ಮಡಿಕೇರಿ: ತಾಲ್ಲೂಕಿನ ಮದೆನಾಡು ಗ್ರಾಮದ ಬಿ.ಸಿ.ಕೀರ್ತಿಕುಮಾರ್ ಹಾಗೂ ರೇಣುಕಾ ಅವರ ಪುತ್ರಿ ಬಿಜಿಎಸ್ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಬಿ.ಕೆ.ಸಿಂಚನಾ ಡಿಂಬಾಸನವನ್ನು 30 ನಿಮಿಷ 5 ಸೆಕೆಂಡ್‌ಗಳ ಕಾಲ ಪ್ರದರ್ಶಿಸುವ ಮೂಲಕ ಗಿನ್ನಿಸ್ ದಾಖಲೆಯ ಕದ ತಟ್ಟಿದಳು.
ಡಿಂಬಾಸನದಲ್ಲಿ 30 ನಿಮಿಷ 3 ಸೆಕೆಂಡ್‌ಗಳ ಕಾಲ ಇರುವ ದಾಖಲೆ ಆಸ್ಟ್ರೀಯಾದ 32 ವರ್ಷದ ಸ್ಚೇಫಿನಿ ಮಿಲಿಂಗರ್ ಎಂಬ ಯೋಗಪಟು ಹೆಸರಿನಲ್ಲಿದೆ. ಸಿಂಚನಾ ಇದೀಗ ಈ ದಾಖಲೆಯನ್ನು ಮುರಿದಿದ್ದು, ಇನ್ನು ಗಿನ್ನಿಸ್‌ನಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ದಾಖಲೆ ಮುರಿಯುವ ಕುರಿತು ಸಿಂಚನಾ ಹಾಕಿದ್ದ ಅರ್ಜಿಯನ್ನು ಗಿನ್ನಿಸ್ ಸಂಸ್ಥೆ ಅಂಗೀಕರಿಸಿತ್ತು. ಗಿನ್ನಿಸ್‌ನ ನಿಯಮಾವಳಿ ಪ್ರಕಾರವೇ ಸಾರ್ವಜನಿಕವಾಗಿ ಈ ದಾಖಲೆಯನ್ನು ಮುರಿಯುವ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಮಾತ್ರವಲ್ಲ, ದಾಖಲೆ ಮುರಿಯುವ ವಿಡಿಯೊವನ್ನೂ ಚಿತ್ರೀಕರಿಸಿಕೊಳ್ಳಲಾಯಿತು.
ಈ ಎಲ್ಲ ಘಟನೆಗಳು ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಕೊಡಗು ಪತ್ರಕರ್ತರ ಸಂಘವು ಇಲ್ಲಿನ ಪತ್ರಿಕಾಭವನದಲ್ಲಿ ವಿಶ್ವ ಯೋಗ ದಿನವಾದ ಶನಿವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಡು ಬಂತು. ಸಿಂಚನಾಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗ ಗುರು ಕೆ.ಕೆ.ಮಹೇಶ್‌ಕುಮಾರ್, ‘ಡಿಂಬಾಸನ ಎನ್ನುವುದು ಚಕ್ರಾಸನದ ಮುಂದುವರೆದ ಭಾಗವೇ ಆಗಿದೆ. ಈ ಆಸನ ಪ್ರಶಾಂತ ಚಿತ್ತತೆಗೆ ಮತ್ತು ಬೆನ್ನುಹುರಿ, ಕಾಲು, ಸೊಂಟದ ಭಾಗದ ಕೀಲುಗಳ ಆರೋಗ್ಯಕ್ಕೆ ಅತ್ಯಂತ ಪೂರಕವಾದುದು’ ಎಂದು ಹೇಳಿದರು.
ಮದೆ ಮಹೇಶ್ವರ ಶಾಲೆಯ ನಿವೃತ್ತ ಪ್ರಾಂಶುಪಾಲ ಬಿ.ಆರ್.ಜೋಯಪ್ಪ ಅವರು ಸಿಂಚನಾ ಅವರ ಯೋಗಸಾಧನೆಯ ಕುರಿತು ಕವನವೊಂದನ್ನು ವಾಚಿಸಿ ಗಮನ ಸೆಳೆದರು.
ಸಾಹಿತಿ ಸುಬ್ರಾಯ ಸಂಪಾಜೆ ಅವರು ಬಿ.ಆರ್. ಜೋಯಪ್ಪ ಅವರು ಬರೆದ ಕವನ ‘ಸಿಂಚನ’ಕ್ಕೆ ರಾಗ ಮತ್ತು ಭಾವ ತುಂಬಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಸಿಂಚನಾಳ ತಾಯಿ ರೇಣುಕಾ ಮಾತನಾಡಿ, ‘ಗಿನ್ನಿಸ್ ವಿಶ್ವ ದಾಖಲೆಯ ಪ್ರಯತ್ನವನ್ನು ಮಗಳು ಸಿಂಚನ ನಡೆಸಿ ಯಶಸ್ವಿಯಾಗಿರುವುದು ಸಂತಸವನ್ನು ತಂದಿದೆ. ಯೋಗ ಕೇವಲ ಪ್ರದರ್ಶನಕ್ಕಷ್ಟೆ ಸೀಮಿತವಾಗಬಾರದು. ಆರೋಗ್ಯಕ್ಕಾಗಿ ಯೋಗ ಮಾಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಚ್.ಟಿ.ಅನಿಲ್ ಮಾತನಾಡಿ, ‘ಮದೆನಾಡಿನಂಥ ಕೊಡಗಿನ ಪುಟ್ಟ ಗ್ರಾಮದವಳಾದ ಸಿಂಚನಾ ಯೋಗದಲ್ಲಿ ತನಗೆ ಇರುವ ಆಸಕ್ತಿಯನ್ನು ಸಾಕಷ್ಟು ಯೋಗಭ್ಯಾಸದ ಮೂಲಕ ಮುಂದುವರೆಸಿಕೊಂಡು ಇಂದು ವಿಶ್ವದಾಖಲೆ ಮಾಡುವ ಹಂತಕ್ಕೆ ತಲುಪಿರುವುದು ನಾಡಿಗೇ ಹೆಮ್ಮೆ ತಂದಿದೆ’ ಎಂದು ಶ್ಲಾಘಿಸಿದರು.
ಉಪನ್ಯಾಸಕಿ ಕೆ.ಜಯಲಕ್ಷ್ಮಿ, ಯೋಗ ಪಟು ರಾಜೇಶ್ ಗುಪ್ತ,, ವಾಂಡರಸ್ಸ್ ಕ್ಲಬ್‌ನ ಬಾಬು ಸೋಮಯ್ಯ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಎಂ.ಧನಂಜಯ್, ಜಿ.ಆರ್.ರವಿಶಂಕರ್, ವಿಜಯಲಕ್ಷ್ಮಿ ಚೇತನ್, ಪತ್ರಕತ೯ರ ಸಂಘದ ಕ್ಷೇಮನಿಧಿಯ ಅಧ್ಯಕ್ಷ ಜಿ.ವಿ.ರವಿ ಕುಮಾರ್, ಕಾಯ೯ದಶಿ೯ ಅರುಣ್ ಕೂಗ್೯, ಸಂಘದ ಖಜಾಂಚಿ ಟಿ.ಕೆ. ಸಂತೋಷ್, ನಿದೇ೯ಶಕರಾದ ಹನೀಫ್, ಲಕ್ಷ್ಮೀಶ್, ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾಯದಶಿ೯ ಎಸ್.ಜಿ.ಉಮೇಶ್ , ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಷ್ ಭೂತನಕಾಡು, ನಿರ್ದೇಶಕ ಕುಡೆಕಲ್ ಸಂತೋಷ್ ಭಾಗವಹಿಸಿದ್ದರು.
ಬಾಲಕಿ ಸಿಂಚನಾಳ ಅರ್ಜಿಯನ್ನು ಅಂಗೀಕರಿಸಿರುವ ಗಿನ್ನಿಸ್ ಸಂಸ್ಥೆ ಗಿನ್ನಿಸ್‌ನ ನಿಯಮಾವಳಿಯಂತೆ ಕಾರ್ಯಕ್ರಮ ಆಯೋಜನೆ ದಾಖಲೆ ಮುರಿದ ವಿಡಿಯೊ ಚಿತ್ರೀಕರಣ
ದೀಪಾ ಭಾಸ್ತಿ ಸಾಹಿತ್ಯಿಕ ನೆಲೆಯಲ್ಲಿ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದರೆ ಪುಟಾಣಿ ಸಿಂಚನಾ ಯೋಗದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿರುವುದು ಸಂತಸ ಉಂಟು ಮಾಡಿದೆಸುಬ್ರಾಯ ಸಂಪಾಜೆ ಸಾಹಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.