ಕುಶಾಲನಗರ: ಜನರಲ್ಲಿ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ, ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಅರಿವಿನ ಗುರು ಸುತ್ತೂರು ಸಂಸ್ಥಾನದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಎಂದು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಚಿಕ್ಕಹೊಸೂರಿನ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗ್ರಾಮದ ಗಣಪತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ವಚನ ಸಾಹಿತ್ಯದ ವಾಸ್ತವಿಕ ಮತ್ತು ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ನಿರಂತರವಾಗಿ ತಲುಪಿಸುವ ಉದ್ದೇಶದಿಂದ 1986ರಲ್ಲಿ ಶರಣ ಸಾಹಿತ್ಯ ಪರಿಷತ್ತು ಆರಂಭಿಸಿ ನಾಡಿನಾದ್ಯಂತ ಶರಣರ ವಚನಗಳು ಹಾಗೂ ಚಿಂತನೆಗಳ ಹರಿವಿಗೆ ಮುನ್ನುಡಿ ಬರೆದರು ಎಂದರು.
ಕೂಡುಮಂಗಳೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳಲ್ಲಿ ವಚನಗಳ ಅರಿವಿನ ಉತ್ತಮ ಸಂಸ್ಕಾರಗಳನ್ನು ತುಂಬುವ ಮೂಲಕ ತಾಯಂದಿರು ಸಮಾಜದ ಮಹತ್ತರ ಬದಲಾವಣೆಗೆ ಕಾರಣರಾಗಬೇಕು ಎಂದರು.
ಕೊಪ್ಪ ಭಾರತಮಾತಾ ಪಿಯು ಕಾಲೇಜು ಉಪನ್ಯಾಸಕಿ ಮಮತಾ ಪ್ರವೀಣ್ ಮಾತನಾಡಿ, ರಾಜೇಂದ್ರ ಸ್ವಾಮೀಜಿ ಅವರ ಸಾಮಾಜಿಕ ಸೇವೆಗೆ ಮೈಸೂರು ರಾಜರು ರಾಜಗುರುತಿಲಕ ಎಂಬ ಬಿರುದು ನೀಡಿ ಗೌರವಿಸಿದರು ಎಂದರು.
ಈ ಸಂದರ್ಭ ವಕೀಲ ಸಿ.ಎಸ್.ಮಂಜುನಾಥ ಸ್ವಾಮಿ, ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಕುಶಾಲನಗರ ಅಕ್ಕನ ಬಳಗದ ಗೌರವ ಅಧ್ಯಕ್ಷೆ ವಿಜಯಪಾಲಾಕ್ಷ, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ರೇಣುಕಾಸ್ವಾಮಿ, ನಿವೃತ್ತ ಕಂದಾಯ ಅಧಿಕಾರಿ ಸೋಮಶೇಖರ್, ಗ್ರಾಮದ ಯಜಮಾನ ಪ್ರಭುಸ್ವಾಮಿ, ಲೇಖನಾ ಧರ್ಮೇಂದ್ರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.