ADVERTISEMENT

ಮಡಿಕೇರಿ: ಹಲವೆಡೆ ಸಂಕ್ರಾಂತಿ ಸಂಭ್ರಮ, ಕೆಲವೆಡೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:01 IST
Last Updated 15 ಜನವರಿ 2026, 4:01 IST
ಮಡಿಕೇರಿಯ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ಗುಡಿಯಲ್ಲಿ ದೇವರ ವಿಗ್ರಹಕ್ಕೆ ಮಕರ ಸಂಕ್ರಾಂತಿ ಪ್ರಯುಕ್ತ ಬುಧವಾರ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು
ಮಡಿಕೇರಿಯ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ಗುಡಿಯಲ್ಲಿ ದೇವರ ವಿಗ್ರಹಕ್ಕೆ ಮಕರ ಸಂಕ್ರಾಂತಿ ಪ್ರಯುಕ್ತ ಬುಧವಾರ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು   

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಕೆಲವರು ಬುಧವಾರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು ಮತ್ತೆ ಕೆಲವೆರು ಗುರುವಾರ ಹಬ್ಬ ಆಚರಿಸಲು ಸಿದ್ಥತೆಗಳನ್ನು ನಡೆಸಿದರು.

ಇಲ್ಲಿನ ಮುತ್ತಪ್ಪ ದೇಗುಲದ ಆವರಣದಲ್ಲಿರುವ ಅಯ್ಯಪ್ಪ ದೇಗುಲದಲ್ಲಿ ಸಡಗರ, ಸಂಭ್ರಮದಿಂದ ಸಂಕ್ರಾಂತಿ ಆಚರಣೆ ನಡೆಯಿತು. ಬೆಳಿಗ್ಗೆಯಿಂದ ಆರಂಭವಾದ ವಿವಿಧ ಪೂಜಾ ಕೈಂಕರ್ಯಗಳು ರಾತ್ರಿಯವರೆಗೂ ನಿರಂತರವಾಗಿ ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ಪೂಜೆ ಸಲ್ಲಿಸಿದರು.

ಗಣಪತಿ ಹೋಮದೊಂದಿಗೆ ಮಂಗಳವಾರವೇ ಆರಂಭವಾಗಿದ್ದ 36ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವು ಬುಧವಾರ ಮುಂದುವರಿಯಿತು. ಬೆಳಿಗ್ಗೆ ಸೂರ್ಯೋದಯದೊಂದಿಗೆ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, ತುಲಾಭಾರ ಸೇವೆ ಸೇರಿದಂತೆ ಅನೇಕ ಬಗೆಯ ಧಾರ್ಮಿಕ ಕೈಂಕರ್ಯಗಳು ನಡೆದವು.

ADVERTISEMENT

ನಂತರ, ಕುಟ್ಟಿಚಾತನ್ ದೇವರ ವೆಳ್ಳಾಟ, ಮುತ್ತಪ್ಪ ದೇವರ ವೆಳ್ಳಾಟ, ಪೋದಿ ದೇವರ ವೆಳ್ಳಾಟ, ಅಯ್ಯಪ್ಪ ದೇವರ ಅಲಂಕಾರ ಪೂಜೆ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಗುಳಿಗ ದೇವರ ವೆಳ್ಳಾಟಗಳು ನಡೆದವು. ಮಧ್ಯಾಹ್ನದ ಹೊತ್ತಿಗೆ ಮಹಾಮಂಗಳಾರತಿ ನೆರವೇರಿತು.

ಸಂಜೆ ವಿವಿಧ ಭಜನಾ ಮಂಡಳಿ ಸದಸ್ಯರು ದೇವರ ಭಜನೆಗಳನ್ನು ಹಾಡಿದರು. ಅಲಂಕಾರಪೂಜೆ, ಪಡಿಪೂಜೆ, ದೀಪಾರಾಧನೆ ಹಾಗೂ ಪ್ರಸಾದ ವಿತರಣೆಗೆ ಮಳೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಖರೀದಿ ಭರಾಟೆ

ಉಳಿದಂತೆ, ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಎಳ್ಳು ಬೆಲ್ಲದ ಖರೀದಿ ಭರಾಟ ನಡೆಯಿತು. ಕಬ್ಬು ವ್ಯಾಪಾರವೂ ನಡೆದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಎಳ್ಳು, ಬೆಲ್ಲ, ಹೂಗಳನ್ನು ಖರೀದಿಸಿ ಹಬ್ಬಕ್ಕೆ ಸಿದ್ಧತೆ ನಡೆಸಿದರು.

ಸಂಕ್ರಾಂತಿ ಪ್ರಯುಕ್ತ ಮಡಿಕೇರಿಯ ಮುತ್ತಪ್ಪ ದೇವಾಲಯದಲ್ಲಿ ಬುಧವಾರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು
ಮಡಿಕೇರಿ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಸಂಕ್ರಾಂತಿ ಪ್ರಯುಕ್ತ ಹೂಗಳನ್ನು ಸಾರ್ವಜನಿಕರು ಬುಧವಾರ ಖರೀದಿಸಿದರು
ಸಂಕ್ರಾಂತಿ ಪ್ರಯುಕ್ತ ಮಡಿಕೇರಿಯ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಕೆ.ಎಲ್.ಧನ್ಯಾ ಅವರು ಬುಧವಾರ ಲಿಲ್ಲಿ ವಿನ್ಸೆಂಟ್ ಅವರಿಗೆ ಎಳ್ಳು ಬೆಲ್ಲವನ್ನು ತಿನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.