
ಕುಶಾಲನಗರ: ರಾಜ್ಯ ಸರ್ಕಾರದ ರಸ್ತೆ ಸುರಕ್ಷತಾ ಅನುದಾನದಲ್ಲಿ ಅಭ್ಯತ್ ಮಂಗಲ- ಒಂಟಿಯಂಗಡಿಯಲ್ಲಿರುವ ಸೇತುವೆ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ 91 ರಲ್ಲಿನ ಒಂಟಿಯಂಗಡಿಯ ಸೇತುವೆ ಅಗಲೀಕರಣ, ವೃತ್ತ ನಿರ್ಮಾಣ, ಹೈಮಾಸ್ಟ್ ದೀಪ ಅಳವಡಿಕೆ ಮತ್ತು ಸೇತುವೆ ಬಳಿ ತೋಡಿಗೆ ತಡೆಗೋಡೆ ನಿರ್ಮಾಣ ಜೊತೆಗೆ ರೂ 1 ಕೋಟಿ ವೆಚ್ಚದಲ್ಲಿ ಒಂಟಿಯಂಗಡಿ-ಸಿದ್ದಾಪುರ, ಒಂಟಿಯಂಗಡಿ-ಚೆಟ್ಟಳ್ಳಿ, ಒಂಟಿಯಂಗಡಿ-ಕುಶಾಲನಗರ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೂ ಸರ್ಕಾರ ಭರಪೂರ ಅನುದಾನ ಒದಗಿಸುತ್ತಿದೆ. ಮೂರು ತಾಲ್ಲೂಕು ಬೆಸೆಯುವ ಈ ಒಂಟಿಯಂಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಚಿಂತನೆಯೊಂದಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಈ ಭಾಗದವರ ಬೇಡಿಕೆಯಂತೆ ರೂ. 13 ಕೋಟಿ ವೆಚ್ಚದಲ್ಲಿ ಮಡಿಕೇರಿ-ಅಭ್ಯತ್ ಮಂಗಲ ಮಾರ್ಗ ಅಭಿವೃದ್ಧಿ, 3 ಕೋಟಿ ವೆಚ್ಚದಲ್ಲಿ ನೆಲ್ಲಿಹುದಿಕೇರಿ-ಅಭ್ಯತ್ ಮಂಗಲ ಮಾರ್ಗ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಒಂಟಿಯಂಗಡಿ ಊರನ್ನು ನೆನಪಿನಲ್ಲಿಟ್ಟುಕೊಳ್ಖುವ ಮಾದರಿಯಲ್ಲಿ ಸುಂದರೀಕರಣಗೊಳಿಸುವ ಯೋಜನೆ ಇದಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವಂತೆ ಎಲ್ಲಾ ವರ್ಗದವರಿಗೂ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸಿ ಕಾಂತ್ರಿಕಾರಿ ಬದಲಾವಣೆಗೆ ಶಾಸಕರು ಮುಂದಾಗಿದ್ದಾರೆ ಎಂದರು. ಐದು ವರ್ಷದೊಳಗೆ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ ಒಟ್ಟು ತಲಾ ಮೂರು ಕೋಟಿ ಮೊತ್ತದ ಕಾಮಗಾರಿಗಳ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಶವಂತ್ ದೋಲ್ಪಾಡಿ, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಕಾಂಗ್ರೆಸ್ ವಲಯ ಅಧ್ಯಕ್ಷ ಹನೀಫ್, ಬೂತ್ ಅಧ್ಯಕ್ಷ ನಂದಕುಮಾರ್, ಜ್ಯೋತಿ ನಗರ ಬೂತ್ ಅಧ್ಯಕ್ಷ ಮಜೀದ್ ಕೆ.ಎಂ, ಮುಖಂಡರಾದ ಮಜೀದ್, ರಫೀಕ್, ಮಣಿ, ವಾಲ್ನೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ನೆಲ್ಲಿಹುದಿಕೇರಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯ ಮುಸ್ತಾಫ, ಜಿಪಂ ಮಾಜಿ ಸದಸ್ಯ ಲತೀಫ್, ಚೆಟ್ಟಳ್ಳಿ ತೀರ್ಥಕುಮಾರ್, ಮಾಜಿ ಜನಪ್ರತಿನಿಧಿ ಹಕೀಂ, ಮಹಮ್ಮದ್ ರಫಿ, ಲೋಕೋಪಯೋಗಿ ಅಭಿಯಂತರ ಅರ್ಬಾಜ್ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.