ADVERTISEMENT

ಕೊಡಗು: ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ಅಭಿಯಾನ ಆರಂಭ

ಮಡಿಕೇರಿಯಲ್ಲಿ ನಗರಸಭೆ ಅಧ್ಯಕ್ಷೆ ಕಲಾವತಿ, ಗೋಣಿಕೊಪ್ಪಲಿನಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 3:10 IST
Last Updated 22 ಡಿಸೆಂಬರ್ 2025, 3:10 IST
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಅವರು ಭಾನುವಾರ ನಗರದ ಕಾನ್ವೆಂಟ್ ಜಂಕ್ಷನ್‌ನ ಶಿಶುವಿಹಾರದಲ್ಲಿ ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಅವರು ಭಾನುವಾರ ನಗರದ ಕಾನ್ವೆಂಟ್ ಜಂಕ್ಷನ್‌ನ ಶಿಶುವಿಹಾರದಲ್ಲಿ ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು   

ಮಡಿಕೇರಿ: ಪಲ್ಸ್ ಪೋಲಿಯೊ ಅಭಿಯಾನ ಭಾನುವಾರ ಕೊಡಗು ಜಿಲ್ಲೆಯಾದ್ಯಂತ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು 470 ಬೂತ್‌ಗಳು ಮತ್ತು 32 ಸಂಚಾರಿ ಬೂತ್‌ಗಳನ್ನು ತೆರೆಯಲಾಗಿದ್ದು,  1,946 ಮಂದಿ 5 ವರ್ಷದ ಒಳಗಿನ ಮಕ್ಕಳಿಗೆ ದಿನವಿಡೀ ಲಸಿಕೆ ಹಾಕಿದರು. ಪ್ರವಾಸಿ ತಾಣಗಳಲ್ಲಿ ಸಂಚಾರಿ ಬೂತ್‌ಗಳನ್ನೂ ತೆರೆಯಲಾಗಿದ್ದುದು ವಿಶೇಷ ಎನಿಸಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಶಿಶುವಿಹಾರದಲ್ಲಿ ನಗರಸಭೆ ಅಧ್ಯಕ್ಷೆ ಕಲಾವತಿ ಅವರು ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. 5 ವರ್ಷದ ಒಳಗಿನ ಒಂದೇ ಒಂದು ಮಗುವೂ ಸಹ ಈ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಎಲ್ಲರೂ ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ತಮ್ಮ ಅಕ್ಕಪಕ್ಕ, ಸ್ನೇಹಿತರು, ಬಂಧು ಬಳಗ ಹಾಗೂ ತಮ್ಮಲ್ಲಿರುವ ಕಾರ್ಮಿಕರ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ‘ವಲಸಿಗ ಹಾಗೂ ಪ್ರವಾಸಿಗರ ಮಕ್ಕಳು ಸೇರಿದಂತೆ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಸೋಮವಾರ ಮತ್ತು‌ ಮಂಗಳವಾರವೂ ಸಹ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದ್ದು. ಲಸಿಕೆ ಪಡೆಯದಿರುವ ಮಕ್ಕಳಿಗೂ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಕಲಾವಿದ ಈ. ರಾಜು ಮತ್ತು ತಂಡದವರು ಪೋಲಿಯೊ ಲಸಿಕೆ ಮಹತ್ವ ಕುರಿತು ಜಾಗೃತಿ ಗೀತೆ ಹಾಡಿದರು.

ಜಿಲ್ಲಾ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ಅವರು ದಿನವಿಡೀ 25ಕ್ಕೂ ಹೆಚ್ಚು ಪೋಲಿಯೊ ಲಸಿಕೆ ನೀಡುವ ಬೂತ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಲೋಕೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ಆರ್ ಸಿ ಎಚ್ ಅಧಿಕಾರಿ ಡಾ.ಮಧುಸೂದನ, ಡಾ.ಸನತ್ ಕುಮಾರ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ, ಡಾ.ಚೇತನ್, ಡಾ.ಸುಕೃತ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜು, ಸವಿತಾ ಕೀರ್ತನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಪಾಲಾಕ್ಷ, ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ, ಉತ್ತಯ್ಯ, ಲಯನ್ಸ್ ಸಂಸ್ಥೆಯ ಮದನ್, ಮಧುಕರ್, ನವೀನ್ ಅಂಬೆಕಲ್ಲು ಭಾಗಹಿಸಿದ್ದರು.

ವಲಸಿಗರ ಮಕ್ಕಳಿಗೂ ಲಸಿಕೆ ನೀಡಿ; ಎ.ಎಸ್.ಪೊನ್ನಣ್ಣ

ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ತಾಲ್ಲೂಕಿನಲ್ಲಿ ಪೋಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.‍ಪೊನ್ನಣ್ಣ ‘ವಲಸಿಗ ಮಕ್ಕಳು ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ’ ಎಂದು ಸೂಚಿಸಿದರು. ‘ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗ ಮಕ್ಕಳಿದ್ದಾರೆ. ಅವರಿಗೆಲ್ಲ ಲಸಿಕೆ ನೀಡುವ ಕೆಲಸ ಆಗಬೇಕು. ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಈಗ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಅವರ ಮಕ್ಕಳಿಗೂ ಲಸಿಕೆ ನೀಡುವ ಕೆಲಸ ಆಗಬೇಕು’ ಎಂದರು. ಎಲ್ಲರೂ ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.