ADVERTISEMENT

ಹಾರಂಗಿ ಮಡಿಲಲ್ಲೇ ಬರ: ನೀರಿನ ಪ್ರಮಾಣ ಗಣನೀಯ ಕುಸಿತ

ರಘು ಹೆಬ್ಬಾಲೆ
Published 10 ಏಪ್ರಿಲ್ 2023, 19:30 IST
Last Updated 10 ಏಪ್ರಿಲ್ 2023, 19:30 IST
ಹಾರಂಗಿ‌ ಜಲಾಶಯದಲ್ಲಿ ನೀರಿನ ಸಂಗ್ರಹ ಕ್ಷೀಣಿಸಿರುವ ದೃಶ್ಯ
ಹಾರಂಗಿ‌ ಜಲಾಶಯದಲ್ಲಿ ನೀರಿನ ಸಂಗ್ರಹ ಕ್ಷೀಣಿಸಿರುವ ದೃಶ್ಯ   

ಕುಶಾಲನಗರ: ಉತ್ತರ ಕೊಡಗಿನ ರೈತರ ಜೀವನಾಡಿ ಹಾರಂಗಿ ಜಲಾಶಯದ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಕುಸಿತ ಕಂಡು ಬಂದಿದೆ. ಇದರಿಂದ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.

ಕಾವೇರಿ ನದಿಯ ಉಪನದಿಯಾದ ಹಾರಂಗಿಗೆ ಒಣಭೂಮಿಯನ್ನು ಕೃಷಿಯೋಗ್ಯ ನೀರಾವರಿ ಭೂಮಿ ಯನ್ನಾಗಿ ಪರಿವರ್ತಿಸಿ ರೈತರ ಬದುಕನ್ನು ಹಸನುಗೊಳಿಸುವ ಉದ್ದೇಶದಿಂದ 4 ದಶಕಗಳ ಹಿಂದೆಯೇ ಜಲಾಶಯ ನಿರ್ಮಾಣ ಮಾಡಲಾಗಿತ್ತು.

ಜಲಾಶಯದ ನೀರನ್ನು ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರು ಸೇರಿ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು ಹಾಗೂ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕಿನ ಸುಮಾರು 1.5 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಗೆ ನೀರು ಒದಗಿಸಲಾಗುತ್ತಿದೆ.

ADVERTISEMENT

ಕಳೆದ ಕೆಲವು ವರ್ಷಗಳಿಂದ ಹಾರಂಗಿ‌ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆಯ ನೀರನ್ನು ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಗ್ರಹಕ್ಕೆ ಅವಕಾಶ ನೀಡುತ್ತಿಲ್ಲ. ಜಲಾಶಯದ ಮುಕ್ಕಾಲು ಭಾಗ ತುಂಬುತ್ತಿದ್ದ ನೀರನ್ನು ಕೆಆರ್‌ಎಸ್ ಜಲಾಶಯದ‌ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತದೆ.

2.859 ಗರಿಷ್ಠ ಅಡಿಯ ಈ ಜಲಾಶಯದಲ್ಲಿ ಭಾನುವಾರ 2,821.88 ಅಡಿಗಳಷ್ಟು ನೀರಿತ್ತು. ಆದರೆ, ಕಳೆದ ವರ್ಷ ಇದೇ ಸಮಯದಲ್ಲಿ 2,848.48 ಅಡಿಯಷ್ಟು ನೀರು ಸಂಗ್ರಹ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 26.06 ಅಡಿಗಳಷ್ಟು ನೀರು ಕಡಿಮೆ ಇದೆ. ಗರಿಷ್ಠ 8.5 ಟಿಎಂಸಿ ನೀರಿನಲ್ಲಿ 2.9 ಟಿಎಂಸಿಯಷ್ಟು ನೀರು ಮಾತ್ರವೇ ಲಭ್ಯವಿದೆ. ಕಳೆದ ವರ್ಷ ಇದೇ ಸಮಯದಲ್ಲಿ 4.80 ಟಿಎಂಸಿ ನೀರು ಇತ್ತು. ಕಳೆದ ವರ್ಷ ಪೂರ್ವ ಮುಂಗಾರಿನಲ್ಲಿ ಸಮೃದ್ಧ ಮಳೆ ಬಿದ್ದ ಕಾರಣ ನೀರಿನ ಸಂಗ್ರಹ ಹೆಚ್ಚಿತ್ತು. ಆದರೆ, ಈ ವರ್ಷ ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿಲ್ಲದೇ ದಿನೇ ದಿನೇ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದೆ.

ಜಲಾಶಯಕ್ಕೆ ಕೇವಲ 60 ಕ್ಯುಸೆಕ್‌ ಒಳಹರಿವು ಇದೆ. ಜಲಾಶಯದಲ್ಲಿ ಸಂಗ್ರಹ ಇರುವ ನೀರನ್ನು ಕೃಷಿ ಚಟುವಟಿಕೆಗೆ ಪೂರೈಸಬಾರದು. ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಸೂಚನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಜಲಾಶಯದಿಂದ 50 ಕ್ಯುಸೆಕ್‌ ನೀರನ್ನು ನದಿಗೆ ಹಾಗೂ 50 ಕ್ಯುಸೆಕ್‌ ನೀರನ್ನು ಕಾಲುವೆ ಮೂಲಕ ಹರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಕೃಷಿಗೆ ನೀರು ಪೂರೈಸುವಂತೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಒತ್ತಾಯಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಬೇಸಿಗೆಯಲ್ಲಿ ಬೆಳೆಯಲಾಗುವ ಬೇಸಿಗೆ ಬೆಳೆಗಳಾದ ಜೋಳ, ರಾಗಿ, ದ್ವಿದಳ ಧಾನ್ಯ ಹಾಗೂ ಶುಂಠಿ ಬೇಸಾಯವನ್ನು ರೈತರು ಕೈಗೊಂಡಿದ್ದಾರೆ. ಆದರೆ, ಬಿತ್ತನೆ ಮಾಡಿದ ಬೆಳೆಗಳು ಕೂಡ ನೀರಿನ ಕೊರತೆಯಿಂದ ಒಣಗಿವೆ ಎಂದು ರೈತರು ಹೇಳುತ್ತಾರೆ.

ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬಹುತೇಕ ಕೆರೆಗಳು ಬತ್ತಿವೆ. ಜಾನುವಾರುಗಳಿಗೂ ನೀರಿಗಾಗಿ ತೊಂದರೆ ಉಂಟಾಗಿದೆ. ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಅಗತ್ಯ ಬಿದ್ದಲ್ಲಿ ಜನ, ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ನೀರು ಬಳಸಿಕೊಳ್ಳಲು ಮೀಸಲು ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟೆಯಿಂದ ಕೊಡಗು ಜಿಲ್ಲೆಯ ಅಚ್ಚುಕಟ್ಟು ಪ್ರದೇಶ ಸೇರಿ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಗಡಿಭಾಗದ ತನಕ ನೀರು ಹರಿಸಲಾಗುತ್ತಿತ್ತು. ಆದರೆ, ಈಚೆಗೆ ಅಣೆಕಟ್ಟೆಯಲ್ಲಿ ನೀರು ಕುಗ್ಗಿದ್ದು, ಬೇಸಿಗೆಗೆ ನೀರು ಹರಿಸಲಾಗುತ್ತಿಲ್ಲ.

***

ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಪೋಲಾಗದಂತೆ ಅಧಿಕಾರಿಗಳು ಎಚ್ಚರ ವಹಿಸುವ ಮೂಲಕ ರೈತರು ಕೈಗೊಂಡಿರುವ ಬೇಸಿಗೆ ಬೆಳೆಗೆ ನೀರು ಪೂರೈಸಬೇಕು.

- ಸುರೇಶ, ರೈತ, ಹುದುಗೂರು.

ಸಂಗ್ರಹವಿರುವ ನೀರನ್ನು ಜನ, ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನದಿ ಹಾಗೂ ಕಾಲುವೆ ಮೂಲಕ ತಲಾ 50 ಕ್ಯುಸೆಕ್‌ ನೀರನ್ನು ಹರಿಬಿಡಲಾಗುತ್ತಿದೆ.

- ಪುಟ್ಟಸ್ವಾಮಿ, ಎಇಇ, ನೀರಾವರಿ ಇಲಾಖೆ, ಹಾರಂಗಿ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.