ADVERTISEMENT

ನಾಪೋಕ್ಲು| ಸಹಬಾಳ್ವೆ, ಜೀವನ ಪದ್ಧತಿಯೇ ಹಿಂದುತ್ವ: ಶರಣ್ ಪಂಪ್‌ವೆಲ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:52 IST
Last Updated 2 ಮಾರ್ಚ್ 2026, 4:52 IST
ನಾಪೋಕ್ಲು ಸಮೀಪದ ಚೆಯ್ಯಂಡಾಣೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿದರು
ನಾಪೋಕ್ಲು ಸಮೀಪದ ಚೆಯ್ಯಂಡಾಣೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿದರು   

ನಾಪೋಕ್ಲು: ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಇರುವುದೇ ದೇಶಕ್ಕಾಗಿ, ಹಿಂದೂ ಸಮಾಜಕ್ಕಾಗಿ’ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.

ಸಮೀಪದ ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನಾ ಸಮಿತಿಯ ಮಂಡಲದಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಳ್ಳಿ, ಗ್ರಾಮ, ನಗರಗಳಲ್ಲಿ ಈ ರೀತಿಯ ಹಿಂದೂ ಸಂಘಟನಾ ಮುಖಾಂತರ ಆ ಭಾಗದ ಹಿಂದೂಗಳನ್ನು ಸೇರಿಸಿಕೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯ, ನಾಗರಿಕತೆ, ಪರಂಪರೆ ಸ್ಮರಣೆ ಮಾಡಬೇಕಿದೆ ಎಂದರು.

ADVERTISEMENT

ಯುವ ಪೀಳಿಗೆಗೆ ನಮ್ಮ ಚಿಂತನೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹಿಂದೂ ಸಂಗಮ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 3000ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿದೆ. ಹಿಂದುತ್ವ ಎನ್ನುವುದು ಜೀವನ ಪದ್ಧತಿ, ಸಹಬಾಳ್ವೆಯಿಂದ ಯಾವುದೇ ಧರ್ಮ ಭೇದವಿಲ್ಲದೆ ಸೌಹಾರ್ದತೆಯಿಂದ ಕೂಡಿರಬೇಕು. ನಾವು ಜಗತ್ತಿನಲ್ಲಿ ಶಾಂತಿ ಸಹಬಾಳ್ವೆಯ ಸಂದೇಶ ಕೊಡುವವರು. ಜಗತ್ತಿಗೆ ಬೆಳಕು ಕೊಟ್ಟವರು. ಅದಕ್ಕೆ ಜಗತ್ತು ಭಾರತವನ್ನು ಒಪ್ಪಿಕೊಳ್ಳುತ್ತಿದೆ ಎಂದು ತಿಳಿಸಿದರು.

ಚೆಯ್ಯಂಡಾಣೆ ಹಿಂದೂ ಸಂಗಮ ಮಂಡಲ ಅಧ್ಯಕ್ಷ ಪೋಕ್ಕೊಳಂಡ್ರ ಧನೋಜ್ ಮಾತನಾಡಿ, ಮುಂದಿನ ಯುವ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಸಂದೇಶ ಸಾರಿದ್ದಾರೆ ಎಂದರು.

ಸ್ಥಳೀಯ ಸಮಾಜ ಸೇವಕಿ ಬಾಚಬಂಡ ಅನುಪಮಾ ಕಿಶೋರ್ ಮಾತನಾಡಿದರು. ಬಿಜೆಪಿ ಮುಖಂಡರಾದ ಕೆ.ಜಿ.ಬೋಪಯ್ಯ, ತಳೂರು ಕಿಶೋರ್ ಕುಮಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುದಿಯೋಕ್ಕಡ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಬಿದ್ದಂಡ ರಾಜೇಶ್ ಅಚ್ಚಯ್ಯ, ಚೇನಂಡ ಸಂಪ, ಐತಿಚಂಡ ಭೀಮಯ್ಯ, ಬಿಳಿಯಂಡ್ರ ಪ್ರಸಾದ್, ಹಿಂದೂ ಸಂಗಮ ಮಂಡಲದ ಪದಾಧಿಕಾರಿಗಳು ಇದ್ದರು

ಸಮಾರಂಭಕ್ಕೂ ಮುನ್ನ ಅದ್ದೂರಿ ಶೋಭಾಯಾತ್ರೆ ನಡೆಯಿತು. ಭಾರತಾಂಬೆ ಭಾವಚಿತ್ರ ಒಳಗೊಂಡ ವಾಹನ, ಕಳಶ ಹೊತ್ತ ಮಹಿಳೆಯರು, ವಿವಿಧ ವೇಷಧಾರಿ ಮಕ್ಕಳು, ಕೊಡಗಿನ ವಾಲಗ, ದೇಶಭಕ್ತಿ ಸಾರುವ ಪೋಸ್ಟರ್, ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗು ಹೆಚ್ಚಿಸಿದವು. ಹಿಂದೂ ಬಾಂಧವರು ಕೇಸರಿ ಬಾವುಟ ಹಿಡಿದು ಸಾಗಿದರು.

ನಾಪೋಕ್ಲು ಸಮೀಪದ ಚೆಯ್ಯಂಡಾಣೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು

‘ಅಸ್ತಿತ್ವಕ್ಕೆ ಧಕ್ಕೆ: ಪ್ರತಿಭಟಿಸಿ’

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ಮಾತನಾಡಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ನಾವು ಪ್ರತಿಭಟಿಸಬೇಕು. ಪ್ರತಿಭಟಿಸದಿದ್ದರೆ ಪ್ರಯೋಜನವಿಲ್ಲ. ಯಾರಿಗೆ ಕಣ್ಣಿಲ್ಲ ಅವರಿಗೆ ಕನ್ನಡಿ ಕೊಟ್ಟು ಪ್ರಯೋಜನವಿಲ್ಲ. ನೂರು ವರ್ಷದಿಂದ ನಮ್ಮ ದೇಶ ಮಣ್ಣಿನ ರಕ್ಷಣೆಗಾಗಿ ಸ್ವಯಂಸೇವಕ ಸಂಘ ಸೇವೆ ಸಲ್ಲಿಸುತ್ತಾ ಬಂದಿದೆ. ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಿ. ಸಾಮಾಜಿಕ ಸಾಮರ್ಥ್ಯಕ್ಕೆ ಒತ್ತು ನೀಡಬೇಕಾಗಿದೆ. ಗೋಮಾತೆಯ ರಕ್ಷಣೆ ಮಾಡಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.