ADVERTISEMENT

ಕಕ್ಕಬ್ಬೆ ರಸ್ತೆ ಅವ್ಯವಸ್ಥೆ: ಪ್ರತಿಭಟನೆ ಎಚ್ಚರಿಕೆ

ಮಡಿಕೇರಿ:ವಾರದೊಳಗೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 12:32 IST
Last Updated 20 ನವೆಂಬರ್ 2020, 12:32 IST

ಮಡಿಕೇರಿ: ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾರಣ ನೀಡಿ ಕಕ್ಕಬ್ಬೆಯ ಮುಖ್ಯರಸ್ತೆಯ ಡಾಂಬರನ್ನು ಸಂಪೂರ್ಣವಾಗಿ ತೆಗೆದು ಹಾಕಿರುವುದರಿಂದ ಗ್ರಾಮಸ್ಥರು ಹಾಗೂ ಪಾಡಿ ಶ್ರೀಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳುವ ಭಕ್ತರ ಸಂಚಾರಕ್ಕೆ ಅಡ್ಡಿ ಆಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಯಾರೂ ದುರಸ್ತಿ ಕಾರ್ಯದ ಬಗ್ಗೆ ಕಾಳಜಿ ತೋರಿಲ್ಲ. ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಆದರೆ, ಸುಮಾರು 700 ಮೀಟರ್‌ನಷ್ಟು ದೂರದವರೆಗೆ ಮುಖ್ಯರಸ್ತೆಯನ್ನು ಅಗೆದು ಹಾಕಿ ಹಾಗೇ ಬಿಡಲಾಗಿದೆ ಎಂದು ಗ್ರಾಮದ ಪ್ರಮುಖ ಉದಿಯಂಡ ಸುರನ್ ನಾಣಯ್ಯ ಆರೋಪಿಸಿದ್ದಾರೆ.

ದೇವಸ್ಥಾನಕ್ಕೆ ಹೋಗುವ ಮಾರ್ಗವಾಗಿಯೇ ನಾಲಡಿ ಮತ್ತು ಅಯ್ಯಂಗೇರಿ ಗ್ರಾಮದ ಜನರು ಹಾಗೂ ಭಕ್ತರು ತೆರಳುತ್ತಿದ್ದು, ಸುಮಾರು 400ರಿಂದ 500 ವಾಹನಗಳು ನಿತ್ಯ ಸಂಚರಿಸುತ್ತವೆ. ಮಳೆಗಾಲದಲ್ಲಿ ಕೆಸರು ಮಯವಾಗುವ ರಸ್ತೆ ಬೇಸಿಗೆಯಲ್ಲಿ ದೂಳಿನಿಂದ ಆವೃತ್ತವಾಗಿ ವಾಹನಗಳು ಮಾತ್ರವಲ್ಲದೆ ಪಾದಾಚಾರಿಗಳಿಗೂ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂಧಿಸಿದ ಇಲಾಖೆಗಳು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಸುರನ್ ನಾಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಇಲ್ಲಿಯವರೆಗೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ತಕ್ಷಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹದಗೆಟ್ಟಿರುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆಯಲ್ಲಿರುವ ಕಿರಿದಾದ ಸೇತುವೆಯ ಅಗಲವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಒಂದು ವಾರದೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ವಿವಿಧ ಸಂಘ– ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮಸ್ಥರು ರಸ್ತೆತಡೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.