ADVERTISEMENT

ಸರ್ವೆ ಕಾರ್ಯಕ್ಕೆ ಸ್ಥಳೀಯರ ತಡೆ

ರಾಜರ ಗದ್ದುಗೆ ಒತ್ತುವರಿ ಆರೋಪ: ಸರ್ವೆಗೆ ಮುಂದಾಗಿದ್ದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 14:40 IST
Last Updated 30 ಸೆಪ್ಟೆಂಬರ್ 2020, 14:40 IST
ಮಡಿಕೇರಿಯಲ್ಲಿರುವ ರಾಜರ ಗದ್ದುಗೆ
ಮಡಿಕೇರಿಯಲ್ಲಿರುವ ರಾಜರ ಗದ್ದುಗೆ   

ಮಡಿಕೇರಿ: ಹೈಕೋರ್ಟ್‌ ಆದೇಶದಂತೆ ನಗರದ ಐತಿಹಾಸಿಕ ರಾಜರ ಗದ್ದುಗೆ ಜಾಗ ಒತ್ತುವರಿ ತೆರವಿಗೆ ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಬುಧವಾರ ಸರ್ವೆಗೆ ಮುಂದಾಗಿದ್ದ ತಂಡಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿ ಸರ್ವೆ ಕಾರ್ಯ ಮುಂದೂಡಿಕೆ ಮಾಡಲಾಯಿತು.

ರಾಜರ ಗದ್ದುಗೆಯ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿ, ಹೈಕೋರ್ಟ್‌ನಲ್ಲಿ ವೀರಶೈವ ಸಮಾಜದ ಜಿಲ್ಲಾ ಅಧ್ಯಕ್ಷರಾಗಿದ್ದ ದಿ.ಎಸ್.ಪಿ. ಮಹದೇವಪ್ಪ ಎಂಬುವರು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸರ್ವೆ ನಡೆಸಿ, ವರದಿ ಸಲ್ಲಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.

ಸರ್ವೆಗೆ ಮುಂದಾಗಿದ್ದ ವೇಳೆ ಸ್ಥಳೀಯರ ಆಕ್ಷೇಪ ಮತ್ತು ಒತ್ತುವರಿದಾರರ ಪರ ವಕೀಲರ ಮಧ್ಯಪ್ರವೇಶದಿಂದ ಸರ್ವೆ ಕಾರ್ಯವನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಸ್ಥಗಿತ ಮಾಡಲಾಯಿತು.

ADVERTISEMENT

ರಾಜರ ಗದ್ದುಗೆ ಆಗಮಿಸಿದ್ದ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಸುದ್ದಿಗಾರರ ಜೊತೆಗೆ ಮಾತನಾಡಿ, ‘ಕೊಡಗಿನ ಪರಂಪರೆಯನ್ನು ಸಾರುವ ಗದ್ದುಗೆಯ ರಕ್ಷಣೆ ಸರ್ಕಾರದ ಹೊಣೆಯಾಗಿದೆ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿ ಎಸ್. ಮಹೇಶ್ ಮಾತನಾಡಿ, ‘ಗದ್ದುಗೆ ಜಾಗವನ್ನು ಒತ್ತುವರಿ ಮಾಡಿಕೊಂಡ ಸುಮಾರು 28 ಕುಟುಂಬಗಳಿಗೆ ಪರ್ಯಾಯ ಜಾಗ ಕೊಟ್ಟು ತೆರವು ಮಾಡಬೇಕು ಎಂದು 2010ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಇದುವರೆಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ಹೇಳಿದರು.

ಗದ್ದುಗೆಯ ವ್ಯಾಪ್ತಿಗೆ ಒಳಪಟ್ಟು ಒತ್ತುವರಿಯಾಗಿರುವ ಜಾಗದಲ್ಲಿ ಸುಮಾರು 28 ಕುಟುಂಬಗಳು ನೆಲೆಸಿವೆ. ಯಾವುದೇ ದಾಖಲಾತಿಗಳು ಇಲ್ಲದಿದ್ದರೂ ಈ ನಿವಾಸಿಗಳಿಂದ ನಗರಸಭೆ ಕಂದಾಯ ಪಡೆದು, ನೀರು, ವಿದ್ಯುತ್, ರಸ್ತೆಗಳ ಸೌಲಭ್ಯ ಕಲ್ಪಿಸುತ್ತಿದೆ. ಇದರ ಬಗ್ಗೆಯೂ ವಿಚಾರಣೆ ಆಗಬೇಕು ಎಂದು ಮಹೇಶ್‌ ಆಗ್ರಹಿಸಿದರು.

ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶಿವಪ್ಪ, ಉಪಾಧ್ಯಕ್ಷ ಜಿ.ಎಂ ಕಾಂತರಾಜು, ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ವಿ. ಸಂದೀಪ್, ಎಸ್‌.ಎ.ಸುರೇಶ್, ಉದಯ ಕುಮಾರ್ ಹಾಜರಿದ್ದರು.

ಪರ್ಯಾಯ ಸ್ಥಳ ಕಲ್ಪಿಸದ ಸರ್ಕಾರ: ಆರೋಪ

ಮಡಿಕೇರಿ: ಒತ್ತುವರಿದಾರರ ಪರ ವಕೀಲ ಕೆ.ಆರ್.ವಿದ್ಯಾದರ ಸಹ ಸ್ಥಳಕ್ಕೆ ಬಂದು ಚರ್ಚಿಸಿದರು.

ಬಳಿಕ ಮಾತನಾಡಿದ ವಿದ್ಯಾದರ ಅವರು, ನ್ಯಾಯಾಲಯವು 19.88 ಎಕರೆ ಸಂರಕ್ಷಣೆ ಸ್ಮಾರಕ ಎಂದು ಘೋಷಣೆ ಮಾಡಿದೆ. ಆದರೆ, ಘೋಷಣೆಗೂ ಮೊದಲೇ ಇಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದವು ಎಂದು ಹೇಳಿದರು.

ಇಲ್ಲಿನ ಮೂಲ ನಿವಾಸಿಗಳ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗಿತ್ತು. ಹೈಕೋರ್ಟ್ ಆದೇಶದಂತೆ ಒತ್ತುವರಿ ತೆರವುಗೊಳಿಸುವ ಮೊದಲು ನಿವಾಸಿಗಳಿಗೆ ಪರ್ಯಾಯ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಬೇಕಾಗಿತ್ತು. ಆದರೆ, ಇದ್ಯಾವ ಕ್ರಮಗಳು ಸರ್ಕಾರದ ಮಟ್ಟದಲ್ಲಿ ಆಗಿಲ್ಲ ಎಂದು ಪ್ರತಿಪಾದಿಸಿದರು.

ಸ್ಮಾರಕವಿರುವ ಜಾಗದಲ್ಲಿ ಸ್ಮಾರಕಕ್ಕೆ ಧಕ್ಕೆ ಆಗದಂತೆ ನಿವಾಸಿಗಳು ವಾಸಿಸುತ್ತಿದ್ದಾರೆ. ಇನ್ನು ಮುಂದೆಯೂ ವಾಸಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.