ADVERTISEMENT

ಸೋಮವಾರಪೇಟೆ ಪ.ಪಂಚಾಯಿತಿ ಸಭೆಗೆ ಎಂಜಿನಿಯರ್‌ ಗೈರು: ಸಭೆಯಿಂದ ಹೊರನಡೆದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:17 IST
Last Updated 19 ಸೆಪ್ಟೆಂಬರ್ 2025, 4:17 IST
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ  ಸಭೆ ಗುರುವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಸಭೆಯನ್ನು ಬಹಿಷ್ಕರಿಸಿ ಕೆಲವು ಸದಸ್ಯರು ಹೊರ ನಡೆದರು 
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ  ಸಭೆ ಗುರುವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಸಭೆಯನ್ನು ಬಹಿಷ್ಕರಿಸಿ ಕೆಲವು ಸದಸ್ಯರು ಹೊರ ನಡೆದರು    

ಸೋಮವಾರಪೇಟೆ: ಪಟ್ಟಣದಲ್ಲಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಭೆಗಳಿಗೆ ಸತತವಾಗಿ ಎಂಜಿನಿಯರ್‌ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಸದಸ್ಯರು ಸಭೆ ಬಹಿಷ್ಕರಿಸಿದ ಘಟನೆ ಗುರುವಾರ ನಡೆಯಿತು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. 

‘ಕಾಮಗಾರಿಗೆ ಪ್ರಾರಂಭವಾದ ನಂತರ ಜನಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲು ಅನಾನುಕೂಲವಾಗಿದ್ದು, ಸಭೆಯ ಪ್ರಾರಂಭದಲ್ಲಿಯೇ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂದರ್ಭ ಇನ್ನೂ ಕುಡಿಯುವ ನೀರು ಸರಬರಾಜು ಮಾಡಲು ಗುತ್ತಿಗೆದಾರರಿಗೆ ಸಾಧ್ಯವಾಗಿಲ್ಲ. ಪೈಪ್ ಅಳವಡಿಸಲು ತೆಗೆದ ರಸ್ತೆಗಳ ಗುಂಡಿ ಮುಚ್ಚಿಲ್ಲ. ಇಂಟರ್ ಲಾಕ್ ತೆಗೆದು ಹಾಕಿ ಅದನ್ನು ಇನ್ನೂ ಅಳವಡಿಸಿಲ್ಲ. ರಸ್ತೆಗಳ ಗುಂಡಿ ಮುಚ್ಚದೆ ಅನೇಕ ಬೈಕ್ ಸವಾರರು ಬಿದ್ದಿದ್ದಾರೆ. ಸತತ ನಾಲ್ಕು ಸಭೆಗಳಿಗೆ ಎಂಜಿನಿಯರ್‌ ಗೈರು ಹಾಜರಾಗಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಪಂಚಾಯಿತಿ ಚುನಾವಣೆ ಘೋಷಣೆ ಆದರೆ ನೀತಿ ಸಂಹಿತೆ ಜಾರಿಯಾಗುತ್ತದೆ. ಏನೂ ಕೆಲಸ ಮಾಡಲು ಸಾಧ್ಯವಿಲ್ಲ.ವಾರ್ಡ್ ನಿವಾಸಿಗಳಿಗೆ ಯಾರು ಉತ್ತರ ನೀಡುತ್ತಾರೆ’ ಎಂದು ಆರೋಪಿಸಿದ ಸದಸ್ಯರಾದ ಜೀವನ್, ಮೃತ್ಯುಂಜಯ, ಶುಭಕರ್, ವಿನಿ ಮತ್ತು ಕಿರಣ್ ಉದಯಶಂಕರ್ ಸಭೆಯನ್ನು ಬಹಿಷ್ಕರಿಸಿ ಹೊರನಡೆಯಲು ಸಿದ್ದರಾದರು.

ADVERTISEMENT

ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲು ಸದಸ್ಯರಲ್ಲಿ ಮನವಿ ಮಾಡಿದ ಸಂದರ್ಭ ತೀವ್ರ ಮಾತಿನ ಚಕಮಕಿ ನಡೆಯಿತು. ಗದ್ದಲದ ಪರಿಸ್ಥಿತಿ ನಿರ್ಮಾಣವಾದಾಗ ‘ಅಧ್ಯಕ್ಷರೇ ಸಭೆಯನ್ನು ಬರಖಾಸ್ತುಗೊಳಿಸಲಾಗಿದೆ’ ಎಂದು ಹೇಳಿ ಸದಸ್ಯರು ಸಭೆಯಿಂದ ಹೊರ ನಡೆದರು.

ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಚರ್ಚೆಯ ಮೂಲಕ ಎಲ್ಲಾ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಮನವಿ ಮಾಡಿದರೂ ಕೆಲವು ಸದಸ್ಯರು ಸಭೆಯಿಂದ ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.