ADVERTISEMENT

ಮಡಿಕೇರಿ: ಸ್ಮಶಾನಕ್ಕಾಗಿ ಒತ್ತಾಯಿಸಿ ಜೂನ್ 16ರಂದು ಧರಣಿ

ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ ಸ್ಮಶಾನ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 4:14 IST
Last Updated 13 ಜೂನ್ 2025, 4:14 IST
ಪಿ.ಆರ್‌.ಭರತ್‌ 
ಪಿ.ಆರ್‌.ಭರತ್‌    

ಮಡಿಕೇರಿ: ನೆಲ್ಯಹುದಿಕೇರಿಯಲ್ಲಿ ಸೂಕ್ತವಾದ ಜಾಗದಲ್ಲಿ ಸ್ಮಶಾನ ನೀಡದೇ ಹೋದರೆ ಜೂನ್ 16ರಂದು ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯಿತಿ ಮುಂಭಾಗ ಅಣಕು ಶವ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಮಶಾನ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ಹೇಳಿದರು.

‘ಒಟ್ಟು 12 ಸಾವಿರ ಜನಸಂಖ್ಯೆ ಇರುವ ನೆಲ್ಯಹುದಿಕೇರಿಯಲ್ಲಿ ಶವಸಂಸ್ಕಾರ ಮಾಡಲು ಸೂಕ್ತ ಜಾಗ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ನಾವು ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈಗ ಇರುವ ಸ್ಮಶಾನ ಭೂಮಿ ಕಾವೇರಿ ನದಿ ತೀರದಲ್ಲಿದ್ದು, ಮಳೆಗಾಲದಲ್ಲಿ ಪ್ರವಾಹ ಬಂದರೆ ಶವಸಂಸ್ಕಾರ ಕಷ್ಟ ಸಾಧ್ಯ. 2018–19ರಲ್ಲಿ ಸ್ಮಶಾನದ ಬಹುಭಾಗ ನದಿ ಪಾಲಾಗಿದೆ. ಇರುವ ಚಿಕ್ಕ ಜಾಗದಲ್ಲಿ ಒಮ್ಮೆ ಸಂಸ್ಕಾರ ಮಾಡಿದ ಜಾಗದಲ್ಲಿಯೇ ಮತ್ತೊಂದು ಶವವನ್ನು ಸಂಸ್ಕಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿವರಿಸಿದರು.

ADVERTISEMENT

ಈಗ ಪಂಚಾಯಿತಿ ಗುರುತಿಸಿರುವ ಜಾಗ ಕೂಡ ನದಿ ದಡದಲ್ಲಿದೆ. ಆರ್‌ಟಿಸಿಯಲ್ಲಿ ಸ್ಮಶಾನ ಎಂದು ನಮೂದಾಗಿರುವ ಜಾಗ ಒತ್ತುವರಿದಾರರ ಪಾಲಾಗಿದೆ. ಈ ಭೂಮಿಯನ್ನು ಬಿಡಿಸಿ ಸ್ಮಶಾನವಾಗಿ ಮಾಡಬೇಕು. ಇಲ್ಲವೇ ಪರ್ಯಾಯವಾಗಿ ಬೇರೆ ಸೂಕ್ತ ಜಾಗವನ್ನು ಸ್ಮಶಾನಕ್ಕಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ಬಹುಪಾಲು ಮಂದಿಗೆ ವಾಸಕ್ಕೆ ಒಂದು ಸ್ವಂತ ಸೂರು ಇಲ್ಲ. ಹೋಗಲಿ ಮೃತಪಟ್ಟಾಗ ನೆಮ್ಮದಿಯಾಗಿ ಶವಸಂಸ್ಕಾರ ಮಾಡುವುದಕ್ಕೂ ಆಗದ ಸ್ಥಿತಿ ಇದೆ. ಇದನ್ನು ನೋಡಿದರೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಏನೂ ಅನ್ನಿಸುವುದಿಲ್ಲವೇ ಎಂದೂ ಪ್ರಶ್ನಿಸಿದರು.

‘ಈಗ ಶವಸಂಸ್ಕಾರ ಮಾಡುತ್ತಿರುವ ಜಾಗದಲ್ಲಿ ಪ್ರವಾಹ ಬಂದಾಗ ನದಿ ನೀರು ಸ್ಮಶಾನ‌ಕ್ಕೆ ಬಂದು ಮಣ್ಣು ಕುಸಿಯುತ್ತಿದೆ. ಇದರಿಂದ ಕಾವೇರಿ ನದಿ ಕಲುಷಿತಗೊಳ್ಳುತ್ತಿದೆ. ಕನಿಷ್ಠ ನದಿಯ ರಕ್ಷಣೆಗಾಗಿಯಾದರೂ ನಮಗೆ ಸೂಕ್ತ ಜಾಗದಲ್ಲಿ ಸ್ಮಶಾನ ಕೊಡಿ ಎಂದು ಕೇಳಿದರೆ ಯಾರೂ ಗಮನ ಹರಿಸುತ್ತಿಲ್ಲ’ ಎಂದರು.

ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ವಿರುದ್ಧವೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದರು.

ಸಮಿತಿಯ ಮುಖಂಡರಾದ ವಿ.ವಿ.ಪ್ರಭಾಕರ, ಎನ್.ನಾರಾಯಣ, ಕೆ.ಜಿ.ರಮೇಶ್, ಟಿ.ಟಿ.ಉದಯಕುಮಾರ್, ಪಿ.ಜಿ.ಸುರೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.