ADVERTISEMENT

ಕೊಡಗು: ಕ್ಯಾಮೆರಾ ಕಣ್ಗಾವಲಿನಡಿ ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ

ಸಕಲ ಸಿದ್ಧತೆಗಳನ್ನೂ ಕೈಗೊಂಡ ಜಿಲ್ಲಾಡಳಿತ ಹಾಗೂ ಪಿಯು ಮಂಡಳಿ

ಕೆ.ಎಸ್.ಗಿರೀಶ್
Published 28 ಫೆಬ್ರುವರಿ 2025, 7:16 IST
Last Updated 28 ಫೆಬ್ರುವರಿ 2025, 7:16 IST
<div class="paragraphs"><p>ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ</p></div>

ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ

   

ಮಡಿಕೇರಿ: ಇದೇ ಮೊದಲ ಬಾರಿಗೆ ದ್ವಿತೀಯ ಪಿಯು ಮುಖ್ಯ ಪರೀಕ್ಷೆಯು ‘ವೆಬ್‌ಕ್ಯಾಸ್ಟಿಂಗ್’ ಮೂಲಕ ನಡೆಯಲಿದ್ದು, ಸರ್ವ ಸಿದ್ಧತೆಗಳೂ ಪೂರ್ಣಗೊಂಡಿವೆ. ಕಳೆದ ವರ್ಷ ಪಿಯುಸಿಯ ಪೂರಕ ಪರೀಕ್ಷೆಯಲ್ಲಿ ಮಾತ್ರ (ಪರೀಕ್ಷೆ–2) ವೆಬ್‌ಕ್ಯಾಸ್ಟಿಂಗ್ ನಡೆದಿತ್ತು. ಆದರೆ, ಈ ಬಾರಿ ಮುಖ್ಯ ಪರೀಕ್ಷೆ ಸೇರಿದಂತೆ ಎಲ್ಲ ಪೂರಕ ಪರೀಕ್ಷೆಗಳಿಗೂ ‌‘ವೆಬ್‌ಕ್ಯಾಸ್ಟಿಂಗ್’ ಮಾಡಲಾಗುತ್ತಿದೆ.

ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನೇರ ಪ್ರಸಾರದ ಸೌಲಭ್ಯ ಇರಲಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಯು ಮಂಡಳಿಯ ಅಧಿಕಾರಿಗಳು ಈ ನೇರ ಪ್ರಸಾರವನ್ನು ವೀಕ್ಷಿಸಲಿದ್ದಾರೆ. ಈ ಮೂಲಕ ಪರೀಕ್ಷಾ ಅಕ್ರಮವನ್ನು ತಡೆಗಟ್ಟಿ, ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು ಸರ್ಕಾರದ ಚಿಂತನೆಯಾಗಿದೆ.

ADVERTISEMENT

ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಮುಖ್ಯಪರೀಕ್ಷೆಯ ನಂತರ 2 ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಒಟ್ಟು 3 ಬಾರಿ ಪಿಯು ಪರೀಕ್ಷೆ ನಡೆಯಲಿದ್ದು, ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೊಂದು ಪರೀಕ್ಷೆ ತೆಗೆದುಕೊಂಡು ಪಾಸಾಗುವ ಅವಕಾಶವನ್ನೂ ನೀಡಲಾಗಿದೆ.

ಮಾರ್ಚ್ 1ರಿಂದ ಆರಂಭವಾಗುವ ಪಿಯು ಪರೀಕ್ಷೆಯು ಮಾರ್ಚ್ 20ವರೆಗೂ ನಡೆಯಲಿದೆ. ಒಟ್ಟು 5,240 ವಿದ್ಯಾರ್ಥಿಗಳು ಪ‍ರೀಕ್ಷೆಗೆ ನೋಂದಣಿಯಾಗಿದ್ದಾರೆ. ಇವರಲ್ಲಿ 375 ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಾಗಿದ್ದರೆ, 4,865 ಮಂದಿ ಹೊಸ ವಿದ್ಯಾರ್ಥಿಗಳಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಮಡಿಕೇರಿಯಲ್ಲಿ 5, ಕುಶಾಲನಗರ ಒಳಗೊಂಡ ಸೋಮವಾರಪೇಟೆ ತಾಲ್ಲೂಕಿನಲ್ಲಿ 8 ಹಾಗೂ ಪೊನ್ನಂಪೇಟೆ ಒಳಗೊಂಡ ವಿರಾಜಪೇಟೆ ತಾಲ್ಲೂಕಿನಲ್ಲಿ 6 ಕೇಂದ್ರಗಳನ್ನು ಸ್ಥಾಪಿಸಲಾಗಿವೆ.

ಪರೀಕ್ಷಾ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಪ್ರತೀ ಮಾರ್ಗಕ್ಕೆ ಒಬ್ಬರಂತೆ ಒಟ್ಟು 7 ಮಾರ್ಗಾಧಿಕಾರಿಗಳು ಇದರ ಉಸ್ತುವಾರಿ ವಹಿಸಲಿದ್ದಾರೆ. ಪ್ರತೀ ಪರೀಕ್ಷಾ ಕೇಂದ್ರಗಳಿಗೂ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಹಾಗೂ ಸ್ಥಾನಿಕ ಜಾಗೃತ ದಳದ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಿತ ಪ್ರದೇಶವಾಗಿದ್ದು, ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ವೇಳೆ ಮುಚ್ಚುವಂತೆ ಸೂಚಿಸಲಾಗಿದೆ. ವಿದ್ಯುತ್ ವ್ಯತ್ಯಯ ಉಂಟಾಗದಂತೆ ನಿಗಾ ಇರಿಸಲು ಸೆಸ್ಕ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬಸ್‌ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಮಂಜುಳಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ
ಮಾರ್ಚ್ 1ರಿಂದ 20ವರೆಗೆ ಪಿಯು ಪರೀಕ್ಷೆ ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಿವೆ ಎಲ್ಲ ಕಡೆ ನಡೆದಿದೆ ಭರದ ಸಿದ್ಧತೆ
ಎಲ್ಲ ‍ಪರೀಕ್ಷಾ ಕೇಂದ್ರಗಳಲ್ಲೂ ಪೀಠೋಪಕರಣ ಶೌಚಾಲಯ ಕುಡಿಯುವ ನೀರು ಸಿಸಿಟಿವಿ ಕ್ಯಾಮೆರಾ ವೆಬ್‌ಕ್ಯಾಸ್ಟಿಂಗ್ ಹಾಗೂ ಇಂಟರ್‌ನೆಟ್‌ ಸೌಲಭ್ಯ ಒದಗಿಸಲಾಗಿದೆ
ವೆಂಕಟ್ ರಾಜಾ ಜಿಲ್ಲಾಧಿಕಾರಿ.
ಕೊಡಗು ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳಲ್ಲಿ ಪಿಯು ಪರೀಕ್ಷೆ ನಡೆಯಲಿದ್ದು ಸಕಲ ಸಿದ್ಥತೆಗಳನ್ನೂ ಕೈಗೊಳ್ಳಲಾಗಿದೆ.
ಕೆ.ಮಂಜುಳಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.