ಮಡಿಕೇರಿ: ‘ಬೆಳಕಿನ ದಸರೆ’ಯ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಹೊರಡುವ ಕಂಚಿಕಾಮಾಕ್ಷಮ್ಮ ಮತ್ತು ಮುತ್ತುಮಾರಿಯಮ್ಮ ಬಾಲಕ ಮಂಡಳಿಯ ಮಂಟಪ ಸಮಿತಿ ಈ ವರ್ಷ 62 ವರ್ಷಕ್ಕೆ ಕಾಲಿರಿಸುತ್ತಿದೆ.
ಈ ಬಾರಿ ‘ಪರಶುರಾಮನಿಂದ ಕಾರ್ತಿವೀರ ಅರ್ಜುನನ ಕಾಳಗ ಅನಾವರಣ’ ಎಂಬ ಕಥಾಪ್ರಸಂಗವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ.
ಮಂಟಪದಲ್ಲಿ ಒಟ್ಟು 21 ಕಾಲಾಕೃತಿಗಳಿರಲಿದ್ದು, ಎಲ್ಲ ಕಲಾಕೃತಿಗಳೂ ಮಡಿಕೇರಿಯಲ್ಲೇ ತಯಾರಾಗುತ್ತಿವೆ. ವಿಶೇಷ ಎಫೆಕ್ಟ್‌ಗಳು ಈ ಬಾರಿಯೂ ಇರಲಿವೆ. ಹೈದರಾಬಾದ್‌ನಿಂದ ಫೈರ್ ವರ್ಕ್ಸ್ ಬರಲಿದೆ. ಧ್ವನಿವರ್ಧಕ ಮತ್ತು ಸ್ಟುಡಿಯೊ ಸೆಟ್ಟಿಂಗ್ಸ್‌ಗಳು ಬೆಂಗಳೂರಿನಿಂದ ತರಿಸಲಾಗುತ್ತಿದೆ.
ಕಳೆದ ಬಾರಿ ಇದೇ ಮಂಟಪ ಸಮಿತಿಯು ‘ಸಿಂಧೂರ ಗಣಪತಿ’ ಕಥಾ ಪ್ರಸಂಗವನ್ನು ಪ್ರದರ್ಶನಕ್ಕೆ ಆಯ್ದುಕೊಂಡು ಜನಮನ್ನಣೆ ಗಳಿಸಿತ್ತು. ಇದಕ್ಕೂ ಹಿಂದಿನ ವರ್ಷಗಳಲ್ಲಿ ‘ಶಿವನಿಂದ ತ್ರಿಪುರಾಸುರರ ವಧಾ ಪ್ರಸಂಗ’ದ ಕಥಾವಸ್ತು, ಅದಕ್ಕೂ ಹಿಂದಿನ ವರ್ಷದಲ್ಲಿ ಗೋಮಹಾತ್ಮೆಯನ್ನು ಸಾರುವ ಮಂಟಪವನ್ನು ರೂಪಿಸಿ ಜನಮನಸೂರೆಗೊಂಡಿತ್ತು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಲೋಹಿತ್, ‘ಈ ಬಾರಿ ‘ಪರಶುರಾಮನಿಂದ ಕಾರ್ತಿವೀರ ಅರ್ಜುನನ ಕಾಳಗ ಅನಾವರಣ’ ಎಂಬ ಕಥಾವಸ್ತುವನ್ನು ಆಯ್ದುಕೊಂಡಿದ್ದು, ಉತ್ತಮ ಪ್ರದರ್ಶನವನ್ನು ನೀಡಲಿದ್ದೇವೆ’ ಎಂದು ತಿಳಿಸಿದರು.
ಈ ಬಾರಿ ನಡೆಯಲಿದೆ ‘ಪರಶಿವನಿಂದ ಜಲಂಧರನ ವಧೆ’ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಮಂಟಪ ಸಮಿತಿಯು ಈ ಬಾರಿ ತನ್ನ 52ನೇ ವರ್ಷದ ಮಂಟಪವನ್ನು ರೂಪಿಸುತ್ತಿದ್ದು ‘ಶಿವಪುರಾಣದ ಆಯ್ದ ಕಥಾ ಭಾಗ ಪರಶಿವನಿಂದ ಜಲಂಧರನ ವಧೆ’ ಪ್ರಸಂಗವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ. ಇದಕ್ಕಾಗಿ ಮೈಸೂರು ಸಮೀಪದ ಉದ್ಬೂರಿನಲ್ಲಿ ಮಹದೇವಪ್ಪ ಮತ್ತು ಸನ್ಸ್ ತಂಡದವರು 22 ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ದಿಂಡಿಗಲ್‌ನಿಂದ ಪ್ರಭಾವಳಿ ಬರುತ್ತಿದೆ. ಸಮಿತಿ ಸದಸ್ಯರೇ ಚಲನವಲನ ನೀಡುತ್ತಿದ್ದಾರೆ. ಮಂಗಳೂರಿನಿಂದ ಧ್ವನಿವರ್ಧಕ ತರಿಸಲಾಗುತ್ತಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು ಮಂಟಪದ ಗಾತ್ರವನ್ನು ಕಡಿಮೆ ಮಾಡುವ ಉದ್ದೇಶ ಇದೆ ಎಂದು ಸಮಿತಿ ಅಧ್ಯಕ್ಷ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರದರ್ಶನದಲ್ಲಿ ಈ ಬಾರಿ ಹಲವು ಬದಲಾವಣೆಗಳನ್ನು ಸಮಿತಿ ತಂದಿರುವುದು ವಿಶೇಷ. ಇದುವರೆಗೂ ನಗರಸಭೆ ಮುಂಭಾಗ ತೀರ್ಪುಗಾರಿಕೆ ನಡೆಯುತ್ತಿತ್ತು. ಅಲ್ಲಿ ಒಟ್ಟಿಗೆ 3–4 ಮಂಟಪಗಳು ಬರುವುದರಿಂದ ಜನಸಂದಣಿ ಅಧಿಕವಾಗಲಿದೆ. ಹಾಗಾಗಿ ರಾಜಾಸೀಟ್ ಸಮೀಪವೇ ಈ ಮಂಟಪದ ತೀರ್ಪುಗಾರಿಕೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಮಂಟಪವನ್ನು ಕೊಡಗಿನ ವಾಲಗ ತಂಡ ಮುನ್ನಡೆಸುತ್ತಿರುವುದು ಮತ್ತೂ ವಿಶೇಷ ಎನಿಸಿದೆ. ಕಳೆದ ವರ್ಷ ಈ ಸಮಿತಿಯು ‘ಕದಂಬ ಕೌಶಿಕೆ’ ಹಾಗೂ ಅದಕ್ಕೂ ಹಿಂದೆ ‘ಅಂಧಕಾಸುರ ವಧೆ’ ಪ್ರಸಂಗವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿ ಜನಮನಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.