ಕೆ 50 ಸೆಂಟ್ ಜಾಗ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ದಿಡ್ಡಳ್ಳಿ ಆದಿವಾಸಿಗಳನ್ನು 2016–17ರಲ್ಲಿ ಬಸವನಹಳ್ಳಿ, ಬ್ಯಾಡಗೊಟ್ಟಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಉದ್ಯೋಗವಿಲ್ಲದೇ ಅನ್ನ– ಬಟ್ಟೆಗೆ ಹಣಕಾಸಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಇವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಹೇಳಿದರು.

ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಬಡವರು, ಸರ್ಕಾರದ ಪರಿಹಾರ ಇಲ್ಲದೆ ವಂಚನೆಗೆ ಒಳಗಾಗಿದ್ದಾರೆ. ಇವುಗಳನ್ನು ಜಿಲ್ಲಾಡಳಿತ ಪರಿಶೀಲಿಸಿ ಒಂದು ತಿಂಗಳ ಒಳಗಾಗಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಣ್ಣಪ್ಪ, ಉಪಾಧ್ಯಕ್ಷ ಎಚ್.ಜೆ.ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಎಸ್.ಆರ್.ಮಂಜುನಾಥ್, ರಾಜ್ಯ ಉಪ ಕಾರ್ಯದರ್ಶಿ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.