ADVERTISEMENT

ವಿರಾಜಪೇಟೆ ಪಟ್ಟಣಕ್ಕೆ ನೀರು ಪೂರೈಸುವ ಪಂಪ್‌ಹೌಸ್‌ಗೆ ಸಿಡಿಲು: ಉಪಕರಣಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 4:35 IST
Last Updated 2 ಜೂನ್ 2023, 4:35 IST
   

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾದ ಭೇತ್ರಿ ಪಂಪ್‌ಹೌಸ್‌ಗೆ ಗುರುವಾರ ರಾತ್ರಿ ಸಿಡಿಲು ಬಡಿದು ಎಲೆಕ್ಟ್ರಿಕ್ ಉಪಕರಣಗಳು ಸುಟ್ಟು ಹೋಗಿವೆ. ಇದರಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಸ್ಥಳೀಯರಿಂದ ದುರಸ್ತಿ ಕಾರ್ಯ ಸಾಧ್ಯವಾಗದೇ ಮೈಸೂರಿನಿಂದ ತಂತ್ರಜ್ಞರ ತಂಡ ಬಂದು ಪರಿಶೀಲನೆ ನಡೆಸಿದೆ.

ಪಟ್ಟಣದಲ್ಲಿರುವ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ನೀರಿಗಾಗಿ ನಾಗರಿಕರು ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಒಂದು ವೇಳೆ ಪಂಪ್‌ಹೌಸ್‌ ತಕ್ಷಣಕ್ಕೆ ದುರಸ್ತಿಯಾಗದಿದ್ದರೆ ಕುಡಿಯುವ ನೀರಿನ ಬವಣೆ ಹೆಚ್ಚಾಗಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್, ‘ಪಟ್ಟಣದ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಕಷ್ಟಕರವಾಗಿದೆ’ ಎಂದು ಹೇಳಿದರು.

ADVERTISEMENT

ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು, ನೇತಾಜಿ ನಗರದಲ್ಲೂ ವಿದ್ಯುತ್ ಪರಿವರ್ತಕಗಳಿಗೆ ಸಿಡಿಲಿನಿಂದ ಹಾನಿಯಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಯಿತು. ಸದ್ಯ, ಮತ್ತೊಂದು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.