
ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ನಡೆದವು.
ಸಮೀಪದ ಕೊಡಗರಹಳ್ಳಿಯ ಬೈತೂರಪ್ಪ ಪೊವ್ಚದಿ ಬಸವೇಶ್ವರ ದೇವಾಲಯದಲ್ಲಿ ಬೈತೂರಪ್ಪ ಭಜನಾ ಮಂಡಳಿಯಿಂದ ನಡೆಸಲಾದ ಶಿವರಾತ್ರಿ ಹಬ್ಬದ ಪೂಜಾ ಕಾರ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಎಲ್ಲ ಧರ್ಮಿಯರು ಭಾಗವಹಿಸಿ ಸಾಮರಸ್ಯ ಮೆರೆದರು.
ಭಜನಾ ಮಂಡಳಿಯಿಂದ ಸಂಜೆ 5 ಗಂಟೆಗೆ ಕೊಡಗರಹಳ್ಳಿ ಜಂಕ್ಷನ್‌ನಿಂದ ದೇವಾಲಯದವರೆ ಚಂಡೆವಾದ್ಯದೊಂದಿಗೆ ಮಹಿಳೆಯರು ಕಳಶದೊಂದಿಗೆ ಮೆರವಣಿಗೆ ಸಾಗಿದರು. ರಾತ್ರಿ 7 ರವರೆಗೂ ಸುದೀರ್ಘವಾದ ಮಕ್ಕಳ ಭಜನಾ ಕಾರ್ಯಕ್ರಮಗಳು ನಡೆದವು.
ನಂತರ ಬೈತೂರಪ್ಪ, ಪೊವ್ಚದಿ ದೇವರಿಗೆ ಮಹಾಪೂಜೆ, ಮಹಾಮಂಗಳಾರತಿ ನಡೆದವು. ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿತು.
ನೃತ್ಯರೂಪಕ, ಗರಗಂದೂರಿನ ಅಭಿಜಿತ್ ಗೀತಗಾಯನ, ಕಲಾವಿದ ವಿಶಾಲ್ ಸುವರ್ಣ ನಿರ್ದೇಶನದ ಕಾಳ ರಾತ್ರಿ ಎಂಬ ಕಾಲ್ಪನಿಕ ನಾಟಕ ನಡೆಯಿತು.
ಸಮಿತಿಯ ನೀತಾ, ಹರೀಶ್, ಶಿವಪ್ರಸಾದ್, ಪದ್ಮ, ಸುನಿತಾ, ಜಲಜಾ, ರಾಜೇಂದ್ರ ಉಪಸ್ಥಿತರಿದ್ದರು.
ದೀಪರಾಧನೆ ಸಮೀಪದ ಕೆದಕಲ್‌ನ ಏಳನೇ ಮೈಲು ಮಹಾದೇವ ಈಶ್ವರ ದೇವಾಲಯಲ್ಲಿ ಭಾನುವಾರ ಮಹಾಸಂಕಲ್ಪ ಗಂಗಾಪೂಜೆ ಗಣಪತಿ ಪೂಜೆ ಪುಣ್ಯಾಹ ನವಗ್ರಹ ಪೂಜೆ ಗಣಪತಿ ಹೋಮ ನವಗ್ರಹ ಹೋಮ ಪೂರ್ಣಾಹುತಿ ನಡೆಯಿತು. ನಂತರ ಮಹಾದೇವ ಈಶ್ವರನಿಗೆ ದೇವಾಲಯದ ಪ್ರಧಾನ ಅರ್ಚಕ ಅವಿನಾಶ್ ಆರಾದ್ಯ ನೇತೃತ್ವದಲ್ಲಿ ರುದ್ರಾಭಿಷೇಕ ನಡೆಯಿತು. ರಾತ್ರಿ ಬಿಲ್ವರ್ಚನೆ ದೀಪರಾಧನೆ ನಡೆಯಿತು. ಕಂಬಿಬಾಣೆ: ಕಂಬಿಬಾಣೆ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಾಲಯದಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು. ಪ್ರಧಾನ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ನಡೆಸಿದರು. ದೇವಾಲಯ ಸಮಿತಿ ಅಧ್ಯಕ್ಷ ಶಶಿಕಾಂತ್ ರೈ ಕಾರ್ಯದರ್ಶಿ ಗಣೇಶ್ ಖಜಾಂಜಿ ಅಜಿತ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ಜಯಂತ್ ರವಿ ಸುಬ್ರಯ ಚಿದಾನಂದ ಗಂಗಾಧರ ಮಂಜುನಾಥ್ ರೈ ಹಾಜರಿದ್ದರು. ಕೆದಕಲ್ ಭದ್ರಕಾಳಿ ನಾಕೂರು ಈಶ್ವರ ದೇವಾಲಯ ಮ್ಯಾಗಡೂರು ಈಶ್ವರ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆದವು.