ADVERTISEMENT

ಮೇ 16ರಿಂದ ಡಿ.ಶಿವಪ್ಪ ಸ್ಮಾರಕ ಗೋಲ್ಡ್ ಕಪ್ ಫುಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ಮೇ 2025, 13:19 IST
Last Updated 13 ಮೇ 2025, 13:19 IST
   

ಮಡಿಕೇರಿ: ಸುಂಟಿಕೊಪ್ಪದ ಸರ್ಕಾರಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ 26ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್‌ ಟೂರ್ನಿ ಮೇ 16ರಿಂದ 25ರವರೆಗೆ ನಡೆಯಲಿದೆ.

‘ನಾಕೌಟ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ 25 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಮೊದಲ ಬಹುಮಾನವಾಗಿ ಡಿ.ವಿನೋದ್ ಶಿವಪ್ಪ ಮತ್ತು ಅವರ ಪುತ್ರ ವಿಶಾಲ್ ಶಿವಪ್ಪ ಅವರು ಡಿ.ಶಿವಪ್ಪ ಸ್ಮರಣಾರ್ಥವಾಗಿ ₹ 1 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ₹ 50 ಸಾವಿರ ನಗದು ಮತ್ತು ಟ್ರೋಫಿ ಜೊತೆಗೆ ವೈಯಕ್ತಿಕ ಬಹುಮಾನವನ್ನು ನೀಡಲಿದ್ದಾರೆ’ ಎಂದು ಸಂಘದ ಅಧ್ಯಕ್ಷ ಕೆ.ಎಂ.ಆಲಿಕುಟ್ಟಿ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ನಿತ್ಯ ಮಧ್ಯಾಹ್ನ 3 ಗಂಟೆಯಿಂದ 2 ಪಂದ್ಯಗಳು ನಡೆಯಲಿವೆ. ಭಾನುವಾರ 3 ಪಂದ್ಯಗಳು ನಡೆಯಲಿವೆ. ಮೇ 24ರಂದು ಸೆಮಿಫೈನಲ್‌ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಕೊಡಗಿನ ಕೊಲ್ಕೋತ್ತಾ’ ಎಂದೇ ಖ್ಯಾತವಾದ ಸುಂಟಿಕೊಪ್ಪ ಫುಟ್‌ಬಾಲ್‌ ಟೂರ್ನಿಯಲ್ಲಿ ರಾಜ್ಯದಲ್ಲೆ ಪ್ರಸಿದ್ಧಿ ಪಡೆದಿದೆ. ಫುಟ್‌ಬಾಲ್ ಆಟಗಾರರನ್ನು ಪ್ರೋತ್ಸಾಹಿಸಲು 38 ವರ್ಷದ ಹಿಂದೆ ಸುಂಟಿಕೊಪ್ಪದಲ್ಲಿ ಸ್ಥಾಪನೆಯಾದ ಬ್ಲೂ ಬಾಯ್ಸ್ ಯುವಕ ಸಂಘ ಇದೀಗ ಮತ್ತೊಂದು ರಾಜ್ಯಮಟ್ಟದ ಟೂರ್ನಿಗೆ ಸಜ್ಜುಗೊಂಡಿದೆ’ ಎಂದರು.

ಸುಂಟಿಕೊಪ್ಪದಲ್ಲಿ ಫುಟ್‌ಬಾಲ್ ಟೂರ್ನಿಗೆ ಪ್ರೋತ್ಸಾಹ ನೀಡಿದವರಲ್ಲಿ ಬೆಟ್ಟಗೇರಿ ಎಸ್ಟೇಟ್ ಮಾಲೀಕರಾದ ದೊಡ್ಡಮನೆ ಶಿವಪ್ಪ ಪ್ರಮುಖರು. ಅವರ ಕಾಲಾನಂತರ ಶಿವಪ್ಪ ಅವರ ಪುತ್ರ ವಿನೋದ್ ಶಿವಪ್ಪ ತಮ್ಮ ತಂದೆ ಡಿ.ಶಿವಪ್ಪ ಸ್ಮರಣಾರ್ಥ ಬ್ಲೂಬಾಯ್ಸ್ ಯುವ ಸಂಘಕ್ಕೆ ಪ್ರತಿವರ್ಷ ಟ್ರೋಫಿ, ನಗದು ಬಹುಮಾನ ನೀಡುವ ಮೂಲಕ ಫುಟ್‌ಬಾಲ್ ಟೂರ್ನಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಸುಂಟಿಕೊಪ್ಪ ವ್ಯಾಪ್ತಿಯ ಅನೇಕ ದಾನಿಗಳು, ಪ್ರಾಯೋಜಕರು ಈ ಟೂರ್ನಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಸುಂಟಿಕೊಪ್ಪ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮನ್ ಮಾತನಾಡಿ, ‘ಮೇ 16ರಂದು ಮಧ್ಯಾಹ್ನ 3 ಗಂಟೆಗೆ ಟೂರ್ನಿಯಲ್ಲಿ ಕೊಡಗಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಮತ್ತು ಕುಶಾಲನಗರ ಉಪವಿಭಾಗದ ಡಿವೈಎಸ್‌ಪಿ ಪಿ.ಚಂದ್ರಶೇಖರ್ ಹಾಗೂ ಡಿ.ವಿಶಾಲ್ ಶಿವಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಬ್ಲೂ ಬಾಯ್ಸ್ ಯುವಕ ಸಂಘದ ಸದಸ್ಯರು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಂತ್ರಸ್ಥರಿಗೆ ನೆರವು ನೀಡಿದ್ದಾರೆ. ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತೀ ವರ್ಷ ಒಂದಲ್ಲ ಒಂದು ರೀತಿಯ ಕ್ರೀಡಾ ಚಟುವಟಿಕೆ, ರಾಷ್ಟ್ರೀಯ ಉತ್ಸವಗಳು ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಘದ ಸದಸ್ಯರಲ್ಲಿಯೇ ಅನೇಕರು ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಉಪಾಧ್ಯಕ್ಷ ಎನ್.ಎಸ್.ಆದಿಶೇಷ, ಸಹಕಾರ್ಯದರ್ಶಿ ಯು.ಎಂ.ಅನಿಲ್ ಕುಮಾರ್ ಭಾಗವಹಿಸಿದ್ದರು.

1996ರಿಂದ ಟೂರ್ನಿ ಆಯೋಜನೆ:

ಡಿ.ವಿನೋದ್ ಶಿವಪ್ಪ  ಪ್ಲಾಂಟರ್ ಹಾಗೂ ದಾನಿಗಳಾದ ಡಿ.ವಿನೋದ್ ಶಿವಪ್ಪ ಮಾತನಾಡಿ ‘1996ರಿಂದ ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿರುವ ಬ್ಲೂ ಬಾಯ್ಸ್ ಯುವಕ ಸಂಘವು ಮಕ್ಕಳಿಂದ ಹಿರಿಯವರೆಗೆ ಫುಟ್‌ಬಾಲ್ ಕ್ರೀಡೆಯತ್ತ ಸೆಳೆಯುತ್ತಿದೆ. ಪ್ರತೀ ವರ್ಷವೂ ಈ ಟೂರ್ನಿಯನ್ನು ಸಾವಿರಾರು ಮಂದಿ ವೀಕ್ಷಿಸುತ್ತಿದ್ದಾರೆ’ ಎಂದು ಹೇಳಿದರು. ಈ ಬಾರಿ ಬೆಂಗಳೂರು ತಮಿಳುನಾಡು ಮಂಡ್ಯ ಮೈಸೂರು ಕೇರಳದ ಕಲ್ಲಿಕೋಟೆ ಮಂಗಳೂರು ಕೂತುಪರಂಬ ಕಣ್ಣೂರು ಕುಂಬಳೆ ಉಪ್ಪಳ ಊಟಿ ತಿರುಚ್ಚಿ ಕೆಜಿಎಫ್‌ನ ವಾರಿಯರ್ಸ್ ಫುಟ್ಬಾಲ್ ಕ್ಲಬ್ ಬೈಲಕುಪ್ಪ ಕೊಡಗಿನ ಪ್ರತಿಷ್ಠಿತ ತಂಡಗಳಾದ ಕುಶಾಲನಗರ ಮಿಡ್ ಸಿಟಿ ಪನ್ಯ ಬೆಟ್ಟಗೇರಿ ಗೋಣಿಕೊಪ್ಪ ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ ಗದ್ದೆಹಳ್ಳದ ಎಮಿಟಿ ತಂಡಗಳೂ ಸೇರಿದಂತೆ ಅತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ್ ಯೂತ್ ತಂಡವೂ ಪಾಲ್ಗೊಳ್ಳಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.