ADVERTISEMENT

ನಾಗರಹೊಳೆಯಲ್ಲಿ ಆದಿವಾಸಿಗಳ ಅಹೋರಾತ್ರಿ ಚಳವಳಿ: ‘ಬೇಡಿಕೆ ಈಡೇರುವವರೆಗೆ ಹೋರಾಟ’

ನಾಗರಹೊಳೆಯಲ್ಲಿ 6ನೇ ದಿನಕ್ಕೆ ಆದಿವಾಸಿಗಳ ಅಹೋರಾತ್ರಿ ಚಳವಳಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 12:58 IST
Last Updated 22 ಮಾರ್ಚ್ 2021, 12:58 IST
ಹೋರಾಟದ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿ ಸಮಸ್ಯೆ ಆಲಿಸಿದರು
ಹೋರಾಟದ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿ ಸಮಸ್ಯೆ ಆಲಿಸಿದರು   

ಮಡಿಕೇರಿ: ರಾಷ್ಟ್ರೀಯ ಉದ್ಯಾನ ನಾಗರಹೊಳೆಯಲ್ಲಿ ಆದಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು 6ನೇ ದಿನಕ್ಕೆ ಕಾಲಿಟ್ಟಿದೆ.

ಅರಣ್ಯ ಹಕ್ಕು ಯಥಾವಕ್ಕಾಗಿ ಜನರಿಗೆ ಸಿಗುವ ತನಕ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೋರಾಟದ ನೇತೃತ್ವ ವಹಿಸಿರುವ ಜೆ.ಕೆ.ತಿಮ್ಮ ಹಾಗೂ ಜೆ.ಎ.ಶಿವು ಘೋಷಿಸಿದರು.

ಮಕ್ಕಳು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭೇಟಿ ನೀಡಿ ಹೋರಾಟಗಾರರ ಅಹವಾಲು ಸ್ವೀಕರಿಸಿದರು.

ಅರಣ್ಯ ಹಕ್ಕನ್ನು ಯಥಾವತ್ತು ಜಾರಿಗೊಳಿಸಲು ವಿಧಾನ ಮಂಡಳದ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಆದಿವಾಸಿಗಳಿಗೆ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ, ‘ಹೋರಾಟವು 6ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾನೂ ಕೂಡ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ’ ನೀಡಿದರು.

ಭೇಟಿಯ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೇಚಮಾಡ ಸರಿತ ಪೂಣಚ್ಚ, ಬಿ.ಎನ್.ಪೃಥ್ವಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹಿರಿಯ ಮುಖಂಡರಾದ ತೀತಿರ ಧರ್ಮಜ ಎ.ಜೆ.ಬಾಬು, ಕಡೇಮಾಡ ಕುಸುಮಾ ಜೋಯಪ್ಪ ಮುಂತಾದವರು ಹಾಜರಿದ್ದರು.

ಮುಖಂಡರು ಅರಣ್ಯದಲ್ಲಿ ಸಂಪಿಗೆ ಗಿಡ ನೆಡುವ ಮೂಲಕ ಅರಣ್ಯವನ್ನು ಸಂರಕ್ಷಿಸುವ ಸಂದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.