ADVERTISEMENT

ಕುಶಾಲನಗರ| ಉತ್ಸವ ಮಂಟಪಗಳ ಶೋಭಾಯಾತ್ರೆ

ಸಡಗರದ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:27 IST
Last Updated 11 ಡಿಸೆಂಬರ್ 2019, 13:27 IST
ಶ್ರೀ ಆಂಜನೇಯ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು
ಶ್ರೀ ಆಂಜನೇಯ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು   

ಕುಶಾಲನಗರ: ಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿವಿಧ ಉತ್ಸವಗಳ ಮಂಟಪಗಳ ಶೋಭಾ ಯಾತ್ರೆ ಎಲ್ಲರ ಗಮನ ಸೆಳೆಯಿತು.

ಆಂಜನೇಯ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಶ್ರೀರಾಮಾಂಜನೇಯ ಉತ್ಸವದೊಂದಿಗೆ ಗುಡ್ಡೆಹೊಸೂರಿನ ವೀರಾಂಜನೇಯ ಆಚರಣಾ ಸಮಿತಿ, ಮಾದಾಪಟ್ಟಣ ಗ್ರಾಮದ ಶ್ರೀ ರಾಮದೂತ ಜಯಂತಿ ಆಚರಣಾ ಸಮಿತಿ, ಬೈಚನಹಳ್ಳಿಯ ಗೆಳೆಯರ ಬಳಗ, ಕುಶಾಲನಗರದ ಶ್ರೀರಾಮಾಂಜನೇಯ ಉತ್ಸವ ಸಮಿತಿ ಹಾಗೂ ಹಿಂದೂ ಜಾಗರಣಾ ವೇದಿಕೆ ಸಂಘಟನೆಗಳ ನೇತೃತ್ವದಲ್ಲಿ ವಿದ್ಯುತ್ ಅಲಂಕೃತ ಮಂಟಪಗಳು ಆಂಜನೇಯ ದೇವಾಲಯ ಬಳಿ ಸೇರಿ ನಂತರ ರಥಬೀದಿ ಮೂಲಕ ಹೊರಟು ಗಣಪತಿ ದೇವಾಲಯ ಮುಂಭಾಗದಿಂದ ಬೈಚನಹಳ್ಳಿ ಮಾರ್ಗವಾಗಿ ಮಡಿಕೇರಿ ರಸ್ತೆ ಪೆಟ್ರೋಲ್ ಬಂಕ್ ತನಕ ತೆರಳಿ ಸ್ವಸ್ಥಾನಗಳಿಗೆ ಮರಳಿದವು.

ADVERTISEMENT

ಮೆರವಣಿಗೆಯಲ್ಲಿ ಜೈ.ಜೈ ಹನುಮ, ಜೈ.ಜೈರಾಮ, ಜೈ.ಜೈ.ಸೀತೆ ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದರು. ಉತ್ಸವಗಳೊಂದಿಗೆ ಡೀಜೆ ಸೌಂಡ್ ಗೆ ಕಾರ್ಯಕರ್ತರು ಕುಣಿತು ಕುಪ್ಪಳಿಸಿದರು. ಮೆರವಣಿಗೆ ಸಂದರ್ಭ ಬಾಣಬಿರುಸುಗಳ ಪ್ರದರ್ಶನ ಕಣ್ಮನ ಸೆಳೆಯಿತು.

ಶೋಭಾಯಾತ್ರೆಯ ವೀಕ್ಷಣೆಗೆ ಪಟ್ಟಣ ಸೇರಿದಂತೆ ಇತರೆಡೆಗಳಿಂದ ಜನಸಾಗರವೇ ಹರಿದು ಬಂದಿತು. ವಿಶೇಷವಾಗಿ ಮುಸಲ್ಮಾನರು ಪಟ್ಟಣದ ಜಾಮಿಯ ಮಸೀದಿ ಮುಂಭಾಗ ತಂಪು ಪಾನೀಯ ವಿತರಣೆ ಮಾಡಿದರು.ದಶಮಂಟಪ ಸಮಿತಿ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಪ್ರವೀಣ್, ಶ್ರೀಕಾಂತ್, ಶಶಿಕುಮಾರ್, ಮಂಜುನಾಥ್ ಮತ್ತಿತರರು ಇದ್ದರು.

34ನೇ ವರ್ಷದ ಹನುಮ ಜಯಂತಿ: ಇಲ್ಲಿನ ರಥಬೀದಿಯಲ್ಲಿರುವ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀಆಂಜನೇಯ ದೇವಾಲಯ ಸೇವಾ ಸಮಿತಿ ಮತ್ತು ಶ್ರೀರಾಮಾಂಜನೇಯ ಉತ್ಸವ ಸಮಿತಿ ವತಿಯಿಂದ 34ನೇ ವರ್ಷದ ಹನುಮ ಜಯಂತಿಯ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಾಲಯದ ಪ್ರಧಾನ ಅರ್ಚಕ ಬಿ.ಎಸ್.ರಾಧಾಕೃಷ್ಣ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಹನುಮ ಜಯಂತಿಯ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು ದೇವಸ್ಥಾನದಲ್ಲಿ ಗಣಪತಿ ಹೋಮ ಹಾಗೂ ಪವಮಾನ ಹೋಮಗಳನ್ನು ನಡೆಸಲಾಯಿತು. ಬೆಳಿಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇದೇ ಸಂದರ್ಭ ವರ್ತಕರು ಪಾನಕ, ಮಜ್ಜಿಗೆ ವಿತರಿಸಿದರು.ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ರಾಮಾಂಜನೇಯ ಉತ್ಸವ ಸಮಿತಿ ಅಧ್ಯಕ್ಷ ವಿ.ಎಚ್.ಪ್ರಶಾಂತ್, ಉಪಾಧ್ಯಕ್ಷ ಕೆ.ವಿ.ಅನುದೀಪ್, ಕಾರ್ಯದರ್ಶಿ ನವನೀತ್ ಪೊನ್ನಟ್ಟಿ, ಸಹ ಕಾರ್ಯದರ್ಶಿ ಟಿ.ವಿನು, ಖಜಾಂಜಿ ಎಸ್.ಪ್ರವೀಣ್, ಸಂಚಾಲಕ ಕೆ.ಎನ್.ಚಂದ್ರಶೇಖರ್, ಸಹ ಸಂಚಾಲಕ ಎಲ್.ಹರೀಶ್, ನಿರ್ದೇಶಕರುಗಳು, ಮಾಜಿ ಅಧ್ಯಕ್ಷ ಪುಂಡಾರೀಕಾಕ್ಷ, ಮಾಜಿ ಕಾರ್ಯದರ್ಶಿ ರಾಜೀವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.