ADVERTISEMENT

ಗುಣಮಟ್ಟದ ರಸ್ತೆ ಕಾಮಗಾರಿ ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:12 IST
Last Updated 14 ಮೇ 2025, 7:12 IST
ಸೋಮವಾರಪೇಟೆ ತಾಲ್ಲೂಕು ಅಭಿವೃದ್ದಿ ಹೋರಾಟ ಸಮಿತಿ ಹಾಗೂ ಕೂತಿ, ತೋಳುರುಶೆಟ್ಟಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಅಭಿಯಂತರರ ಕಚೇರಿಯಲ್ಲಿ ಸಭೆ ನಡೆಯಿತು. 
ಸೋಮವಾರಪೇಟೆ ತಾಲ್ಲೂಕು ಅಭಿವೃದ್ದಿ ಹೋರಾಟ ಸಮಿತಿ ಹಾಗೂ ಕೂತಿ, ತೋಳುರುಶೆಟ್ಟಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಅಭಿಯಂತರರ ಕಚೇರಿಯಲ್ಲಿ ಸಭೆ ನಡೆಯಿತು.    

ಸೋಮವಾರಪೇಟೆ: ಮಾಗಡಿ - ಜಾಲ್ಸುರು ರಾಜ್ಯ ಹೆದ್ದಾರಿ 85 ರ ಅಲೆಕಟ್ಟೆ - ತೋಳುರುಶೆಟ್ಟಳ್ಳಿ - ಕೂತಿ ಮಾರ್ಗ ರಸ್ತೆಯ ಸುಮಾರು ₹ 20 ಕೋಟಿ ವೆಚ್ಚದ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕೆಲಸ ತಡವಾಗುತ್ತಿರುವ ಬಗ್ಗೆ ತಾಲ್ಲೂಕು ಅಭಿವೃದ್ದಿ ಹೋರಾಟ ಸಮಿತಿ ಹಾಗೂ ಕೂತಿ, ತೋಳೂರುಶೆಟ್ಟಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಎಂಜಿನಿಯರ್‌ ಕಚೇರಿಯಲ್ಲಿ ಸಭೆ ನಡೆಯಿತು.

ಸಮಿತಿಯ ಅರುಣ್ ಕೊತ್ನಳ್ಳಿ ಮಾತನಾಡಿ, ‘ಕೂತಿ ಮಾರ್ಗದ ಅಲೆಕಟ್ಟೆ - ಹರಪಳ್ಳಿವರೆಗೆ 8 ಕಿ.ಮೀ ರಸ್ತೆಯನ್ನು ಜನವರಿ ತಿಂಗಳಿನಲ್ಲಿ ಮ್ಯಾಪಿಂಗ್ ಮಾಡಲಾಗಿದೆ. ಆದರೆ, 2.3 ಕಿ.ಮೀ ರಸ್ತೆಯಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ತಕ್ಷಣದಿಂದಲೆ ಇದನ್ನು ನಿಲ್ಲಿಸಿ ಯೋಜನಾ ವರದಿಯಂತೆ ಕಾಮಗಾರಿ ಮಾಡಬೇಕು’ ಎಂದು ಅಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್ ಮಾತನಾಡಿ, ‘ರಸ್ತೆ ಸರಿಯಾಗಿ ವಿಸ್ತರಣೆ ಮಾಡಿಲ್ಲ. ರಸ್ತೆಯನ್ನು ಸಮತಟ್ಟು ಮಾಡದೇ ಸರಿಯಾದ ಪ್ರಮಾಣದಲ್ಲಿ ವೆಟ್ ಮಿಕ್ಸ್ ಹಾಕದೆ ಕಳಪೆಯ ವೇಟ್ ಮಿಕ್ಸ್ ಹಾಕಿ ಕೆಲಸ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

ಕಾರ್ಯಪಾಲ ಎಂಜಿನಿಯರ್ ವೆಂಕಟೇಶ್ ನಾಯಕ ಮಾತನಾಡಿ, ‘ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಗಿದೆ. ತಕ್ಷಣದಿಂದಲೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮೇ 14ರಂದು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಸ್ಥಳೀಯ ಗ್ರಾಮಸ್ಥರ ಸಮುಖದಲ್ಲಿ ಚರ್ಚೆ ನಡೆಸಿ ಪರಿಶೀಲನೆ ಮಾಡಲಾಗುವುದು’ ಎಂದರು.

ಈ ವೇಳೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಆದರ್ಶ್, ಜೀವನ್, ಕೂತಿ ಗ್ರಾಮದ ಅಧ್ಯಕ್ಷ ಎಚ್.ಎಂ.ಜಯರಾಮ್, ಕೆ.ಡಿ.ಗಿರೀಶ್, ಯಾದವ್ ಕುಮಾರ್, ಕೆ.ಸಿ.ಉದಯ್ ಕುಮಾರ್, ಎಚ್.ಡಿ.ಮೋಹನ್ ತೋಳೂರುಶೆಟ್ಟಳ್ಳಿಯ ಸಿ.ಕೆ.ಶಿವಕುಮಾರ್, ಮಾಚಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.